SUDDILIVE || SHIVAMOGGA
ಶಿವಮೊಗ್ಗದ ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ ನಿಧನ- Former MLA from Shivamogga H.M. Chandrashekarappa passes away
ಶಿವಮೊಗ್ಗ, ಜು. 26: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು, ಕರ್ನಾಟಕ ಮಾಜಿ ಶಾಸಕರ ವೇದಿಕೆಯ ಹಾಲಿ ರಾಜ್ಯಾಧ್ಯಕ್ಷರು ಹಾಗೂ ವೀರಶೈವ-ಲಿಂಗಾಯತ ಸಮಾಜದ ಹಿರಿಯ ಮುಖಂಡ ಶರಣ ಎಚ್.ಎಂ. ಚಂದ್ರಶೇಖರಪ್ಪ ಅವರು ಭಾನುವಾರ ಸಂಜೆ ಸುಮಾರು 6.15 ಗಂಟೆಗೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ, ಸಾಮಾಜಿಕ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ.
ಕುಟುಂಬದ ಮೂಲಗಳ ಪ್ರಕಾರ, ಸುಮಾರು 15 ದಿನಗಳ ಹಿಂದೆ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ (ಬ್ಲಡ್ ಕ್ಲಾಟ್) ಕಾಣಿಸಿಕೊಂಡಿತ್ತು. ನಂತರ ಅದು ದೇಹದ ಇತರೆ ಭಾಗಗಳಿಗೆ ವ್ಯಾಪಿಸಿ, ಅವರಿಗೆ ಸೌಮ್ಯ ಪಾರ್ಶ್ವವಾಯು (ಲೈಟ್ ಸ್ಟ್ರೋಕ್) ಉಂಟಾಗಿತ್ತು. ತಕ್ಷಣ ಅವರನ್ನು ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ 10 ರಿಂದ 12 ದಿನಗಳಿಂದ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆಸ್ಪತ್ರೆಯಲ್ಲಿ ಸುಮಾರು 15 ಮಂದಿ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿತ್ತು. ಚಿಕಿತ್ಸೆ ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದಿದ್ದರೂ, ಭಾನುವಾರ ಸಂಜೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.
ಎಚ್.ಎಂ. ಚಂದ್ರಶೇಖರಪ್ಪ ಅವರು 1999ರಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕರ್ನಾಟಕ ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೊತೆಗೆ ವೀರಶೈವ-ಲಿಂಗಾಯತ ಸಮಾಜದ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡಿದ್ದರು.
ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ
ಮೃತರ ಪಾರ್ಥಿವ ಶರೀರವನ್ನು ನಾಳೆ (ಜು. 27) ಬೆಳಗ್ಗೆ 9.30 ಗಂಟೆಯಿಂದ ಶಿವಮೊಗ್ಗ ನಗರದ ಬಸವನಗುಡಿ ಮುಖ್ಯ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ.
ಅದೇ ದಿನ ಸಂಜೆ 4 ಗಂಟೆಗೆ ಹೊಸಳ್ಳಿಯಲ್ಲಿರುವ ಅವರ ತೋಟದಲ್ಲಿ, ವೀರಶೈವ-ಲಿಂಗಾಯತ ಸಮಾಜದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನೆರವೇರಲಿವೆ.
ಎಚ್.ಎಂ. ಚಂದ್ರಶೇಖರಪ್ಪ ಅವರ ನಿಧನದಿಂದ ಶಿವಮೊಗ್ಗ ಜಿಲ್ಲೆಯ ರಾಜಕೀಯ, ಸಾಮಾಜಿಕ ಹಾಗೂ ಸಾರ್ವಜನಿಕ ವಲಯವು ಅನುಭವಸಂಪನ್ನ ನಾಯಕನನ್ನು ಕಳೆದುಕೊಂಡಂತಾಗಿದೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.

