SUDDILIVE || SHIVAMOGGA
ಅಶೋಕ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಎಫ್‌ಐಆರ್: ಮೂವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ-FIR registered in Ashok Grand Hotel suicide case: Three accused of abetment to suicide
ಶಿವಮೊಗ್ಗ, ಜು.31: ಶಿವಮೊಗ್ಗ ನಗರದ ಅಶೋಕ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಕ್ರಷರ್ ಉದ್ಯಮಿ ನವೀನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ಹಾಗೂ ಒಂದು ಸಂಸ್ಥೆ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 108ರಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಎಫ್‌ಐಆರ್ ಪ್ರಕಾರ, ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ನಿವಾಸಿಯಾಗಿದ್ದ 42 ವರ್ಷದ ನವೀನ್ ಕುಮಾರ್ ಅವರು ಜುಲೈ 26ರಂದು ಮಧ್ಯಾಹ್ನ ಗೋಕುಲಂ ಚಿಟ್ಸ್ ಫಂಡ್‌ನಿಂದ ಬಂದಿದ್ದ ನೋಟಿಸ್ ಕುರಿತು ವಿಚಾರಿಸಲು ಹೊರಟಿದ್ದರು. ರಾತ್ರಿ ತಡವಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಪತ್ನಿ ಹಾಲೇಶ್ವರಿ ಅವರು ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ದೊರಕಿರಲಿಲ್ಲ. ಇದೇ ವೇಳೆ ನವೀನ್ ಕುಮಾರ್ ಅವರ ಹೆಸರಿನಲ್ಲಿ ಅಶೋಕ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿರುವ ಸಂದೇಶ ಬಂದಿದ್ದು, ಅನುಮಾನಗೊಂಡ ಕುಟುಂಬಸ್ಥರು ಬೆಳಗಿನ ಜಾವ ಹೋಟೆಲ್‌ಗೆ ತೆರಳಿದ್ದಾರೆ. ಅಲ್ಲಿ ರೂಂ ನಂಬರ್ 203ರ ಬಾಗಿಲು ತೆರೆಯುತ್ತಿದ್ದಂತೆ ನವೀನ್ ಕುಮಾರ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ದೂರಿನಲ್ಲಿ ತಿಳಿಸಿರುವಂತೆ, ನವೀನ್ ಕುಮಾರ್ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ವೆಂಕಟೇಶ್ ಸಿ.ಡಿ. ಅವರ ಮಾಲೀಕತ್ವದ ಕಲ್ಲು ಕ್ರಷರ್ ಅನ್ನು ಪಾಲುದಾರರಾದ ಪ್ರಸನ್ನ ಬಾಲನ್ ಹಾಗೂ ಶಿವಕುಮಾರ್ ಅವರೊಂದಿಗೆ ಒಪ್ಪಂದದ ಆಧಾರದಲ್ಲಿ ನಡೆಸುತ್ತಿದ್ದರು. ಈ ವ್ಯವಹಾರಕ್ಕೆ ₹25 ಲಕ್ಷ ಮುಂಗಡ ಸೇರಿದಂತೆ ಸುಮಾರು ₹40 ಲಕ್ಷ ಹೂಡಿಕೆ ಮಾಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಸುಗಮವಾಗಿದ್ದರೂ, ಕಳೆದ ಎಂಟು ತಿಂಗಳಿಂದ ಕಲ್ಲಿನ ಸರಬರಾಜು ಸಮರ್ಪಕವಾಗಿ ಆಗದ ಕಾರಣ ಕ್ರಷರ್ ಕಾರ್ಯಾಚರಣೆ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದರಿಂದ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾಗಿ ಆರ್ಥಿಕ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿದೆ ಎಂದು ಉಲ್ಲೇಖಿಸಲಾಗಿದೆ.
ಇದರ ನಡುವೆ ಕ್ರಷರ್‌ಗೆ ಸರಬರಾಜು ಮಾಡಿದ್ದ ಕಲ್ಲು ಜಲ್ಲಿಗೆ ಸಂಬಂಧಿಸಿದ ಹಣವನ್ನು ಹೆಚ್.ಆರ್.ಜಿ. ವೆಂಕಟೇಶ್ ಬಾಬು ನೀಡದೇ ಸತಾಯಿಸುತ್ತಿದ್ದರು. ಮತ್ತೊಂದೆಡೆ, ವ್ಯವಹಾರ ಮುಂದುವರಿಸಲು ಗೋಕುಲಂ ಚಿಟ್ಸ್ ಫಂಡ್‌ನಿಂದ ಸಾಲ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕ್ರಷರ್ ಒಪ್ಪಂದ ಮುಕ್ತಾಯವಾದ ನಂತರವೂ ಮುಂಗಡವಾಗಿ ನೀಡಿದ್ದ ₹25 ಲಕ್ಷ ಹಣವನ್ನು ವೆಂಕಟೇಶ್ ಸಿ.ಡಿ. ಹಿಂದಿರುಗಿಸದೆ ವಿವಿಧ ಕಾರಣಗಳನ್ನು ಹೇಳುತ್ತಾ ವಿಳಂಬ ಮಾಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬೆಳವಣಿಗೆಗಳಿಂದ ನವೀನ್ ಕುಮಾರ್ ಅವರು ತಮ್ಮ ಪಾಲುದಾರರಾದ ಪ್ರಸನ್ನ ಬಾಲನ್ ಹಾಗೂ ಶಿವಕುಮಾರ್ ಅವರಿಗೆ ತಲಾ ಸುಮಾರು ₹12 ಲಕ್ಷ ಹಣವನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಸಾಲ ತೀರಿಸುವ ಉದ್ದೇಶದಿಂದ ತಮ್ಮ ಮನೆಯನ್ನೇ ಮಾರಾಟ ಮಾಡುವ ಕುರಿತು ಕುಟುಂಬದವರೊಂದಿಗೆ ಚರ್ಚೆ ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಚಿಟ್ಸ್ ಸಂಸ್ಥೆಯ ಸಾಲದ ಒತ್ತಡ, ಬಾಕಿ ಹಣ ವಾಪಸ್ ಸಿಗದಿರುವುದು ಹಾಗೂ ನಿರಂತರ ಆರ್ಥಿಕ ಒತ್ತಡದಿಂದ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ. ಇದೇ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೃತರ ಪತ್ನಿಯ ದೂರಿನ ಆಧಾರದ ಮೇಲೆ ವೆಂಕಟೇಶ್ ಸಿ.ಡಿ., ಹೆಚ್.ಆರ್.ಜಿ. ವೆಂಕಟೇಶ್ ಹಾಗೂ ಗೋಕುಲಂ ಚಿಟ್ಸ್ ಫಂಡ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಪೊಲೀಸರು, ಆತ್ಮಹತ್ಯೆಗೆ ಕಾರಣವಾದ ಆರ್ಥಿಕ ವ್ಯವಹಾರಗಳು, ಹಣಕಾಸಿನ ಒತ್ತಡ ಹಾಗೂ ಆರೋಪಿತರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

