ಹೂವಿನ ಮಾರುಕಟ್ಟೆ ಬಹುಮಹಡಿ ಕಟ್ಟಡಕ್ಕೆ ಸ್ಥಳಾಂತರ ಆರಂಭ-Flower market relocation to multi-storey building begins

 SUDDILIVE || SHIVAMOGGA

ಹೂವಿನ ಮಾರುಕಟ್ಟೆ ಬಹುಮಹಡಿ ಕಟ್ಟಡಕ್ಕೆ ಸ್ಥಳಾಂತರ ಆರಂಭ-Flower market relocation to multi-storey building begins   
Flower, market


ಶಿವಮೊಗ್ಗ, ಜುಲೈ 26: ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಹೂವಿನ ಮಾರುಕಟ್ಟೆಯನ್ನು ನೂತನವಾಗಿ ನಿರ್ಮಿಸಲಾದ ಬಹುಮಹಡಿ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯ ವೇಗ ಪಡೆದುಕೊಂಡಿದೆ. ಒಂದು ವಾರದ ಗಡುವು ನೀಡಿದ್ದ ಬೆನ್ನಲ್ಲೇ ಬಹುತೇಕ ಹೂವಿನ ವ್ಯಾಪಾರಿಗಳು ತಮ್ಮ ಮಳಿಗೆಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ್ದು, ಉಳಿದ ಕೆಲ ಅಂಗಡಿಗಳ ಸ್ಥಳಾಂತರ ಕಾರ್ಯ ಭಾನುವಾರವೂ ಮುಂದುವರಿದಿದೆ.

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹಾಗೂ ವ್ಯಾಪಾರಿಗಳಿಗೆ ಸುಸಜ್ಜಿತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪಾಲಿಕೆ ಈ ಕ್ರಮ ಕೈಗೊಂಡಿದೆ. ಕಳೆದ ವಾರದವರೆಗೆ ಬಹುಮಹಡಿ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿದ್ದ ಹೂವಿನ ಮಾರುಕಟ್ಟೆಯ ಮಳಿಗೆಗಳನ್ನು ತಾತ್ಕಾಲಿಕವಾಗಿ ಖಾಸಗಿ ಬಸ್ ನಿಲ್ದಾಣದ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು.

ಈಗ ಬಹುಮಹಡಿ ಕಟ್ಟಡದ ನಿರ್ಮಾಣ ಪೂರ್ಣಗೊಂಡಿದ್ದು, ವ್ಯಾಪಾರಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳೊಂದಿಗೆ ಸಜ್ಜುಗೊಂಡಿದೆ. ಇದರಿಂದ ಹೂವಿನ ವ್ಯಾಪಾರಿಗಳನ್ನು ಹಂತ ಹಂತವಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ಬಹುತೇಕ ವ್ಯಾಪಾರಿಗಳು ಹೊಸ ಮಳಿಗೆಗಳಲ್ಲಿ ವ್ಯಾಪಾರ ಆರಂಭಿಸಿದ್ದು, ಉಳಿದವರೂ ಸ್ಥಳಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಪಾಲಿಕೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ಸ್ಥಳಾಂತರ ಕಾರ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಯಾವುದೇ ಗೊಂದಲ ಉಂಟಾಗದಂತೆ ಕ್ರಮವಹಿಸಿದ್ದಾರೆ. ಹಳೆಯ ಮಾರುಕಟ್ಟೆ ಇದ್ದ ಪ್ರದೇಶವನ್ನು ತೆರವುಗೊಳಿಸಿದ ಬಳಿಕ ಖಾಸಗಿ ಬಸ್ ನಿಲ್ದಾಣದ ಬಳಿ ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಪಾಲಿಕೆ ರೂಪಿಸಿದೆ.

ಈ ಪಾರ್ಕಿಂಗ್ ವ್ಯವಸ್ಥೆಯಿಂದ ಬಸ್ ನಿಲ್ದಾಣದ ಸುತ್ತಮುತ್ತ ವಾಹನಗಳ ಅಸ್ತವ್ಯಸ್ತ ನಿಲುಗಡೆಗೆ ಕಡಿವಾಣ ಬೀಳಲಿದ್ದು, ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವ ಜೊತೆಗೆ ನಗರದ ಸಂಚಾರ ವ್ಯವಸ್ಥೆಯೂ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದೆ. ಪಾಲಿಕೆಯ ಈ ಕ್ರಮಕ್ಕೆ ಹಲವಾರು ವ್ಯಾಪಾರಿಗಳು ಸಹಕಾರ ನೀಡುತ್ತಿದ್ದು, ಹೊಸ ಕಟ್ಟಡದಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ವ್ಯಾಪಾರ ನಡೆಸಲು ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಪಾಲಿಕೆಯವರು ಅಂಗಡಿ ಖಾಲಿಯಾದ ಬೆನ್ನಲ್ಲೇ ಸ್ವಚ್ಛಗೊಳಿಸುತ್ತಿದ್ದಾರೆ. 

Flower market relocation to multi-storey building begins

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close