SUDDILIVE || SHIVAMOGGA
ಗಾಜನೂರು ಡ್ಯಾಂ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ: ಮುಂಗಾರು ಬೆಳೆ ಬೆಳೆಯದಂತೆ ರೈತರಿಗೆ ಮನವಿ- Gajanur Dam water is for drinking purposes only: Appeal to farmers not to grow monsoon crops
ಶಿವಮೊಗ್ಗ, ಜು.16: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಜಲಾಶಯಗಳಿಗೆ ಒಳಹರಿವು ಕುಸಿದಿರುವ ಹಿನ್ನೆಲೆಯಲ್ಲಿ ಗಾಜನೂರು ಡ್ಯಾಂನಿಂದ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಹಾಗೂ ತುಂಗಾ ಅಣೆಕಟ್ಟು ಕಾಲುವೆಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಸೀಮಿತವಾಗಿ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಪ್ರಸ್ತುತ ಜಲಾಶಯಗಳಲ್ಲಿರುವ ನೀರನ್ನು ಕಡ್ಡಾಯವಾಗಿ ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಜಲಾಶಯದ ನೀರನ್ನು ಅವಲಂಬಿಸಿ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯದಂತೆ ಮನವಿ ಮಾಡಲಾಗಿದೆ.
ಎಲ್ ನಿನೊ ಪರಿಣಾಮದಿಂದ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವುದರಿಂದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಜಲಾಶಯದ ನೀರನ್ನು ನಂಬಿಕೊಂಡು ಬೆಳೆ ಹಾಕಬಾರದು ಎಂದು ಮುಖ್ಯಮಂತ್ರಿ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ಹಾಗೂ ತುಂಗಾ ಅಣೆಕಟ್ಟು ಕಾಲುವೆಗಳಲ್ಲಿ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ರೈತರು ಇಲಾಖೆಯೊಂದಿಗೆ ಸಹಕರಿಸಿ ಜಲಾಶಯದ ನೀರನ್ನು ಅವಲಂಬಿಸಿ ಬೆಳೆ ಬೆಳೆಯದಂತೆ ಕರ್ನಾಟಕ ನೀರಾವರಿ ನಿಗಮ ಮನವಿ ಮಾಡಿದೆ.
