SUDDILIVE || SHIVAMOGGA
ಹೃದಯಾಘಾತದಿಂದ ಹಿಂದೂ ಸಂಘಟನಾ ಮುಖಂಡ ಎಂ.ಕೆ. ಸುರೇಶ್ ಕುಮಾರ್ ನಿಧನ-Hindu organization leader M.K. Suresh Kumar dies of heart attack
ಶಿವಮೊಗ್ಗ, ಜು. 3: ಹಿಂದೂ ಸಂಘಟನಾ ಮಹಾ ಮಂಡಳಿಯ ಮಾಜಿ ಅಧ್ಯಕ್ಷರು, ಸೂಡಾ ಮಾಜಿ ಅಧ್ಯಕ್ಷರು ಹಾಗೂ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾಗಿದ್ದ ಎಂ.ಕೆ. ಸುರೇಶ್ ಕುಮಾರ್ ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು.
ಧಾರ್ಮಿಕ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಹಿಂದೂ ಮಹಾಸಭಾ ಹಾಗೂ ವಿವಿಧ ಹಿಂದೂ ಸಂಘಟನೆಗಳ ಮೂಲಕ ಹಲವು ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಸಹಕಾರಿ ಕ್ಷೇತ್ರದಲ್ಲಿಯೂ ವಿಶಿಷ್ಟ ಸೇವೆ ಸಲ್ಲಿಸಿ ಗುರುತಿಸಿಕೊಂಡಿದ್ದರು.
ಇಂದು ಬೆಳಿಗ್ಗೆ ಕೋಟೆ ದೇವಸ್ಥಾನದಲ್ಲಿ ನಡೆದಿದ್ದ ರಜತದ್ವಾರ ಹಾಗೂ ದೇವಿಗೆ ಚಿನ್ನದ ಮುಖವಾಡ ಅಳವಿಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿ ಅವರ ಆಪ್ತರು, ಸ್ನೇಹಿತರು ಹಾಗೂ ಬೆಂಬಲಿಗರಿಗೆ ತೀವ್ರ ಆಘಾತ ಉಂಟುಮಾಡಿದೆ.
ಅವರ ನಿಧನಕ್ಕೆ ವಿವಿಧ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ಸಂತಾಪ ಸೂಚಿಸಿದ್ದು, ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಸಧ್ಯಕ್ಕೆ ಅವರ ಪಾರ್ಥೀವ ಶರೀರವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆ ಕೇಂದ್ರದಲ್ಲಿರಿಸಲಾಗಿದೆ.
ಅವರ ಇಬ್ಬರು ಮಕ್ಕಳು ವಿದೇಶದಲ್ಲಿ ಇರುವುದರಿಂದ ನಗರಕ್ಕೆ ಆಗಮಿಸಬೇಕಿದೆ. ಅವರ ಪತ್ನಿ ಸಹ ಮಕ್ಕಳನ್ನ ನೋಡಲು ವಿದೇಶಕ್ಕೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಿದೆ. ಇವರೆಲ್ಲ ಬಂದ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ.
