SUDDILIVE || SHIVAMOGGA
ಕಾರನ್ನು ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿಯಾದ ಕೆಎಸ್‌ಆರ್‌ಟಿಸಿ ಬಸ್: 7-8 ಪ್ರಯಾಣಿಕರಿಗೆ ಗಾಯ, ಭಾರೀ ಅನಾಹುತ ತಪ್ಪಿತು-KSRTC Bus Crashes into Tree While Trying to Avoid Car: 7–8 Passengers Injured, Major Tragedy Averted
ಶಿವಮೊಗ್ಗ: ಎದುರಿಗೆ ಅಡ್ಡ ಬಂದ ವಾಹನವನ್ನು ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳಲೂರು ಸಮೀಪದ ಹೊಳೆಹಟ್ಟಿ ಬಳಿ ಬುಧವಾರ ನಡೆದಿದೆ.
ದಾವಣಗೆರೆಯಿಂದ ಶಿವಮೊಗ್ಗದತ್ತ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿದ್ದು, ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್‌ನಲ್ಲಿದ್ದ ಸುಮಾರು 7ರಿಂದ 8 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಸ್ತೆ ಬದಿಯಲ್ಲಿ ನಿಂತಿದ್ದ ಓಮಿನಿ ವಾಹನ ಏಕಾಏಕಿ ಬಲಭಾಗಕ್ಕೆ ತಿರುಗಿದ ವೇಳೆ, ಎದುರಿನಿಂದ ಸಿಮೆಂಟ್ ತುಂಬಿದ್ದ ಬೊಲೆರೋ ವಾಹನ ಕೂಡ ಅಡ್ಡ ಬಂದಿತ್ತು. ಎರಡು ವಾಹನಗಳನ್ನು ತಪ್ಪಿಸಲು ಬಸ್ ಚಾಲಕ ಕ್ಷಣಾರ್ಧದಲ್ಲಿ ಬಸ್ ಅನ್ನು ಎಡಭಾಗಕ್ಕೆ ತಿರುಗಿಸಿದ್ದು, ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಬಸ್‌ಗೆ ಭಾರೀ ಹಾನಿಯಾಗಿದ್ದರೂ, ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವುದು ನೆಮ್ಮದಿಯ ಸಂಗತಿಯಾಗಿದೆ. ಘಟನೆಯ ಬಳಿಕ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದರು.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
