SUDDILIVE || SHIVAMOGGA
ಮರ ಕಳ್ಳತನ ಆರೋಪ: ಲಕ್ಕವಳ್ಳಿ ಬಫರ್ ಝೋನ್ ವಾಚರ್ ವಿರುದ್ಧ ತನಿಖೆ-Lakkavalli Buffer Zone Watcher Under Investigation for Tree Theft Allegation
ಶಿವಮೊಗ್ಗ/ಚಿಕ್ಕಮಗಳೂರು: ಅರಣ್ಯ ಇಲಾಖೆಯ ಸಿಬ್ಬಂದಿಯೇ ಮರ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ವನ್ಯಜೀವಿ ವಿಭಾಗದ ಬಫರ್ ಝೋನ್‌ನಲ್ಲಿ ಬೆಳಕಿಗೆ ಬಂದಿದೆ.
ಲಕ್ಕವಳ್ಳಿ ವೈಲ್ಡ್‌ಲೈಫ್ ಬಫರ್ ಝೋನ್‌ನಲ್ಲಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಉಂಬ್ಳೇಬೈಲು ವ್ಯಾಪ್ತಿಯಲ್ಲಿ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದು, ಮರದ ದಿಮ್ಮಿಗಳನ್ನು ತನ್ನ ವ್ಯಾಪ್ತಿಯಲ್ಲೇ ಹುದುಗಿಸಿಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮಾಹಿತಿ ಆಧರಿಸಿ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಕೆಲವು ಮರದ ದಿಮ್ಮಿಗಳನ್ನು ವಶಕ್ಕೆ ಪಡೆದು, ಪ್ರಕರಣದ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಯೇ ಇಂತಹ ಅಕ್ರಮಗಳಲ್ಲಿ ಭಾಗಿಯಾಗುತ್ತಿರುವ ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇಲಾಖೆಯ ಕಾರ್ಯವೈಖರಿ ಕುರಿತು ಪ್ರಶ್ನೆಗಳು ಮೂಡುತ್ತಿವೆ.
ಇದೇ ವೇಳೆ, ಮಡಿಕೇರಿಯಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ಉಲ್ಲಾಸ್ ಪ್ರಕಾಶ್ ಅವರು ಮನೆ ದುರಸ್ತಿಗಾಗಿ ಸಂಗ್ರಹಿಸಿದ್ದ ನಾಟದ ಮರಕ್ಕೆ ಪ್ರಕರಣ ದಾಖಲಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಲಾಗಿದೆ ಎಂಬ ಸುದ್ದಿ ನಿನ್ನೆ ಪ್ರಕಟವಾಗಿತ್ತು.
ಒಂದರ ಹಿಂದೆ ಒಂದರಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಅರಣ್ಯ ಸಂರಕ್ಷಣೆಯ ಜೊತೆಗೆ ಇಲಾಖೆಯೊಳಗಿನ ಶಿಸ್ತು ಮತ್ತು ಪಾರದರ್ಶಕತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
