SUDDILIVE || SHIVAMOGGA
ಶಂಕರ್ ಮಠ ರಸ್ತೆಯ ಫುಟ್‌ಪಾತ್ ಒತ್ತುವರಿ: ಡಿಸಿ ಆದೇಶಕ್ಕೂ ಡೋನ್ಟ್ ಕೇರ್!Footpath encroachment on Shankar Math Road: Don't care even after the DC's order!
ಶಿವಮೊಗ್ಗ: ನಗರದ ಪ್ರಮುಖ ಹಾಗೂ ಹೆಚ್ಚು ವಾಹನ ಸಂಚಾರವಿರುವ ಶಂಕರ್ ಮಠ ರಸ್ತೆಯಲ್ಲಿ ಫುಟ್‌ಪಾತ್‌ಗಳನ್ನು ಶೋರೂಮ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಾದಚಾರಿಗಳ ಸುರಕ್ಷತೆಗಾಗಿ ನಿರ್ಮಿಸಲಾಗಿರುವ ಕಾಲುದಾರಿಗಳು ಇದೀಗ ವಾಹನಗಳ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ರಸ್ತೆಯಲ್ಲೇ ನಡೆದು ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹಲವು ಶೋರೂಮ್‌ಗಳು ತಮ್ಮ ವ್ಯಾಪಾರ ಉದ್ದೇಶಕ್ಕಾಗಿ ಹೊಸ ವಾಹನಗಳು ಹಾಗೂ ಗ್ರಾಹಕರ ವಾಹನಗಳನ್ನು ಫುಟ್‌ಪಾತ್‌ಗಳ ಮೇಲೆಯೇ ನಿಲ್ಲಿಸುತ್ತಿರುವುದರಿಂದ ಪಾದಚಾರಿಗಳಿಗೆ ಕಾಲುದಾರಿಯಲ್ಲಿ ನಡೆಯಲು ಅವಕಾಶವೇ ಇಲ್ಲದಂತಾಗಿದೆ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮಕ್ಕಳು ಅಪಾಯದ ನಡುವೆ ರಸ್ತೆಯಲ್ಲೇ ನಡೆಯಬೇಕಾಗುತ್ತಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚುತ್ತಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಈ ಸಮಸ್ಯೆ ಗಂಭೀರವಾಗಿ ಚರ್ಚೆಗೆ ಬಂದಿತ್ತು. ಸಭೆಯಲ್ಲಿ ಫುಟ್‌ಪಾತ್ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಿ, ಪಾದಚಾರಿಗಳಿಗೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.
ಆದರೆ ಜಿಲ್ಲಾಧಿಕಾರಿಗಳ ನಿರ್ದೇಶನದ ನಂತರವೂ ಸ್ಥಳದಲ್ಲಿ ಯಾವುದೇ ಗಮನಾರ್ಹ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ನಡೆಯದೇ ಇರುವುದರಿಂದ ಫುಟ್‌ಪಾತ್‌ಗಳು ಇನ್ನೂ ವಾಹನಗಳ ಪಾರ್ಕಿಂಗ್ ತಾಣಗಳಾಗಿಯೇ ಮುಂದುವರಿದಿವೆ.
ಸಾರ್ವಜನಿಕರು ಕೂಡ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿರುವ ಆಡಳಿತ, ಪಾದಚಾರಿಗಳ ಹಕ್ಕನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಕರೆ ನೀಡುವ ಜೊತೆಗೆ, ಸಾರ್ವಜನಿಕ ಸ್ಥಳಗಳನ್ನು ಅಕ್ರಮವಾಗಿ ಬಳಸುವವರ ವಿರುದ್ಧವೂ ಸಮಾನವಾಗಿ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳ ಆದೇಶವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತ್ವರಿತವಾಗಿ ಜಾರಿಗೆ ತಂದು, ಶಂಕರ್ ಮಠ ರಸ್ತೆಯ ಫುಟ್‌ಪಾತ್‌ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
Footpath encroachment on Shankar Math Road: Don't care even after the DC's order!

