ಅನಾವೃಷ್ಟಿ ನೀಗಿಸಿ ಸುವೃಷ್ಟಿ ಕರುಣಿಸಲಿ-ಡಾ. ಜಿ. ಭೀಮೇಶ್ವರ ಜೋಶಿ-May the drought be ended and prosperity be bestowed upon us - Dr. G. Bhimeshwar Joshi

 SUDDILIVE || SHIVAMOGGA

ಅನಾವೃಷ್ಟಿ ನೀಗಿಸಿ ಸುವೃಷ್ಟಿ ಕರುಣಿಸಲಿ-ಡಾ. ಜಿ. ಭೀಮೇಶ್ವರ ಜೋಶಿ-May the drought be ended and prosperity be bestowed upon us - Dr. G. Bhimeshwar Joshi      

Drought, joshi


"ಈ ವರ್ಷದ ಅನಾವೃಷ್ಟಿಯ ಪರಿಸ್ಥಿತಿ ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ಜಿ. ಭೀಮೇಶ್ವರ ಜೋಶಿ ಆತಂಕ ವ್ಯಕ್ತಪಡಿಸಿದರು. 

ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ದೇವಿಗೆ ಸ್ವರ್ಣ ಕವಚ, ಸ್ವರ್ಣ ಮುಖವಾಡ ಹಾಗೂ ರಜತ ದ್ವಾರ (ಬೆಳ್ಳಿಯ ಬಾಗಿಲು) ಸಮರ್ಪಣಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾರಿಕಾಂಬೆಯ ಮಹಿಮೆ, ಶಿವಮೊಗ್ಗದ ಧಾರ್ಮಿಕ ವೈಭವ ಹಾಗೂ ಸಮಾಜಕ್ಕೆ ದೇವಿಯ ಸಂದೇಶದ ಕುರಿತು ವಿವರವಾಗಿ ಮಾತನಾಡಿ ನಂತರ ಮಳೆಯ ಅಭಾವ ಕುರಿತು ಆತಂಕ ವ್ಯಕ್ತಪಡಿಸಿದರು.

ಜೂನ್ ತಿಂಗಳು ಕಳೆದು ಜುಲೈ ಬಂದರೂ ತುಂಗಾ ನದಿ ತುಂಬಿ ಹರಿಯು ಸ್ಥಿತಿ ಕಾಣುತ್ತಿಲ್ಲ. ಹಿಂದೆ ಈ ವೇಳೆಗೆ ಎರಡು ಬಾರಿ ಮಂಟಪ ಮುಳುಗಿ ಹೋಗುತ್ತಿತ್ತು. ಆದರೆ ಈಗಲೂ ನದಿಯ ತಳ ಕಾಣುವಂತ ಪರಿಸ್ಥಿತಿ ಇದೆ. ತಾಯಿ ಮಾರಿಕಾಂಬೆ ತನ್ನ ಮಾತೃತ್ವದ ಕರುಣೆಯಿಂದ ಪ್ರಕೃತಿಯಲ್ಲಿ ಉಂಟಾಗಿರುವ ಎಲ್ಲ ಲೋಪದೋಷಗಳನ್ನು ಕ್ಷಮಿಸಿ ಉತ್ತಮವಾದ ಸುವೃಷ್ಟಿಯನ್ನು ಅನುಗ್ರಹಿಸಲಿ" ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಾರಿಕಾಂಬಾ ಸೇವಾ ಸಮಿತಿಯ ವತಿಯಿಂದ ದೇವಿಗೆ ರಜತ ದ್ವಾರ ಮತ್ತು ಸ್ವರ್ಣ ಮುಖವಾಡ ಸಮರ್ಪಣೆ ಮಾಡಿರುವುದು ಅತ್ಯಂತ ಪವಿತ್ರ ಕಾರ್ಯವಾಗಿದೆ. ಮಾಜಿ ಮಹಾಪೌರ ಹಾಗೂ ಸಮಿತಿಯ ಅಧ್ಯಕ್ಷ ಮರಿಯಪ್ಪ, ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಾಜಿ ಕಂದಾಯ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕರಾದ ಪ್ರಸನ್ನಕುಮಾರ್, ಚನ್ನಬಸಪ್ಪ, ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದ, ಪದಾಧಿಕಾರಿಗಳು ಹಾಗೂ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ. 

ಶಿವಮೊಗ್ಗವು ಕರ್ನಾಟಕದ ಅತ್ಯಂತ ವಿಶಿಷ್ಟ ನಗರವಾಗಿದ್ದು, ಅದರ ಬೆಳವಣಿಗೆಯ ಹಿಂದೆ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ದೈವಾನುಗ್ರಹದ ಶಕ್ತಿ ಅಡಗಿದೆ. ಶಿವಮೊಗ್ಗ ಇಂದು ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದ ಭೂಪಟದಲ್ಲಿಯೂ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಇಲ್ಲಿ ಒಂದಲ್ಲ ಒಂದು ಹೊಸ ಬೆಳವಣಿಗೆ ನಿರಂತರವಾಗಿ ನಡೆಯುತ್ತಿದ್ದು, ಮಲೆನಾಡಿನ ಹೆಮ್ಮೆಯ ನಗರವಾಗಿ ರೂಪುಗೊಂಡಿದೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿಯೂ ಶಿವಮೊಗ್ಗಕ್ಕೆ ಸಮುದ್ರ ಇದ್ದಿದ್ದರೆ ಹಡಗುಗಳನ್ನೂ ತರಬಹುದಾಗಿತ್ತು ಎಂದು ಹಾಸ್ಯಮಿಶ್ರಿತವಾಗಿ ಹೇಳಿದ್ದೆ. ಮುಂದಿನ ದಿನಗಳಲ್ಲಿ ಸಂಚಾರಿ ಹೈಕೋರ್ಟ್ ಕೂಡ ಇಲ್ಲಿ ಬರಬಹುದಾದ ಸಾಮರ್ಥ್ಯ ಶಿವಮೊಗ್ಗಕ್ಕಿದೆ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳೇ ನಗರದ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಿವೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಕಡೆಗೆ ಎಲ್ಲರೂ ಮುಖ ಮಾಡುತ್ತಿರುವ ಈ ಸಂದರ್ಭದಲ್ಲಿ, 24 ಗಂಟೆಗಳ ಅಗತ್ಯ ಸೌಲಭ್ಯಗಳನ್ನು ಒದಗಿಸಬಲ್ಲ ನಗರವಾಗಿ ಶಿವಮೊಗ್ಗ ಬೆಳೆಯುವ ಎಲ್ಲ ಸಾಮರ್ಥ್ಯ ಹೊಂದಿದೆ. ಇಲ್ಲಿಯೇ ಉತ್ತಮ ಜೀವನ, ಉದ್ಯೋಗ ಹಾಗೂ ಕೈಗಾರಿಕೆಗಳಿಗೆ ಅವಕಾಶಗಳಿದ್ದು, ಅದನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ದೇವಿಗೆ ಸಮರ್ಪಿಸಲಾದ ಸ್ವರ್ಣ ಮುಖವಾಡ ಅತ್ಯಂತ ಅದ್ಭುತವಾಗಿದೆ. ಸಿದ್ದಾಪುರದ ಪ್ರಶಾಂತ್ ಸೇಠ್ ಹಾಗೂ ಅವರ ತಂಡ ಎರಡು ತಿಂಗಳ ಕಾಲ ಶಿವಮೊಗ್ಗದಲ್ಲೇ ತಂಗಿ ಅಪಾರ ಭಕ್ತಿಯಿಂದ ಈ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ದೇವಿಗೆ ಮುಖವಾಡ ಸಮರ್ಪಿಸಿದ ನಂತರ ತಮ್ಮ ಜನ್ಮ ಸಾರ್ಥಕವಾಯಿತು ಎಂಬ ಧನ್ಯತೆಯ ಭಾವನೆ ಅವರಿಗೆ ದೊರೆತಿದೆ. ಇದಕ್ಕಿಂತ ದೊಡ್ಡ ಪುಣ್ಯ ಮತ್ತೊಂದಿಲ್ಲ ಎಂದು ಹೇಳಿದರು.

ಬಂಗಾರವಾಗಿ ಇದ್ದಾಗ ಅದಕ್ಕೆ ತೂಕ, ಬೆಲೆ ಮತ್ತು ಮೌಲ್ಯ ಇರುತ್ತದೆ. ಆದರೆ ದೇವಿಗೆ ಸ್ವರ್ಣ ಮುಖವಾಡವಾಗಿ ಸಮರ್ಪಣೆ ಆದ ಕ್ಷಣದಿಂದ ಅದು ಬೆಲೆ ಕಟ್ಟಲಾಗದ ದೈವಿಕ ಸಂಪತ್ತಾಗಿ ಪರಿವರ್ತನೆಯಾಗಿದೆ. ಅದೇ ರೀತಿ ರಜತ ದ್ವಾರವೂ ಅಮೂಲ್ಯ ಧಾರ್ಮಿಕ ಪರಂಪರೆಯ ಭಾಗವಾಗಿದೆ ಎಂದು ಹೇಳಿದರು.

ಮಾರಿಕಾಂಬ ದೇವಸ್ಥಾನದ ಇತಿಹಾಸವನ್ನು ಉಲ್ಲೇಖಿಸಿದ ಅವರು, ಮೊದಲು ಇಲ್ಲಿ ಗದ್ದಿಗೆ ಮಾತ್ರವಿದ್ದು, ನಂತರ ಶ್ರೀಧರ ಸ್ವಾಮೀಜಿಗಳ ಸೂಚನೆಯಂತೆ ದೇವಾಲಯ ನಿರ್ಮಾಣಗೊಂಡು ಶಿಲಾಮಯ ವಿಗ್ರಹ ಪ್ರತಿಷ್ಠಾಪನೆಯಾಯಿತು. ಇಂದು ಅದೇ ದೇವಿಗೆ ಸ್ವರ್ಣ ಮುಖ ಸಮರ್ಪಿಸುವ ಭಾಗ್ಯ ದೊರೆತಿರುವುದು ಭಕ್ತರ ಪುಣ್ಯ ಎಂದು ತಿಳಿಸಿದರು.

ಮಾರಿಕಾಂಬ ದೇವಿ, ಕೋಟೆ ಆಂಜನೇಯ ಸೇರಿದಂತೆ ಶಿವಮೊಗ್ಗದ ನಾಲ್ಕು ದಿಕ್ಕುಗಳಲ್ಲಿರುವ ದೇವಾಲಯಗಳು ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ದೈವಶಕ್ತಿಯ ಆಶೀರ್ವಾದ ದೊರೆಯುತ್ತಿರುವುದರ ಸಾಕ್ಷಿಯಾಗಿವೆ. ಸ್ವರ್ಣ ಕವಚ ಸಮರ್ಪಣೆಯೂ ಅದಕ್ಕೆ ಜೀವಂತ ಉದಾಹರಣೆ ಎಂದರು.

ಈ ಕವಚ ನಿರ್ಮಾಣಕ್ಕಾಗಿ ಯಾರ ಬಳಿಯೂ ಮನವಿ ಮಾಡಿಲ್ಲ. ತಾಯಿಯ ಪ್ರೇರಣೆಯಿಂದಲೇ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿರುವ ಭಕ್ತರು ಸ್ವಯಂಪ್ರೇರಿತರಾಗಿ ತಮ್ಮ ಯಥಾಶಕ್ತಿಯ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಇದುವೇ ಮಾರಿಕಾಂಬ ದೇವಿಯ ಮಹಿಮೆಗೆ ದೊಡ್ಡ ಸಾಕ್ಷಿ ಎಂದು ಹೇಳಿದರು.

ದೇವರನ್ನು ಸಾಮಾನ್ಯವಾಗಿ ಸೌಮ್ಯ ಸ್ವರೂಪದಲ್ಲೇ ನೋಡಲು ಭಕ್ತರು ಬಯಸುತ್ತಾರೆ. ಆದರೆ ಮಾರಿಕಾಂಬೆ ಜಾತ್ರೆಯ ಸಂದರ್ಭದಲ್ಲಿ ಉಗ್ರ ಸ್ವರೂಪದಲ್ಲಿ ಕಾಣಿಸುವುದು ಒಂದು ಸಂದೇಶ. ಭಕ್ತರು ತಪ್ಪು ದಾರಿಯಲ್ಲಿ ನಡೆಯಬಾರದು, ಕೆಟ್ಟ ಕಾರ್ಯಗಳಲ್ಲಿ ತೊಡಗಿಕೊಳ್ಳಬಾರದು ಎಂಬ ಎಚ್ಚರಿಕೆಯನ್ನು ದೇವಿಯ ಕೆಂಪು ಕಣ್ಣುಗಳು ನೀಡುತ್ತವೆ. ಅದೇ ವೇಳೆ ಅಭಯ ಹಸ್ತದ ಮೂಲಕ ಮಾತೃಸ್ವರೂಪದಲ್ಲಿ ತನ್ನ ಮಕ್ಕಳನ್ನು ಸದಾ ರಕ್ಷಿಸುತ್ತೇನೆ ಎಂಬ ಭರವಸೆಯನ್ನೂ ನೀಡುತ್ತಾಳೆ ಎಂದು ವಿವರಿಸಿದರು.

ದೇವಿಗೆ ಕೋಪ ಬರುವುದು ಭಕ್ತರು ತಪ್ಪು ಮಾಡಿದಾಗ ಮಾತ್ರ. ಸರಿಯಾದ ಮಾರ್ಗದಲ್ಲಿ ನಡೆಯುವಂತೆ, ಧರ್ಮದ ಹಾದಿಯಲ್ಲಿ ಸಾಗುವಂತೆ ಮಾರಿಕಾಂಬ ದೇವಿ ತನ್ನ ಉಗ್ರ ಹಾಗೂ ಸೌಮ್ಯ ಸ್ವರೂಪಗಳ ಮೂಲಕ ಸಂದೇಶ ನೀಡುತ್ತಿದ್ದಾಳೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಬಳಸುವ "ನಿನಗೆ ಮುಂದೆ ಮಾರಿ ಹಬ್ಬ ಇದೆ" ಎಂಬ ಮಾತಿನ ಅರ್ಥವನ್ನು ವಿವರಿಸಿದ ಅವರು, ಅದು ಪ್ರಾಣಿಬಲಿಯ ಅರ್ಥವಲ್ಲ. ಮನುಷ್ಯನೊಳಗಿನ ಕೆಟ್ಟ ಸಂಸ್ಕಾರ, ಕೆಟ್ಟ ಚಿಂತನೆ, ದುಷ್ಟ ಗುಣಗಳು ಹಾಗೂ ಕೆಟ್ಟ ಕಾರ್ಯಗಳಿಗೆ ಬಲಿ ನೀಡಬೇಕು ಎಂಬ ಸಾಮಾಜಿಕ ಸಂದೇಶವೇ ಅದರಲ್ಲಿ ಅಡಗಿದೆ. ತಪ್ಪು ಮಾಡಿದರೆ ಶಿಕ್ಷೆ ತಪ್ಪದು ಎಂಬ ನೈತಿಕ ಮೌಲ್ಯವನ್ನು ಸಮಾಜಕ್ಕೆ ನೆನಪಿಸುವ ಸಂಕೇತವಾಗಿ ಈ ಮಾತು ಬಳಕೆಯಲ್ಲಿದೆ ಎಂದು ತಿಳಿಸಿದರು.

ದೇವಿ ಧರ್ಮವನ್ನು ಕಾಪಾಡುವ ಶಕ್ತಿಯಾಗಿದ್ದು, ತಪ್ಪು ಮಾಡಿದವರಿಗೆ ಅದರ ಫಲವನ್ನು ಅನುಭವಿಸುವಂತೆ ಮಾಡುವ ದೈವಶಕ್ತಿಯ ಪ್ರತೀಕವಾಗಿದ್ದಾಳೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ, ಸತ್ಪ್ರವೃತ್ತಿ ಹಾಗೂ ಧರ್ಮಮಾರ್ಗವನ್ನು ಅನುಸರಿಸಿದಾಗಲೇ ದೇವಿಯ ಸಂಪೂರ್ಣ ಅನುಗ್ರಹ ಲಭಿಸುತ್ತದೆ ಎಂದು ಡಾ. ಜಿ. ಭೀಮೇಶ್ವರ ಜೋಶಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಶಾಸಕ ಚನ್ನಬಸಪ್ಪ ರಾಷ್ಟ್ರಭಕ್ತರ ಬಳಗದ ಕೆಇ ಕಾಂತೇಶ್ ತಾಯಿ ಜಯಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಮರಿಯಪ್ಪ ಮಂಜುನಾಥ್, ಮಾಜಿ ಶಾಸಕ ಪ್ರಸನ್ನ ಕುಮಾರ್  ಮೊದಲಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು

May the drought be ended and prosperity be bestowed upon us - Dr. G. Bhimeshwar Joshi  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close