ಸಿಗಂದೂರು ಸೇತುವೆಗೆ ಒಂದು ವರ್ಷ: ಶರಾವತಿ ಹಿನ್ನೀರಲ್ಲಿ ಸಂಭ್ರಮಾಚರಣೆ-One year of Sigandur Bridge: Celebrations at Sharavati backwaters

 SUDDILIVE || SHIVAMOGGA

ಸಿಗಂದೂರು ಸೇತುವೆಗೆ ಒಂದು ವರ್ಷ: ಶರಾವತಿ ಹಿನ್ನೀರಲ್ಲಿ ಸಂಭ್ರಮಾಚರಣೆ-One year of Sigandur Bridge: Celebrations at Sharavati backwaters   

Siganduru, bridge

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿ–ಅಂಬಾರಗೊಡ್ಲು ನಡುವೆ ನಿರ್ಮಾಣಗೊಂಡಿರುವ ಐತಿಹಾಸಿಕ ಸಿಗಂದೂರು ಸೇತುವೆ ಲೋಕಾರ್ಪಣೆಯಾಗಿ ಇಂದು (ಜುಲೈ 14) ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶರಾವತಿ ಹಿನ್ನೀರ ಭಾಗದ ನಿವಾಸಿಗಳು ಸಂಭ್ರಮಾಚರಣೆ ನಡೆಸಿದರು.

ಸೇತುವೆ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ ಸ್ಥಳೀಯರು, ದಶಕಗಳ ಕಾಲ ದ್ವೀಪವಾಸಿಗಳು ಅನುಭವಿಸಿದ್ದ ಸಂಚಾರದ ಸಂಕಷ್ಟಕ್ಕೆ ಮುಕ್ತಿ ನೀಡಿದ ಸೇತುವೆಯನ್ನು ಸ್ಮರಿಸಿದರು.

ಶರಾವತಿ ಹಿನ್ನೀರ ಪ್ರದೇಶದ ಜನರು ಸುಮಾರು 6–7 ದಶಕಗಳಿಂದ ಎದುರಿಸುತ್ತಿದ್ದ ಸಂಪರ್ಕ ಸಮಸ್ಯೆಗೆ ಸಿಗಂದೂರು ಸೇತುವೆ ಶಾಶ್ವತ ಪರಿಹಾರ ಒದಗಿಸಿದೆ. ಈ ಸೇತುವೆಯಿಂದ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಿದ್ದು, ಸ್ಥಳೀಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸೇತುವೆ ನಿರ್ಮಾಣಕ್ಕೆ ಸಹಕರಿಸಿದ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸೇತುವೆ ನಿರ್ಮಾಣಕ್ಕಾಗಿ ಹಲವು ವರ್ಷಗಳ ಕಾಲ ಹೋರಾಟ ನಡೆಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಟಿ.ಡಿ. ಮೇಘರಾಜ್, ಪ್ರಸನ್ನ ಕೆರೆಕೈ, ಕೆ.ಜಿ. ಪ್ರಶಾಂತ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಸೇತುವೆಯ ವಿಶೇಷತೆ

2025ರ ಜುಲೈ 14ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಿಗಂದೂರು ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದರು. ಸುಮಾರು 423 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ 2.44 ಕಿಲೋಮೀಟರ್ ಉದ್ದದ ಕೇಬಲ್-ಸ್ಟೇ ಸೇತುವೆ ರಾಜ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಈ ಸೇತುವೆ ಶರಾವತಿ ಹಿನ್ನೀರ ಭಾಗದ ಸಾವಿರಾರು ಜನರ ಬಹುಕಾಲದ ಕನಸನ್ನು ನನಸು ಮಾಡಿದೆ.

One year of Sigandur Bridge: Celebrations at Sharavati backwaters   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close