SUDDILIVE || SHIVAMOGGA
'ನಮಸ್ತೆ ದಿನಾಚರಣೆ-2026' ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಭರವಸೆ-Permanent appointments promised to civic workers during 'Namaste Day-2026' program
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಆಯೋಜಿಸಿದ್ದ 'ನಮಸ್ತೆ ದಿನಾಚರಣೆ-2026' ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಪೌರಕಾರ್ಮಿಕರ ಸುರಕ್ಷತೆ, ಆರೋಗ್ಯ ಹಾಗೂ ಶಾಶ್ವತ ಉದ್ಯೋಗದ ಬಗ್ಗೆ ಮಹತ್ವದ ಘೋಷಣೆ ಮಾಡಿದರು.
ಆಯುಕ್ತರು ಮಾತನಾಡಿ, 'ನಮಸ್ತೆ' ಯೋಜನೆ ಕೇವಲ ಸನ್ಮಾನ ಕಾರ್ಯಕ್ರಮವಲ್ಲ. ಒಳಚರಂಡಿ, ಶೌಚಾಲಯ, ಆಸ್ಪತ್ರೆ ಸೇರಿದಂತೆ ಮಲಿನ ನೀರು ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಕಾರ್ಮಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಜಾರಿಗೆ ತಂದಿರುವ ಸಮಗ್ರ ಯೋಜನೆಯಾಗಿದೆ ಎಂದು ತಿಳಿಸಿದರು.
ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳು, ವೈಜ್ಞಾನಿಕ ತರಬೇತಿ, ಆರೋಗ್ಯ ತಪಾಸಣೆ, ಆಯುಷ್ಮಾನ್ ಕಾರ್ಡ್, ತುರ್ತು ವೈದ್ಯಕೀಯ ನೆರವು ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 24×7 ಎಮರ್ಜೆನ್ಸಿ ರಾಪಿಡ್ ರೆಸ್ಪಾನ್ಸ್ ಟೀಮ್ (ERRSU), ಜೆಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳು ಸೇರಿದಂತೆ ಆಧುನಿಕ ಉಪಕರಣಗಳನ್ನು ಬಳಸಲಾಗುತ್ತಿದ್ದು, ಯಾವುದೇ ಕಾರ್ಮಿಕರು ಕೈಯಿಂದ ಮಲಿನ ತ್ಯಾಜ್ಯವನ್ನು ಮುಟ್ಟದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದೇ ವೇಳೆ ಸರ್ಕಾರದ ಆದೇಶದಂತೆ ಒಳಚರಂಡಿ ಕಾರ್ಮಿಕರು ಹಾಗೂ ನೇರ ಪಾವತಿ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅಗತ್ಯ ತಿದ್ದುಪಡಿ ಆದೇಶ ಹೊರಬಂದ ಬಳಿಕ ಮೊದಲ ಹಂತದಲ್ಲಿ ಸ್ಮಶಾನ ಸಿಬ್ಬಂದಿ ಹಾಗೂ ಒಳಚರಂಡಿ ಕಾರ್ಮಿಕರನ್ನು ಶಾಶ್ವತಗೊಳಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರ್ಯಾಗ್‌ಪಿಕ್ಕರ್‌ಗಳು, ಶೌಚಾಲಯ ಸ್ವಚ್ಛತಾ ಸಿಬ್ಬಂದಿ, ಮೆಗ್ಗಾನ್ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ವಿವಿಧ ವಿಭಾಗಗಳ ಪೌರಕಾರ್ಮಿಕರು ಭಾಗವಹಿಸಿದ್ದರು.
ತಮ್ಮ ಭಾಷಣದ ಕೊನೆಯಲ್ಲಿ, "2026ನೇ ವರ್ಷದಲ್ಲೇ ಎಲ್ಲರಿಗೂ ಖಾಯಂ ನೌಕರಿ ಸಿಗಲಿ ಎಂಬುದು ನನ್ನ ಹಾರೈಕೆ" ಎಂದು ಆಯುಕ್ತ ಮಾಯಣ್ಣ ಗೌಡ ಶುಭ ಹಾರೈಸಿದರು.
