ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಸೌಂದರ್ಯ ಚಿಕಿತ್ಸೆ ಅಲ್ಲ- ಮರುಜೀವ ನೀಡುವ ವೈದ್ಯಕೀಯ ಶಾಖೆ- Plastic surgery is not just a cosmetic treatment - it is a regenerative branch of medicine

 SUDDILIVE || SHIVAMOGGA

ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಸೌಂದರ್ಯ ಚಿಕಿತ್ಸೆ ಅಲ್ಲ- ಮರುಜೀವ ನೀಡುವ ವೈದ್ಯಕೀಯ ಶಾಖೆ- Plastic surgery is not just a cosmetic treatment - it is a regenerative branch of medicine           

Plastic, surgery


ಶಿವಮೊಗ್ಗ, ಜು.15: ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಮುಖದ ಸೌಂದರ್ಯ ಹೆಚ್ಚಿಸುವ ಅಥವಾ ಕಾಸ್ಮೆಟಿಕ್ ಚಿಕಿತ್ಸೆಗೆ ಮಾತ್ರ ಸೀಮಿತವಾದ ವೈದ್ಯಕೀಯ ವಿಧಾನವಲ್ಲ. ಅಪಘಾತ, ಸುಟ್ಟ ಗಾಯಗಳು, ಜನ್ಮಜಾತ ನ್ಯೂನತೆಗಳು ಹಾಗೂ ಕ್ಯಾನ್ಸರ್ ಚಿಕಿತ್ಸೆಯ ನಂತರ ಉಂಟಾಗುವ ದೈಹಿಕ ವಿಕಾರಗಳನ್ನು ಸರಿಪಡಿಸಿ ರೋಗಿಗಳಿಗೆ ಹೊಸ ಬದುಕು ನೀಡುವ ಮಹತ್ವದ ವೈದ್ಯಕೀಯ ಶಾಖೆಯಾಗಿದೆ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಚೇತನ್ ಕುಮಾರ್ ನವಿಲೇಹಾಳ್ ತಿಳಿಸಿದರು.

ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನರಲ್ಲಿ ಇನ್ನೂ ತಪ್ಪು ಕಲ್ಪನೆಗಳು

ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಜನಸಾಮಾನ್ಯರಲ್ಲಿ ಇಂದಿಗೂ ಅನೇಕ ತಪ್ಪು ಕಲ್ಪನೆಗಳಿದ್ದು, ಪ್ಲಾಸ್ಟಿಕ್ ಸರ್ಜರಿ ಎಂದರೆ ಕೇವಲ ಬಾಹ್ಯ ಸೌಂದರ್ಯ ಹೆಚ್ಚಿಸುವ ಕಾಸ್ಮೆಟಿಕ್ ಚಿಕಿತ್ಸೆ ಎಂಬ ಭಾವನೆ ಇದೆ. ಆದರೆ ಕಾಸ್ಮೆಟಿಕ್ ಸರ್ಜರಿ ಎನ್ನುವುದು ಪ್ಲಾಸ್ಟಿಕ್ ಸರ್ಜರಿಯ ಒಂದು ಭಾಗ ಮಾತ್ರ. ಪ್ಲಾಸ್ಟಿಕ್ ಸರ್ಜರಿ ವ್ಯಾಪ್ತಿ ಇದಕ್ಕಿಂತ ಬಹಳ ವಿಶಾಲವಾಗಿದ್ದು, ಜೀವಮಟ್ಟ ಸುಧಾರಿಸುವ ಅನೇಕ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.

ಹುಟ್ಟು ನ್ಯೂನತೆಗಳಿಂದ ಅಪಘಾತದ ಗಾಯಗಳವರೆಗೆ ಚಿಕಿತ್ಸೆ

ಪ್ಲಾಸ್ಟಿಕ್ ಸರ್ಜರಿಯ ಮೂಲಕ ಸೀಳು ತುಟಿ, ಸೀಳು ಅಂಗಳದಂತಹ ಜನ್ಮಜಾತ ನ್ಯೂನತೆಗಳನ್ನು ಸರಿಪಡಿಸಿ ಮಕ್ಕಳಿಗೆ ಸಹಜ ಜೀವನ ಕಲ್ಪಿಸಲಾಗುತ್ತಿದೆ. ರಸ್ತೆ ಅಪಘಾತಗಳು ಅಥವಾ ಕೈಗಾರಿಕೆಗಳಲ್ಲಿ ಸಂಭವಿಸುವ ಅವಘಡಗಳಿಂದ ಮುಖ, ಕೈ, ಕಾಲು ಹಾಗೂ ಬೆರಳುಗಳಿಗೆ ಉಂಟಾಗುವ ಗಂಭೀರ ಹಾನಿಯನ್ನು ಮರುನಿರ್ಮಾಣ ಮಾಡುವಲ್ಲಿ ಈ ವೈದ್ಯಕೀಯ ಶಾಖೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ವಿವರಿಸಿದರು.

ಸುಟ್ಟ ಗಾಯಗಳು ಹಾಗೂ ಕ್ಯಾನ್ಸರ್ ನಂತರವೂ ನೆರವು

ಬೆಂಕಿ ಅವಘಡ ಅಥವಾ ರಾಸಾಯನಿಕಗಳಿಂದ ಸುಟ್ಟು ವಿರೂಪಗೊಂಡ ಚರ್ಮವನ್ನು ಮರುಸ್ಥಾಪಿಸುವುದು, ಕ್ಯಾನ್ಸರ್ ಗಡ್ಡೆಗಳನ್ನು ತೆಗೆದುಹಾಕಿದ ಬಳಿಕ ದೇಹದಲ್ಲಿ ಉಂಟಾಗುವ ವಿಕಾರಗಳನ್ನು ಸರಿಪಡಿಸಿ ಸಾಧ್ಯವಾದಷ್ಟು ಸಹಜ ರೂಪಕ್ಕೆ ತರುವಲ್ಲಿ ಪ್ಲಾಸ್ಟಿಕ್ ಸರ್ಜರಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಡಾ. ಚೇತನ್ ಹೇಳಿದರು.

ಆತ್ಮವಿಶ್ವಾಸ ಮರುಸ್ಥಾಪಿಸುವ ಚಿಕಿತ್ಸೆ

ಪ್ಲಾಸ್ಟಿಕ್ ಸರ್ಜರಿ ಕೇವಲ ದೇಹದ ರೂಪ ಬದಲಿಸುವ ಚಿಕಿತ್ಸೆಯಲ್ಲ. ಅಪಘಾತ, ಕಾಯಿಲೆ ಅಥವಾ ಹುಟ್ಟು ನ್ಯೂನತೆಗಳಿಂದ ಆತ್ಮವಿಶ್ವಾಸ ಕಳೆದುಕೊಂಡವರಿಗೆ ಹೊಸ ಭರವಸೆ ತುಂಬಿ, ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸುವ ವೈದ್ಯಕೀಯ ವಿಜ್ಞಾನವಾಗಿದೆ. ಆದ್ದರಿಂದ ಈ ಚಿಕಿತ್ಸೆಯ ಬಗ್ಗೆ ಯಾವುದೇ ತಪ್ಪು ಕಲ್ಪನೆ ಇಟ್ಟುಕೊಳ್ಳದೇ, ಅಗತ್ಯವಿದ್ದಾಗ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದರು.

'ಪ್ಲಾಸ್ಟಿಕ್' ಪದದ ಅರ್ಥವೇ ಬೇರೆ

ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ವೀರಯ್ಯ ಮಾತನಾಡಿ, "ಪ್ಲಾಸ್ಟಿಕ್ ಸರ್ಜರಿ" ಎಂಬ ಹೆಸರಿನಲ್ಲಿ 'ಪ್ಲಾಸ್ಟಿಕ್' ಪದ ಇರುವುದರಿಂದ ಈ ಚಿಕಿತ್ಸೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಾರೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ ಎಂದು ಹೇಳಿದರು.

ವಾಸ್ತವವಾಗಿ 'ಪ್ಲಾಸ್ಟಿಕ್' ಎಂಬ ಪದ ಗ್ರೀಕ್ ಭಾಷೆಯ 'ಪ್ಲಾಸ್ಟಿಕೋಸ್' (Plastikos) ಎಂಬ ಪದದಿಂದ ಬಂದಿದೆ. ಇದರ ಅರ್ಥ 'ಬೇಕಾದ ಆಕೃತಿಗೆ ತರುವುದು' ಅಥವಾ 'ಮರುರೂಪ ನೀಡುವುದು'. ಈ ಚಿಕಿತ್ಸೆಗೆ ದಿನನಿತ್ಯ ಬಳಸುವ ಪ್ಲಾಸ್ಟಿಕ್ ವಸ್ತುಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಂಕೀರ್ಣ ಶಸ್ತ್ರಚಿಕಿತ್ಸೆಗಳಲ್ಲೂ ಯಶಸ್ಸು

ಸರ್ಜಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಚೇತನ್ ಕುಮಾರ್ ನವಿಲೇಹಾಳ್ ಅವರು ಅತ್ಯಂತ ಸಂಕೀರ್ಣ ಹಾಗೂ ಸವಾಲಿನ ಅನೇಕ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ರೋಗಿಗಳ ಜೀವನದಲ್ಲಿ ಆಶಾಕಿರಣ ಮೂಡಿಸಿದ್ದಾರೆ ಎಂದು ಡಾ. ಪ್ರಶಾಂತ್ ವೀರಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ವಾದಿರಾಜ್ ಕುಲಕರ್ಣಿ, ಆಡಳಿತಾಧಿಕಾರಿ ಮುರಳಿಧರ್ ರಾವ್ ಕುಲಕರ್ಣಿ, ಅರವಳಿಕೆ ತಜ್ಞ ಡಾ. ಅರ್ಜುನ್ ಭಾಗವತ್ ಸೇರಿದಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

Plastic surgery is not just a cosmetic treatment - it is a regenerative branch of medicine 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close