SUDDILIVE || BHADRAVATHI
ಪ್ರಾಂಶುಪಾಲ ಲೋಕಾಯುಕ್ತ ಬಲೆಗೆ-Principal caught in Lokayukta trap
ಭದ್ರಾವತಿ, ಜು.20: ಸರ್ಕಾರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯ ದಾಖಲಾತಿಗೆ ಲಂಚ ಬೇಡಿಕೆ ಇಟ್ಟಿದ್ದ ಪ್ರಾಂಶುಪಾಲನೊಬ್ಬ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ ತಾಲ್ಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿ ಹಾಗೂ ಎಳನೀರು ವ್ಯಾಪಾರಿಯಾಗಿರುವ ಮೇಘರಾಜ್ ಸಿ. ಅವರು ತಮ್ಮ ಪುತ್ರಿ ಕು. ದೀಕ್ಷಾ ಅವರನ್ನು ಹುಣಸೆಕಟ್ಟೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ 7ನೇ ತರಗತಿಗೆ ದಾಖಲಿಸಲು ಪ್ರಾಂಶುಪಾಲರನ್ನು ಸಂಪರ್ಕಿಸಿದ್ದರು. ಈ ವೇಳೆ ಶಾಲೆಗೆ ಡ್ರಮ್ ಸೆಟ್ ಖರೀದಿಸುವ ನೆಪವೊಡ್ಡಿದ ಪ್ರಾಂಶುಪಾಲ ನಾಮದೇವ್ ಅವರು ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಲಂಚ ನೀಡಲು ಮನಸ್ಸಿಲ್ಲದ ಮೇಘರಾಜ್ ಅವರು ಜುಲೈ 18ರಂದು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ಪ್ರಾಂಶುಪಾಲನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ-2018)ರ ಕಲಂ 7(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಯೋಜನೆಯಂತೆ ಜುಲೈ 20ರಂದು ಮಧ್ಯಾಹ್ನ ಸುಮಾರು 12.20 ಗಂಟೆಗೆ, ಪ್ರಾಂಶುಪಾಲ ನಾಮದೇವ್ ಅವರು ಶಾಲೆಯ ಕೊಠಡಿಯಲ್ಲೇ ಮೇಘರಾಜ್ ಅವರಿಂದ ಮೊದಲ ಕಂತಿನ ರೂಪದಲ್ಲಿ ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಲಂಚದ ಹಣವನ್ನು ವಶಪಡಿಸಿಕೊಂಡ ಅಧಿಕಾರಿಗಳು ಪ್ರಾಂಶುಪಾಲನನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಟ್ರ್ಯಾಪ್ ಕಾರ್ಯಾಚರಣೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಬಿ.ಪಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ರುದ್ರೇಶ್ ಕೆ.ಪಿ. ಅವರು ಕಾರ್ಯಾಚರಣೆ ನಡೆಸಿ ಪ್ರಕರಣದ ತನಿಖೆಯನ್ನೂ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಕರಣ ಬೆಳಕಿಗೆ ಬಂದಿರುವುದು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿಯಂತ್ರಣದ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದ್ದು, ಲೋಕಾಯುಕ್ತರ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.
Principal caught in Lokayukta trap
