ಭದ್ರಾವತಿಯಲ್ಲಿ ಪತ್ರಿಕಾ ದಿನಾಚರಣೆ: ವಿಶ್ವಾಸಾರ್ಹ ಸುದ್ದಿಗೆ ಆದ್ಯತೆ ನೀಡಿ – ಸಂಸದ ಬಿ.ವೈ. ರಾಘವೇಂದ್ರ-Press Day celebration in Bhadravati: Prioritize reliable news – MP B.Y. Raghavendra

 SUDDILIVE || BHADRAVATHI

ಭದ್ರಾವತಿಯಲ್ಲಿ ಪತ್ರಿಕಾ ದಿನಾಚರಣೆ: ವಿಶ್ವಾಸಾರ್ಹ ಸುದ್ದಿಗೆ ಆದ್ಯತೆ ನೀಡಿ – ಸಂಸದ ಬಿ.ವೈ. ರಾಘವೇಂದ್ರ-Press Day celebration in Bhadravati: Prioritize reliable news – MP B.Y. Raghavendra

Press, day

ಭದ್ರಾವತಿ: ವೇಗವಾಗಿ ಸುದ್ದಿ ನೀಡುವುದಕ್ಕಿಂತ ಅದರ ವಿಶ್ವಾಸಾರ್ಹತೆ ಮತ್ತು ವಸ್ತುನಿಷ್ಠತೆ ಕಾಪಾಡಿಕೊಳ್ಳುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ. ನಿಷ್ಪಕ್ಷಪಾತ ಹಾಗೂ ಸತ್ಯಾಧಾರಿತ ವರದಿಗಾರಿಕೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕವು ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಬೆಳವಣಿಗೆಯಿಂದ ವಿಶ್ವದ ಯಾವುದೇ ಮೂಲೆಯಲ್ಲಿ ನಡೆಯುವ ಘಟನೆಗಳ ಮಾಹಿತಿ ಕ್ಷಣಾರ್ಧದಲ್ಲಿ ಮೊಬೈಲ್‌ ಮೂಲಕ ಲಭ್ಯವಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಯ ನೈಜತೆ ಪ್ರಶ್ನಾರ್ಹವಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಸತ್ಯಾಂಶ ಪರಿಶೀಲಿಸಿ ವಿಶ್ವಾಸಾರ್ಹ ಸುದ್ದಿಗಳನ್ನು ಜನರಿಗೆ ತಲುಪಿಸಬೇಕಾದ ಅಗತ್ಯ ಹೆಚ್ಚಿದೆ ಎಂದು ಅವರು ಹೇಳಿದರು.

ಪತ್ರಿಕೆಗಳು ಪ್ರಜಾಪ್ರಭುತ್ವದ ಉಸಿರಾಗಿದ್ದು, ಜನಪ್ರತಿನಿಧಿಗಳು ಹಾಗೂ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು ಜನರ ಮುಂದಿಡುವ ಮೂಲಕ ಜವಾಬ್ದಾರಿಯನ್ನು ನೆನಪಿಸುವ ಮಹತ್ವದ ಪಾತ್ರವನ್ನು ಮಾಧ್ಯಮಗಳು ನಿರ್ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ನಗರಸಭೆಯ ಹಿರಿಯ ಸದಸ್ಯ ಬಿ.ಕೆ. ಮೋಹನ್ ಮಾತನಾಡಿ, ರಸ್ತೆ ಅಪಘಾತಗಳು ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ರಕ್ತದ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಹೇಳಿದರು.

ಹಿರಿಯ ಪತ್ರಕರ್ತರಿಗೆ ಸನ್ಮಾನ, ರಕ್ತದಾನಿಗಳಿಗೆ ಗೌರವ

ಪತ್ರಿಕಾ ದಿನಾಚರಣೆ ಅಂಗವಾಗಿ ಸಂಘದ ಹಿರಿಯ ಸದಸ್ಯ ಅನಂತಕುಮಾರ್ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು. ಇದೇ ವೇಳೆ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ರಾಜು ನರಸಯ್ಯ, ಹಾಲೇಶಪ್ಪ ಹಾಗೂ ವಿಲ್ಸನ್ ಅವರನ್ನು ಗೌರವಿಸಲಾಯಿತು.

250 ಯೂನಿಟ್‌ ರಕ್ತ ಸಂಗ್ರಹ

ಕಾರ್ಯಕ್ರಮಕ್ಕೂ ಮುನ್ನ ಆಶಾಕಿರಣ ಮಾದಕ ಮತ್ತು ಮದ್ಯವ್ಯಸನ ಪುನರ್ವಸತಿ ಕೇಂದ್ರದ ಫಾ. ಪ್ರಕಾಶ್ ಕೊಲಾಕೊ, ಜೇಡಿಕಟ್ಟೆ ಶ್ರೀ ಮರುಳ ಸಿದ್ದೇಶ್ವರ ಗದ್ದುಗೆ ಮಠದ ತಿಪ್ಪೇಸ್ವಾಮಿ (ರುದ್ರೇಶ ಶಾಸ್ತ್ರಿ) ಹಾಗೂ ಜಮಾಅತೆ ಇಸ್ಲಾಮಿ-ಇ-ಹಿಂದ್ ಅಧ್ಯಕ್ಷ ಸುಲ್ತಾನ್ ಬೇಗ್ ಸರ್ವಧರ್ಮೀಯರ ಪರವಾಗಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಬೆಳಿಗ್ಗೆ 8.30ರಿಂದ ಸಂಜೆ 4 ಗಂಟೆಯವರೆಗೆ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ದಾಖಲೆಯ ಸುಮಾರು 250 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಆಶಾಜ್ಯೋತಿ, ಜೀವ ಸಂಜೀವಿನಿ, ಡಾ. ಬಿ.ಆರ್. ಅಂಬೇಡ್ಕರ್, ರೆಡ್ ಕ್ರಾಸ್, ಸುಬ್ಬಯ್ಯ ಆಸ್ಪತ್ರೆ ಹಾಗೂ ರೋಟರಿ ರಕ್ತನಿಧಿ ಕೇಂದ್ರಗಳು ರಕ್ತ ಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡಿದ್ದವು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಯು. ವೈದ್ಯನಾಥ, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ. ಶಂಕರಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕ ಗೊಂದಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ಸ್ವಾಗತಿಸಿ, ಖಜಾಂಚಿ ಫಿಲೋಮಿನಾ ಆರ್. ಅಂತೋಣಿ ವಂದಿಸಿದರು.

ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ, ಆರ್‌ಎಎಫ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ, ಲಯನ್ಸ್ ಕ್ಲಬ್ ಸೇರಿದಂತೆ 50ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಸೇವಾ ಸಂಘ-ಸಂಸ್ಥೆಗಳು ಬೃಹತ್ ರಕ್ತದಾನ ಶಿಬಿರಕ್ಕೆ ಸಹಕಾರ ನೀಡಿದ್ದು ವಿಶೇಷವಾಗಿತ್ತು.

Press Day celebration in Bhadravati: Prioritize reliable news – MP B.Y. Raghavendra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close