37 ವರ್ಷಗಳ ಬಳಿಕ ಡಕಾಯಿತಿ ಬಂಧನ-Robber arrested after 37 years

 SUDDILIVE || SHIVAMOGGA

37 ವರ್ಷಗಳ ಬಳಿಕ ಡಕಾಯಿತಿ ಬಂಧನ-Robber arrested after 37 years    

Robber, arrest

ಶಿವಮೊಗ್ಗ, ಜುಲೈ 30: ಸುಮಾರು 37 ವರ್ಷಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಗ್ರಾಮದ ಗುಡ್ಡೆಕೊಪ್ಪದಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಮಾಳೂರು ಪೊಲೀಸರು ಕೇರಳ ರಾಜ್ಯದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1989ರಲ್ಲಿ ನಡೆದಿದ್ದ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 63/1989ರಡಿ ಭಾರತೀಯ ದಂಡ ಸಂಹಿತೆಯ (IPC) ಕಲಂ 395ರ ಅನ್ವಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಬ್ದುಲ್ ಖಾದರ್ @ ಮೊಣು (57), ಮೂಲತಃ ಮಂಗಳೂರು ಜಿಲ್ಲೆಯ ಬಜ್ಪೆ ತಾಲೂಕಿನ ಪೆರ್ರ ನಿವಾಸಿಯಾಗಿದ್ದು, ಪ್ರಕರಣ ದಾಖಲಾಗಿದ ನಂತರ ಸುಮಾರು 37 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಶಿವಮೊಗ್ಗ ಸತ್ರ ನ್ಯಾಯಾಲಯವು LPR No.20/2001ರಡಿ ಆತನನ್ನು ಪರಾರಿಯಾಗಿರುವ ಆರೋಪಿಯಾಗಿ ಘೋಷಿಸಿತ್ತು.

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಎ.ಜಿ., ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಅರವಿಂದ ಕಲಗುಚ್ಚಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮಾಳೂರು ವೃತ್ತದ ಸಿಪಿಐ ರಾಜಶೇಖರ್ ಹಾಗೂ ಮಾಳೂರು ಪೊಲೀಸ್ ಠಾಣೆಯ ಪಿಎಸ್ಐ ಸುನಿಲ್ ಬಿ.ಸಿ. ಅವರ ನಿರ್ದೇಶನದ ಮೇರೆಗೆ ಠಾಣೆಯ ಸಿಬ್ಬಂದಿಗಳಾದ ಮೇಘರಾಜ್ ಮತ್ತು ಅಭಿಲಾಶ್ ವಿಶೇಷ ಮಾಹಿತಿ ಸಂಗ್ರಹಿಸಿ ಆರೋಪಿಯ ಜಾಡು ಪತ್ತೆಹಚ್ಚಿದರು.

ಆರೋಪಿ ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಪಾಡಿ–ಪುರ ಸಂಗೋಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಪೊಲೀಸ್ ತಂಡ ಕೇರಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಶಿವಮೊಗ್ಗಕ್ಕೆ ಕರೆತಂದಿದೆ.

ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಶಿವಮೊಗ್ಗ ಸತ್ರ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಸುಮಾರು ಮೂರುವರೆ ದಶಕಗಳಷ್ಟು ಹಳೆಯ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿರುವುದು ಶಿವಮೊಗ್ಗ ಜಿಲ್ಲಾ ಪೊಲೀಸರ ಗಮನಾರ್ಹ ಕಾರ್ಯಾಚರಣೆಯಾಗಿ ಪರಿಗಣಿಸಲಾಗಿದೆ. ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಮುಂದುವರಿದಿದೆ.

Robber arrested after 37 years    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close