SUDDILIVE || SHIVAMOGGA
ಬರದಿಂದ ತತ್ತರಿಸಿದ ಮೀನುಮರಿ ಸಾಕಣೆ ರೈತರು: ಸರ್ಕಾರದಿಂದ ₹8.5 ಕೋಟಿ ವಿಶೇಷ ಅನುದಾನಕ್ಕೆ ಆಗ್ರಹ- Drought-hit fish farming farmers demand special grant of ₹8.5 crore from government
ಶಿವಮೊಗ್ಗ, ಜುಲೈ 30: ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಮೀನುಮರಿ ಸಾಕಣೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣವೇ ವಿಶೇಷ ಅನುದಾನ ಬಿಡುಗಡೆ ಮಾಡಿ ಮೀನು ಕೃಷಿಕರನ್ನು ರಕ್ಷಿಸಬೇಕು ಎಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಆಕ್ತಿಕಟ್ಟೆ ಗ್ರಾಮದ ಮೀನು ಕೃಷಿಕ ಕೃಷ್ಣಮೂರ್ತಿ ಒತ್ತಾಯಿಸಿದರು.
ಬರ ಅಧ್ಯಯನ ಸಮಿತಿ ಭೇಟಿ ವೇಳೆ ತಮ್ಮ ಅಳಲು ತೋಡಿಕೊಂಡ ಕೃಷ್ಣಮೂರ್ತಿ, ಕಳೆದ 15–16 ವರ್ಷಗಳಿಂದ ಮೀನುಮರಿ ಸಾಕಣೆಯನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ನೂರಾರು ರೈತರು ಇಂದು ಬದುಕಿನ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಅವರು ಮಾತನಾಡಿ, ಆರಂಭದಲ್ಲಿ ಸ್ಥಳೀಯ ಅಧಿಕಾರಿಗಳು ತರಬೇತಿ ನೀಡಿ ಮೀನುಮರಿ ಸಾಕಣೆ ಆರಂಭಿಸಲು ಪ್ರೋತ್ಸಾಹಿಸಿದ್ದರು. ಆ ಬಳಿಕ ಹಂತಹಂತವಾಗಿ ಬೆಳೆಯುತ್ತಾ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಮೀನುಮರಿಗಳನ್ನು ಪೂರೈಕೆ ಮಾಡುತ್ತಿದ್ದೇವೆ. ಸರ್ಕಾರವೂ ನಮ್ಮಿಂದ ಮೀನುಮರಿಗಳನ್ನು ಖರೀದಿಸಿ ಭದ್ರಾ, ತುಂಗಭದ್ರ ಸೇರಿದಂತೆ ರಾಜ್ಯದ 40–45 ಜಲಾಶಯಗಳಿಗೆ ಬಿಡುತ್ತಿತ್ತು ಎಂದು ವಿವರಿಸಿದರು.
ಒಂದು ಕಾಲದಲ್ಲಿ ಶಿವಮೊಗ್ಗ ವಲಯದಲ್ಲೇ 600 ರಿಂದ 700 ರೈತರು ಮೀನುಮರಿ ಸಾಕಣೆ ನಡೆಸುತ್ತಿದ್ದರು. ರಾಜ್ಯಾದ್ಯಂತ ಸುಮಾರು 800 ರಿಂದ 900 ರೈತರು ಈ ಉದ್ಯಮವನ್ನು ಅವಲಂಬಿಸಿದ್ದರು. ಹಿಂದಿನ ಸರ್ಕಾರ ಮೀನುಮರಿ ಖರೀದಿಗಾಗಿ ಸುಮಾರು ₹20 ಕೋಟಿ ಅನುದಾನ ನೀಡುತ್ತಿತ್ತು. ಆದರೆ ನಂತರ ಅದು ₹2 ಕೋಟಿಗೆ ಇಳಿಯಿತು. ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಮುಂದಿನ ವರ್ಷ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರೂ ಕಳೆದ ಮೂರು ವರ್ಷಗಳಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಆರೋಪಿಸಿದರು.
ಈ ಬಾರಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಬಜೆಟ್‌ನಲ್ಲೇ ಮೀನುಮರಿ ಖರೀದಿಗೆ ಅನುದಾನ ಮೀಸಲಿಡಲಾಗಿಲ್ಲ. ಇದರಿಂದ ನೂರಾರು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಐದುಕ್ಕೂ ಹೆಚ್ಚು ತಳಿಯ ಮೀನುಮರಿಗಳ ಸಾಕಣೆ
ಕಟ್ಲಾ, ಗೌರಿ, ರೋಹು, ಗ್ರಾಸ್ ಕಾರ್ಪ್ ಸೇರಿದಂತೆ ಐದಾರು ತಳಿಯ ಮೀನುಮರಿಗಳನ್ನು ಸಾಕಣೆ ಮಾಡಲಾಗುತ್ತದೆ. ಸರ್ಕಾರ ಕಟ್ಲಾ ಹಾಗೂ ಗ್ರಾಸ್ ಕಾರ್ಪ್ ಮೀನುಮರಿಗಳಿಗೆ ತಲಾ ₹1.50 ಹಾಗೂ ಉಳಿದ ತಳಿಗಳಿಗೆ ₹1.20 ದರದಲ್ಲಿ ಖರೀದಿ ಮಾಡುತ್ತಿತ್ತು ಎಂದು ತಿಳಿಸಿದರು.
ಮಳೆ ಕೊರತೆ, ಮೇವು ಬೆಲೆ ಏರಿಕೆ ರೈತರಿಗೆ ಡಬಲ್ ಹೊಡೆತ
ಈ ವರ್ಷ ಮಳೆ ಕೊರತೆಯಿಂದ ಕೆರೆಗಳಲ್ಲಿ ನೀರಿಲ್ಲ. ಬೋರ್‌ವೆಲ್ ಇರುವ ರೈತರು ಮಾತ್ರ ಮೀನುಮರಿ ಸಾಕಲು ಸಾಧ್ಯವಾಗಿದೆ. ಸುಮಾರು 75 ಶೇಕಡಾ ರೈತರು ಬೋರ್ ನೀರಿನ ಅವಲಂಬನೆಯಲ್ಲಿದ್ದು, ಉಳಿದವರಿಗೆ ಸಾಕಣೆ ನಡೆಸುವುದು ಅಸಾಧ್ಯವಾಗಿದೆ ಎಂದು ಹೇಳಿದರು.
ಮೀನುಗಳಿಗೆ ಆಹಾರವಾಗಿ ಬಳಸುವ ಶೇಂಗಾ ಹಿಂಡಿ 30 ಕೆಜಿ ಚೀಲದ ಬೆಲೆ ₹1,100ರಿಂದ ₹1,800ಕ್ಕೆ ಏರಿಕೆಯಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೂ ವ್ಯಾಪಾರಸ್ಥರು ಕೂಡ ಕೆರೆಗಳು ತುಂಬದ ಕಾರಣ ಮೀನುಮರಿ ಖರೀದಿಸಲು ಮುಂದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ವರ್ಷಪೂರ್ತಿ ಶ್ರಮದ ಕೆಲಸ
ಮೀನುಮರಿ ಸಾಕಣೆ ಅತ್ಯಂತ ಶ್ರಮದಾಯಕ ಕೆಲಸವಾಗಿದ್ದು, ಕೆರೆಗಳನ್ನು ಸ್ವಚ್ಛಗೊಳಿಸುವುದು, ಸುಣ್ಣ ಹಾಗೂ ಅಗತ್ಯ ರಾಸಾಯನಿಕಗಳನ್ನು ಬಳಸಿ ನೀರನ್ನು ಸಿದ್ಧಪಡಿಸುವುದು, ಖನಿಜಾಂಶ ಹೆಚ್ಚಿಸುವುದು, ನಂತರ ಸ್ಪಾನ್‌ಗಳನ್ನು ಬಿಡುವುದು ಸೇರಿದಂತೆ ಹಲವು ಹಂತಗಳ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಹವಾಮಾನದಲ್ಲಿ ಸಮತೋಲನ ಇಲ್ಲದಿದ್ದರೆ ಮೀನುಮರಿಗಳು ಸಂಪೂರ್ಣ ನಾಶವಾಗುವ ಅಪಾಯವಿದೆ ಎಂದು ವಿವರಿಸಿದರು.
ಒಂದು ಎಕರೆಗೆ ₹2–3 ಲಕ್ಷ ಹೂಡಿಕೆ
ಒಂದು ಎಕರೆ ಮೀನುಮರಿ ಸಾಕಣೆಗೆ ಕೆರೆ ಸಿದ್ಧಪಡಿಸಲು ₹2 ರಿಂದ ₹3 ಲಕ್ಷವರೆಗೆ ವೆಚ್ಚವಾಗುತ್ತದೆ. ರನ್ನಿಂಗ್ ವೆಚ್ಚ, ಸ್ಪಾನ್ ಖರೀದಿ ಸೇರಿದಂತೆ ಆರಂಭಿಕ ಹೂಡಿಕೆ ದೊಡ್ಡ ಪ್ರಮಾಣದಲ್ಲಿರುತ್ತದೆ. ಸುಮಾರು ₹1 ಲಕ್ಷ ಹೂಡಿಕೆ ಮಾಡಿದರೆ ಕೇವಲ ₹1.20 ಲಕ್ಷದಿಂದ ₹1.30 ಲಕ್ಷದವರೆಗೆ ಮಾತ್ರ ಆದಾಯ ಸಿಗುತ್ತದೆ. ಅಂದರೆ ಕೇವಲ ₹30 ಸಾವಿರ ಲಾಭಕ್ಕಾಗಿ ವರ್ಷಪೂರ್ತಿ ಶ್ರಮಿಸಬೇಕಾಗುತ್ತದೆ ಎಂದು ಹೇಳಿದರು.
ಸರ್ಕಾರಕ್ಕೆ ವಿಶೇಷ ಮನವಿ
ಸರ್ಕಾರದಿಂದ ಪ್ರತಿಯೊಬ್ಬ ಮೀನು ಕೃಷಿಕರಿಗೆ ಕನಿಷ್ಠ ₹1 ಲಕ್ಷ ಮೌಲ್ಯದ ಮೀನುಮರಿ ಖರೀದಿ ಆದೇಶ ನೀಡಬೇಕು. ಒಟ್ಟು ₹8 ರಿಂದ ₹8.5 ಕೋಟಿ ಅನುದಾನ ಬಿಡುಗಡೆ ಮಾಡಿದರೆ ರಾಜ್ಯದ ನೂರಾರು ಮೀನುಮರಿ ಸಾಕಣೆ ರೈತರ ಬದುಕು ಉಳಿಯುತ್ತದೆ ಎಂದು ಕೃಷ್ಣಮೂರ್ತಿ ಸರ್ಕಾರಕ್ಕೆ ಮನವಿ ಮಾಡಿದರು.

