SUDDILIVE || SHIVAMOGGA
ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ರಾಜ್ಯವ್ಯಾಪಿ ವರ್ಗಾವಣೆ; ಶಿವಮೊಗ್ಗ ಜಿಲ್ಲೆಯ ನಾಲ್ವರು ಅಧಿಕಾರಿಗಳಿಗೂ ಸ್ಥಳಾಂತರ-Statewide transfers in the Department of Mines and Geology; Four officers from Shivamogga district also transferred
ಶಿವಮೊಗ್ಗ, ಜು.21: ರಾಜ್ಯ ಸರ್ಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ರಾಜ್ಯವ್ಯಾಪಿ 160 ಅಧಿಕಾರಿಗಳನ್ನು (131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು, 6 ಉಪನಿರ್ದೇಶಕರು) ಸಾಮೂಹಿಕವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಅದರಂತೆ ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲೂ ನಾಲ್ವರು ಅಧಿಕಾರಿಗಳಿಗೆ ಸ್ಥಳಾಂತರವಾಗಿದೆ.
ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದಾದ್ಯಂತ ಇಲಾಖೆಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆದಿರುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಖೆಯ ಹಿರಿಯ ಭೂವಿಜ್ಞಾನಿ ಪಿಕ್ಯಾ ನಾಯ್ಕ್, ಕಿರಿಯ ಭೂವಿಜ್ಞಾನಿ ಪ್ರಿಯಾ ದೊಡ್ಡಗೌಡರ್, ಜ್ಯೋತಿ, ಮಾನಸ ಕಾರ್ಯನಿರ್ವಹಿಸುತ್ತಿದ್ದ ಒಟ್ಟು ಮೂವರು ಅಧಿಕಾರಿಗಳಿಗೆ ವರ್ಗಾವಣೆ ಆದೇಶ ಜಾರಿಯಾಗಿದೆ.
ಲಭ್ಯ ಮಾಹಿತಿಯ ಪ್ರಕಾರ, ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಕ್ಯಾ ನಾಯ್ಕರಿಗೆ ಮಂಗಳೂರುಗೆ ವರ್ಗಾವಣೆ ಮಾಡಲಾಗಿದೆ. ಉಳಿದ ಇಬ್ಬರು ಮಹಿಳಾ ಅಧಿಕಾರಿಗಳಾದ ಜ್ಯೋತಿ ಹಾಗೂ ಪ್ರಿಯಾ ಅವರಿಗೆ ಕ್ರಮವಾಗಿ ದಾವಣಗೆರೆ ಮತ್ತು ಮೈಸೂರು ಜಿಲ್ಲೆಗಳಿಗೆ ವರ್ಗಾವಣೆ ಆದೇಶ ನೀಡಲಾಗಿದೆ.
ಇದೇ ವೇಳೆ, ಶಿವಮೊಗ್ಗ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖಾಲಿಯಾಗಿರುವ ಹುದ್ದೆಗೆ ಬೆಂಗಳೂರು ಮೂಲದ ಚಿದಾನಂದ್ ಅವರನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ವರ್ಗಾವಣೆ ಆದೇಶಗಳು ನಿನ್ನೆ (ಜು.20) ಜಾರಿಯಾಗಿದ್ದು, ಶೀಘ್ರದಲ್ಲೇ ಅಧಿಕಾರಿಗಳು ಹೊಸ ಕರ್ತವ್ಯ ಸ್ಥಳಗಳಲ್ಲಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರದ ಆಡಳಿತಾತ್ಮಕ ಪುನರ್‌ವ್ಯವಸ್ಥೆಯ ಭಾಗವಾಗಿ ಈ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳ ಅಧಿಕಾರಿಗಳನ್ನು ಪರಸ್ಪರ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೇ ತಿಂಗಳಿಂದ ಅಕ್ರಮ ಮರಳುಗಾರಿಕೆಗೆ ಬ್ರೇಕ್
ಅಕ್ರಮ ಮರಳುಗಾರಿಕೆಗೆ ಲೋಕಾಯುಕ್ತರ ದಾಳಿ ನಡೆದ ಮೇಲೆ ಶಿವಮೊಗ್ಗ ತಾಲೂಕಿನಲ್ಲಿ ಬ್ರೇಕ್ ಬಿದ್ದಿದೆ. ಲೋಕಾಯುಕ್ತರ ದಾಳಿಯ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಲೋಪಗಳು ಸಾಕಷ್ಟು ಕಂಡು ಬಂದಿದ್ದವು. ಒಂದು ವೇಳೆ ಈ ದಾಳಿ ನಡೆಯದಿದ್ದರೆ ಇನ್ನೂ ಎರಡು ತಿಂಗಳು ಅಕ್ರಮ ಮರಳುಗಾರಿಕೆ ನಡೆಯುವ ಸಾಧ್ಯತೆಗಳೆ ಹೆಚ್ಚಿದ್ದವು ಎಂಬ ಮಾತು ಕೇಳಿ ಬರುತ್ತಿವೆ. ಏನೇ ಆದರು ಶಿವಮೊಗ್ಗದಲ್ಲಿ ಈಗಿನ ಅಧಿಕಾರಿಗಳಂತೆಯೆ ಮುಂದಿನ ಅಧಿಕಾರಿಗಳು ಬರ್ತಾರಾ ಅಥವಾ ಖಡಕ್ ಅಧಿಕಾರಿಗಳಾಗಿ ಚಿದಾನಂದ ಆಗಮಿಸುತ್ತಾರಾ ಎಂಬುದು ಕಾದು ನೋಡಬೇಕಿದೆ.
