SUDDILIVE || THIRTHAHALLI
ತೀರ್ಥಹಳ್ಳಿ: ಕೆರೆಯಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು- Thirthahalli: Man dies after slipping and falling into lake
ತೀರ್ಥಹಳ್ಳಿ, ಜು. 22: ಜಮೀನಿನಲ್ಲಿದ್ದ ಕೆರೆಯ ಬಳಿ ಪಂಪ್‌ಸೆಟ್ ಎತ್ತಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರು ತುಂಬಿದ್ದ ಕೆರೆಗೆ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಟೆಂಕಬೈಲು ಸಮೀಪದ ತುಂಬುಕೋಡುವಿನಲ್ಲಿ ನಡೆದಿದೆ.
ಮೃತರನ್ನು ಟೆಂಕಬೈಲಿನ ತುಂಬುಕೋಡುವಿನ ಉಮೇಶ್ (43) ಎಂದು ಗುರುತಿಸಲಾಗಿದೆ. ಇವರು ಮೂಲತಃ ಕೊಪ್ಪ ತಾಲೂಕಿನವರಾಗಿದ್ದು, ತೋಟದ ಕೆಲಸದ ನಿಮಿತ್ತ ಟೆಂಕಬೈಲು ಗ್ರಾಮದಲ್ಲಿರುವ ತಮ್ಮ ಮನೆಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಬುಧವಾರ ಜಮೀನಿನಲ್ಲಿದ್ದ ಪಂಪ್‌ಸೆಟ್ ಅನ್ನು ಎತ್ತಲು ತೆರಳಿದ್ದ ವೇಳೆ ಪಂಪ್‌ಸೆಟ್ ಸಮೀಪದಲ್ಲೇ ಇದ್ದ ನೀರು ತುಂಬಿದ ಕೆರೆಯ ಬಳಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಉಮೇಶ್ ಅವರಿಗೆ ನೀರಿನಿಂದ ಹೊರಬರಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀರ್ಥಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
