ಸುದ್ದಿಲೈವ್ ಬಿಗ್ ಇಂಪ್ಯಾಕ್ಟ್: ಶಂಕರಮಠ ರಸ್ತೆ ಒತ್ತುವರಿಗೆ ಬ್ರೇಕ್ – ಪಾಲಿಕೆ, ಸಂಚಾರಿ ಪೊಲೀಸ್, ಆರ್‌ಟಿಒ ಜಂಟಿ ಕಾರ್ಯಾಚರಣೆ-SuddiLive Big Impact: Break for those encroaching on Shankara Math road – joint operation by the corporation, traffic police, RTO

 SUDDILIVE || SHIVAMOGGA

ಸುದ್ದಿಲೈವ್ ಬಿಗ್ ಇಂಪ್ಯಾಕ್ಟ್: ಶಂಕರಮಠ ರಸ್ತೆ ಒತ್ತುವರಿಗೆ ಬ್ರೇಕ್ – ಪಾಲಿಕೆ, ಸಂಚಾರಿ ಪೊಲೀಸ್, ಆರ್‌ಟಿಒ ಜಂಟಿ ಕಾರ್ಯಾಚರಣೆ-SuddiLive Big Impact: Break for those encroaching on Shankara Math road – joint operation by the corporation, traffic police, RTO   
Suddi, live

ಶಿವಮೊಗ್ಗ: ನಗರದ ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಶಂಕರಮಠ ರಸ್ತೆಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ರಸ್ತೆ ಹಾಗೂ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ಬುಧವಾರ ಬಿಗ್ ಶಾಕ್ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ, ಸಂಚಾರಿ ಪೊಲೀಸ್ ಹಾಗೂ ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ಖಡಕ್ ಕಾರ್ಯಾಚರಣೆ ನಡೆಸಿ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿದರು.

ಈ ಕಾರ್ಯಾಚರಣೆ ಸುದ್ದಿಲೈವ್ ನಿರಂತರವಾಗಿ ಎತ್ತಿಹಿಡಿದಿದ್ದ ಸಾರ್ವಜನಿಕ ಸಮಸ್ಯೆಗೆ ದೊರೆತ ಮಹತ್ವದ ಸ್ಪಂದನೆ ಎನ್ನಲಾಗುತ್ತಿದೆ. ರಸ್ತೆ ಒತ್ತುವರಿ, ವಾಹನ ನಿಲುಗಡೆ ಹಾಗೂ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗಳ ಕುರಿತು ಸುದ್ದಿಲೈವ್ ವರದಿ ಪ್ರಕಟಿಸಿದ ಬಳಿಕ ಸಂಬಂಧಿಸಿದ ಇಲಾಖೆ ಚುರುಕುಗೊಂಡು ಕ್ರಮ ಕೈಗೊಂಡಿದೆ.

ವಾಹನ ಸಂಚಾರಕ್ಕೆ ತೀವ್ರ ಅಡಚಣೆ

ಶಂಕರಮಠ ರಸ್ತೆಯ ಎರಡೂ ಬದಿಯಲ್ಲಿರುವ ಕೆಲವು ವಾಣಿಜ್ಯ ಸಂಕೀರ್ಣಗಳು ಹಾಗೂ ಅಂಗಡಿ ಮಾಲೀಕರು ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ಚಟುವಟಿಕೆ ನಡೆಸುತ್ತಿದ್ದರು. ಅಂಗಡಿಗಳ ಮುಂದೆ ವಸ್ತುಗಳನ್ನು ಇಡುವುದು, ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸುವುದು ಹಾಗೂ ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡ ಪರಿಣಾಮ ಪಾದಚಾರಿಗಳು ರಸ್ತೆಯಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ವಾಹನ ಸಂಚಾರವೂ ಆಗಾಗ್ಗೆ ಅಸ್ತವ್ಯಸ್ತವಾಗುತ್ತಿತ್ತು.

ಎರಡು ದಿನಗಳ ಗಡುವಿನ ಬಳಿಕ ಖಡಕ್ ಕ್ರಮ

ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯಾಚರಣೆಗೆ ಮುನ್ನ ಎರಡು ದಿನಗಳ ಕಾಲ ಸಂಬಂಧಪಟ್ಟ ವ್ಯಾಪಾರಿಗಳಿಗೆ ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ ಕೆಲವರು ಸೂಚನೆಯನ್ನು ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ಜಂಟಿ ಕಾರ್ಯಾಚರಣೆ ನಡೆಸಿ ಅತಿಕ್ರಮಣಗಳನ್ನು ತೆರವುಗೊಳಿಸಿದರು.

ಕಾರ್ಯಾಚರಣೆಯಲ್ಲಿ ರಸ್ತೆ ಮೇಲೆ ಇಡಲಾಗಿದ್ದ ವಸ್ತುಗಳು, ಜಾಹೀರಾತು ಫಲಕಗಳು ಹಾಗೂ ಸಂಚಾರಕ್ಕೆ ಅಡ್ಡಿಯಾಗಿದ್ದ ಇತರೆ ಒತ್ತುವರಿಗಳನ್ನು ತೆರವುಗೊಳಿಸಿ ರಸ್ತೆ ಮುಕ್ತಗೊಳಿಸಲಾಯಿತು.

ಶಾಶ್ವತ ಪರಿಹಾರ ಸಿಗುತ್ತಾ?

ಈ ಹಿಂದೆಯೂ ಇಂತಹ ಕಾರ್ಯಾಚರಣೆಗಳು ನಡೆದಿದ್ದರೂ, ಕೆಲ ವ್ಯಾಪಾರಿಗಳು ಒಂದು ಅಥವಾ ಎರಡು ದಿನಗಳ ಬಳಿಕ ಮತ್ತೆ ಹಳೆಯ ರೀತಿಯಲ್ಲೇ ರಸ್ತೆ ಒತ್ತುವರಿ ನಡೆಸಿರುವ ಉದಾಹರಣೆಗಳಿವೆ. ಈ ಕಾರಣದಿಂದ ಇಂದಿನ ಕಾರ್ಯಾಚರಣೆ ಕೇವಲ ಒಂದು ದಿನದ ಮಟ್ಟಿಗೆ ಸೀಮಿತವಾಗದೆ, ನಿರಂತರವಾಗಿ ಮೇಲ್ವಿಚಾರಣೆ ನಡೆಸಿ ಶಾಶ್ವತವಾಗಿ ರಸ್ತೆ ಒತ್ತುವರಿ ತಡೆಯಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಮುಂದಿನ ದಿನಗಳಲ್ಲಿ ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಇಲಾಖೆ ನಿರಂತರ ನಿಗಾ ವಹಿಸಿ ಮತ್ತೆ ಒತ್ತುವರಿ ನಡೆಯದಂತೆ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಕಾದು ನೋಡಬೇಕಿದೆ.

ಸಾರ್ವಜನಿಕರಿಂದ ಮೆಚ್ಚುಗೆ

ನಗರದ ಪ್ರಮುಖ ರಸ್ತೆಯಲ್ಲಿ ನಡೆದ ಈ ಕಾರ್ಯಾಚರಣೆಗೆ ಸಾರ್ವಜನಿಕರು ಸ್ವಾಗತ ವ್ಯಕ್ತಪಡಿಸಿದ್ದು, ನಗರದಲ್ಲಿ ಇತರೆ ಪ್ರಮುಖ ರಸ್ತೆಗಳಲ್ಲಿಯೂ ಇದೇ ರೀತಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಆಗ್ರಹಿಸಿದ್ದಾರೆ. ನಗರದಲ್ಲಿ ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ನಿರಂತರ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

SuddiLive Big Impact: Break for those encroaching on Shankara Math road – joint operation by the corporation, traffic police, RTO

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close