ಒಂದು ವರ್ಷದ ಬಳಿಕ ಬಯಲಾಯ್ತು ಅಪ್ರಾಪ್ತೆಯ ಸಾವಿನ ರಹಸ್ಯ- The mystery of the minor's death is revealed after a year

 SUDDILIVE || SHIVAMOGGA

ಒಂದು ವರ್ಷದ ಬಳಿಕ ಬಯಲಾಯ್ತು ಅಪ್ರಾಪ್ತೆಯ ಸಾವಿನ ರಹಸ್ಯ-  The mystery of the minor's death is revealed after a year  

Mystery, minors

ಶಿವಮೊಗ್ಗ: ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿದ್ದ 16½ ವರ್ಷದ ಅಪ್ರಾಪ್ತ ಬಾಲಕಿ ಸಂಗೀತಾಳ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ನಾಪತ್ತೆ ಪ್ರಕರಣವೆಂದು ದಾಖಲಾಗಿದ್ದ ಈ ಪ್ರಕರಣದ ತನಿಖೆಯಲ್ಲಿ, ಬಾಲಕಿ ಪಿಜಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ನಾಲ್ವರು ಸೇರಿ ಪೊಲೀಸರಿಗೆ ಮಾಹಿತಿ ನೀಡದೆ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಸಿದ್ದಾಪುರ ವ್ಯಾಪ್ತಿಯ ಮಾವಿನಗುಂಡಿ ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾಧ್ಯಮಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿ, ಇದು ಅತ್ಯಂತ ಸಂಕೀರ್ಣ ತನಿಖೆಯಾಗಿದ್ದು, ಇನ್ನೂ ವೈಜ್ಞಾನಿಕ ಸಾಕ್ಷ್ಯಾಧಾರಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಮಿಸ್ಸಿಂಗ್ ಪ್ರಕರಣದಿಂದ ಆರಂಭವಾದ ತನಿಖೆ

ಪೊಲೀಸರ ಮಾಹಿತಿ ಪ್ರಕಾರ, ತರಳಘಟ್ಟ ಗ್ರಾಮದ ಮೂಲದ ಅಪ್ರಾಪ್ತೆ (16½) ಕಳೆದ ವರ್ಷದ ಜೂನ್ 18, 2025ರಂದು ನಾಪತ್ತೆಯಾಗಿದ್ದಳು. ಆದರೆ ಆಕೆಯ ತಂದೆ ಜುಲೈ 3ರಂದು ಶಿಕಾರಿಪುರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಸಾಕ್ಷ್ಯಗಳು ಹಾಗೂ ಇತರೆ ಮಾಹಿತಿಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದರು.

ಪಿಜಿಯಲ್ಲೇ ನೇಣಿಗೆ ಶರಣು

ತನಿಖೆಯಲ್ಲಿ ಅಪ್ರಾಪ್ತೆ ಶಿಕಾರಿಪುರದಲ್ಲಿನ ಖಾಸಗಿ ಪಿಜಿಯಲ್ಲಿ ವಾಸಿಸುತ್ತಿದ್ದ ವೇಳೆ ಜೂನ್ 18, 2025ರಂದು ಅದೇ ಪಿಜಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಘಟನೆಯ ಬಳಿಕ ಪಿಜಿ ಮಾಲಕಿ ಸೌಭಾಗ್ಯ, ಗಂಗಾನಾಯಕ್, ರಂಜಿತಾ ಹಾಗೂ ಪೀರಿಯಾನಾಯಕ್ ಎಂಬ ನಾಲ್ವರು ಪೊಲೀಸರಿಗೆ ಮಾಹಿತಿ ನೀಡದೆ ಘಟನೆ ಮುಚ್ಚಿಹಾಕಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೂಟ್‌ಕೇಸ್‌ನಲ್ಲಿ ಮೃತದೇಹ ಸಾಗಿಸಿ ಕಾಡಿನಲ್ಲಿ ವಿಲೇವಾರಿ

ಪೊಲೀಸರ ಪ್ರಕಾರ, ನಾಲ್ವರು ಸೇರಿ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ವಾಹನದಲ್ಲಿ ಸಾಗಿಸಿ ಸಿದ್ದಾಪುರ ವ್ಯಾಪ್ತಿಯ ಮಾವಿನಗುಂಡಿ ಪ್ರದೇಶದ ಅರಣ್ಯದಲ್ಲಿ ಎಸೆದಿದ್ದಾರೆ. ಬಳಿಕ ಈ ವಿಷಯವನ್ನು ಯಾರಿಗೂ ತಿಳಿಸದೆ ಒಂದು ವರ್ಷಕ್ಕೂ ಹೆಚ್ಚು ಕಾಲ ಗೌಪ್ಯವಾಗಿ ಇಟ್ಟುಕೊಂಡಿದ್ದರು.

ಇತ್ತೀಚೆಗೆ ಪೊಲೀಸರು ಸ್ಥಳ ಮಹಜರು ನಡೆಸಿ ಅಸ್ಥಿಪಂಜರ ಹಾಗೂ ತಲೆಬುರುಡೆ ಸೇರಿದಂತೆ ಲಭ್ಯವಾದ ಅವಶೇಷಗಳನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯ (FSL)ಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?

ಪ್ರಾಥಮಿಕ ತನಿಖೆಯ ಪ್ರಕಾರ, ಅಪ್ರಾಪ್ತೆ ಪಿಜಿಯಲ್ಲಿ ವಾಸಿಸುತ್ತಿದ್ದ ಸೌಭಾಗ್ಯ ಮತ್ತು ರಂಜಿತಾ ಕುರಿತು ಪರಸ್ಪರ ಚಾಡಿ ಹೇಳುತ್ತಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೂವರ ನಡುವೆ ಗಲಾಟೆ ನಡೆದಿತ್ತು.

ಘಟನೆ ನಡೆದ ದಿನ ಪಿಜಿಯ ಕೆಳಭಾಗದಲ್ಲಿದ್ದ ಬ್ಯೂಟಿ ಪಾರ್ಲರ್‌ನಲ್ಲಿ ಸೌಭಾಗ್ಯ, ಗಂಗಾನಾಯಕ್ ಹಾಗೂ ರಂಜಿತಾ ಅಪ್ರಾಪ್ತೆಯನ್ನ ಪ್ರಶ್ನಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಮಾತಿನ ಚಕಮಕಿ ನಡೆದಿದ್ದು, ದೈಹಿಕ ಹಲ್ಲೆಯೂ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಸಂಗೀತಾ ಮೇಲ್ಮಹಡಿಗೆ ತೆರಳಿ ನೇಣು ಬಿಗಿದುಕೊಂಡಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ತಾಂತ್ರಿಕ ಸಾಕ್ಷ್ಯದಿಂದ ಬಯಲಾಯ್ತು ಸತ್ಯ

ಅಪ್ರಾಪ್ತೆ ಒಂದು ವರ್ಷದವರೆಗೆ ಮೊಬೈಲ್ ಬಳಸದೇ ಇದ್ದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕೊನೆಯದಾಗಿ ರಂಜಿತಾ ಜೊತೆ ಮಾತನಾಡಿದ್ದ ಮಾಹಿತಿ ತಾಂತ್ರಿಕ ತನಿಖೆಯಲ್ಲಿ ಲಭ್ಯವಾಯಿತು. ಈ ಸುಳಿವಿನ ಆಧಾರದಲ್ಲಿ ರಂಜಿತಾಳನ್ನು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಅಂಶಗಳು ಬಹಿರಂಗಗೊಂಡವು.

ಪ್ರೇಮಿಗಳ ಜಗಳವೇ ಪ್ರಕರಣ ಬಯಲಿಗೆ ಬರಲು ಕಾರಣ

ಪೊಲೀಸರ ಪ್ರಕಾರ, ರಂಜಿತಾ ಮತ್ತು ಪೀರಿಯಾನಾಯಕ್ ನಡುವೆ ನಡೆದ ವೈಯಕ್ತಿಕ ಜಗಳದ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಹೊರಬಂದಿದ್ದವು. ಅದನ್ನೇ ಪ್ರಮುಖ ಸುಳಿವಾಗಿ ಪಡೆದು ತನಿಖೆ ಮುಂದುವರಿಸಿದಾಗ ಮೃತದೇಹ ವಿಲೇವಾರಿ ಮಾಡಿದ ಸಂಗತಿ ಬೆಳಕಿಗೆ ಬಂದಿದೆ.

ಅಪ್ರಾಪ್ತೆಯ ಕುಟುಂಬದ ಹಿನ್ನೆಲೆ

ಅಪ್ರಾಪ್ತೆ ಎಂಟನೇ ತರಗತಿಯ ನಂತರ ವಿದ್ಯಾಭ್ಯಾಸ ನಿಲ್ಲಿಸಿದ್ದಳು. ತಾಯಿ ಕುಟುಂಬವನ್ನು ತೊರೆದಿದ್ದು, ತಂದೆ ಮದ್ಯಪಾನದ ಚಟದಿಂದ ಆಕೆಯ ಆರೈಕೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ. ಉದ್ಯೋಗ ಹುಡುಕಿಕೊಂಡು ಬಂದಿದ್ದ ಆಕೆಯನ್ನ ಪಿಜಿ ಮಾಲಕಿ ಸೌಭಾಗ್ಯ ತನ್ನ ಮಗಳಂತೆ ನೋಡಿಕೊಳ್ಳುತ್ತಿದ್ದಳು ಎಂದು  ಅಧಿಕಾರಿಗಳು ಹೇಳಿದ್ದಾರೆ.

ಪಿಜಿಯಲ್ಲಿ ಅಕ್ರಮ ಚಟುವಟಿಕೆ ನಡೆದಿತ್ತೇ?

ಈ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿ, ಪಿಜಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆದಿರುವ ಬಗ್ಗೆ ಇದುವರೆಗೆ ಸಾಕ್ಷ್ಯ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸ್ ನೆರವು ಆರೋಪಕ್ಕೆ ಉತ್ತರ

ಪ್ರಕರಣದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಸಹಕಾರ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್‌ಪಿ, ಇದುವರೆಗೆ ಅಂತಹ ಯಾವುದೇ ಸಾಕ್ಷ್ಯ ದೊರೆತಿಲ್ಲ. ತನಿಖೆಯಲ್ಲಿ ಅಂತಹ ಮಾಹಿತಿ ಲಭ್ಯವಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ನೂ ತನಿಖೆ ಮುಂದುವರಿಕೆ

ಮೃತದೇಹದ ಅವಶೇಷಗಳ ವೈಜ್ಞಾನಿಕ ಪರೀಕ್ಷೆ, ಸಾಕ್ಷಿದಾರರ ವಿಚಾರಣೆ ಹಾಗೂ ಇತರೆ ಸಾಕ್ಷ್ಯ ಸಂಗ್ರಹ ಕಾರ್ಯ ಇನ್ನೂ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷ್ಯಗಳು ದೊರೆತರೆ ಹೆಚ್ಚುವರಿ ಆರೋಪಗಳನ್ನು ಸೇರಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ಮಾಧ್ಯಮದವರಿಗೆ ಎಸ್‌ಪಿ ಮನವಿ ಮಾಡಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಅತ್ಯಾಚಾರ ಅಥವಾ ಕೊಲೆ ಪ್ರಕರಣ ಎಂದು ಊಹಿಸಿ ವರದಿ ಮಾಡದಂತೆ ವಿನಂತಿಸಿದರು. ಪ್ರಸ್ತುತ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಸಂಪೂರ್ಣವಾಗಿ ಹೊರಬಂದ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

The mystery of the minor's death is revealed after a year  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close