ಶಿವಮೊಗ್ಗ ಜಿಲ್ಲೆಯ ಮೂವರು ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ರಾಜ್ಯಮಟ್ಟದ ಪ್ರತಿಷ್ಠಿತ ದತ್ತಿ ಪ್ರಶಸ್ತಿ-Three journalists from Shivamogga district awarded KUWJ state-level prestigious charitable award

SUDDILIVE || SHIVAMOGGA

ಶಿವಮೊಗ್ಗ ಜಿಲ್ಲೆಯ ಮೂವರು ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ರಾಜ್ಯಮಟ್ಟದ ಪ್ರತಿಷ್ಠಿತ ದತ್ತಿ ಪ್ರಶಸ್ತಿ-Three journalists from Shivamogga district awarded KUWJ state-level prestigious charitable award    
Journalist, award

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ನೀಡುವ 2025ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿಗಳಿಗೆ ಶಿವಮೊಗ್ಗ ಜಿಲ್ಲೆಯ ಮೂವರು ಹಿರಿಯ ಪತ್ರಕರ್ತರು ಆಯ್ಕೆಯಾಗಿದ್ದು, ಜಿಲ್ಲೆಯ ಪತ್ರಿಕೋದ್ಯಮಕ್ಕೆ ಇದು ಮತ್ತೊಂದು ಹೆಮ್ಮೆಯ ಗರಿಯಾಗಿದೆ.

ಹಿರಿಯ ಪತ್ರಕರ್ತ ಜಿ. ವಾದಿರಾಜ್ ಕಮರೂರು, ಹಿರಿಯ ಪತ್ರಿಕೋದ್ಯಮಿ ಕಣ್ಣಪ್ಪ (ಭದ್ರಾವತಿ) ಹಾಗೂ ಶಿವಮೊಗ್ಗ ಮೂಲದ ಹಿರಿಯ ಪತ್ರಕರ್ತ ಶ್ರೀಕಾಂತ್ ಭಟ್ ಅವರು ವಿವಿಧ ವಿಭಾಗಗಳ ಪ್ರತಿಷ್ಠಿತ ದತ್ತಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕರ್ನಾಟಕದ ಹಿರಿಯ ಪತ್ರಕರ್ತರ ಸ್ಮರಣಾರ್ಥ ಪ್ರತಿ ವರ್ಷ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಈ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿದ್ದು, ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಗೌರವಿಸುವ ಪರಂಪರೆಯನ್ನು ಮುಂದುವರಿಸಿದೆ.

ಮೂರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಶಿವಮೊಗ್ಗದ ಸಾಧಕರು

2025ನೇ ಸಾಲಿನ "ಶ್ರೀ ಎಂ. ನಾಗೇಂದ್ರರಾವ್ ದತ್ತಿ ಪ್ರಶಸ್ತಿ"ಗೆ ಭದ್ರಾವತಿಯ ಹಿರಿಯ ಪತ್ರಿಕೋದ್ಯಮಿ ಕಣ್ಣಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

"ಎಸ್.ಎಚ್. ರಂಗಸ್ವಾಮಿ ದತ್ತಿ ಪ್ರಶಸ್ತಿ"ಗೆ ಹೊಸದಿಗಂತ ಕನ್ನಡ ದಿನಪತ್ರಿಕೆಯ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕರಾದ ಜಿ. ವಾದಿರಾಜ್ ಕಮರೂರು ಆಯ್ಕೆಯಾಗಿದ್ದಾರೆ.

ಇನ್ನು "ಮಿಂಚು ಶ್ರೀನಿವಾಸ್ ದತ್ತಿ ಪ್ರಶಸ್ತಿ"ಗೆ ವಿಜಯವಾಣಿ ಪತ್ರಿಕೆಯ ಬೆಂಗಳೂರು ರಾಜಕೀಯ ವಿಭಾಗದ ಮುಖ್ಯ ವರದಿಗಾರ ಹಾಗೂ ಶಿವಮೊಗ್ಗ ಮೂಲದ ಶ್ರೀಕಾಂತ್ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ಪತ್ರಕರ್ತರ ಸ್ಮರಣಾರ್ಥ ಪ್ರಶಸ್ತಿ

ಶಿವಮೊಗ್ಗ ಜಿಲ್ಲೆಯ ಪತ್ರಿಕೋದ್ಯಮದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ದಿವಂಗತ ಎಂ. ನಾಗೇಂದ್ರರಾವ್, ದಿವಂಗತ ಎಸ್.ಎಚ್. ರಂಗಸ್ವಾಮಿ ಹಾಗೂ ದಿವಂಗತ ಮಿಂಚು ಶ್ರೀನಿವಾಸ್ ಅವರ ಸ್ಮರಣಾರ್ಥ ಈ ದತ್ತಿ ಪ್ರಶಸ್ತಿಗಳನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿವರ್ಷ ಪ್ರದಾನ ಮಾಡುತ್ತಿದ್ದು, ರಾಜ್ಯದ ಪತ್ರಕರ್ತರಿಗೆ ಇದು ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲಿ ಒಂದಾಗಿದೆ.

ಜಿ. ವಾದಿರಾಜ್ ಕಮರೂರು – 17 ವರ್ಷಗಳ ವೃತ್ತಿಪರ ಪತ್ರಿಕೋದ್ಯಮಕ್ಕೆ ಗೌರವ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಜಿ. ವಾದಿರಾಜ್ ಕಮರೂರು, ಶಿವಮೊಗ್ಗದ ಖ್ಯಾತ ನಾವಿಕ ಕನ್ನಡ ದಿನಪತ್ರಿಕೆಯಲ್ಲಿ ವರದಿಗಾರರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು.

ಕಳೆದ 17 ವರ್ಷಗಳಿಂದ ಹೊಸದಿಗಂತ ದಿನಪತ್ರಿಕೆಯಲ್ಲಿ ವರದಿಗಾರ, ಉಪಸಂಪಾದಕ ಹಾಗೂ ಪ್ರಸ್ತುತ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ವೃತ್ತಿಪರತೆ, ನಿಷ್ಠೆ ಮತ್ತು ಪತ್ರಿಕೋದ್ಯಮಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಎಸ್.ಎಚ್. ರಂಗಸ್ವಾಮಿ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶ್ರೀಕಾಂತ್ ಭಟ್ – ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಕ್ರಿಯಾಶೀಲ ಪತ್ರಕರ್ತ

ಶಿವಮೊಗ್ಗ ಜಿಲ್ಲೆಯಿಂದ ಪತ್ರಕರ್ತ ವೃತ್ತಿ ಆರಂಭಿಸಿದ ಶ್ರೀಕಾಂತ್ ಭಟ್, ತಮ್ಮ ಪರಿಶ್ರಮ ಮತ್ತು ವೃತ್ತಿಪರತೆಯಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಜಿಲ್ಲೆಯ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಬೆಂಗಳೂರಿನಲ್ಲಿ ಕನ್ನಡಪ್ರಭ ಸೇರಿದಂತೆ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ವಿಜಯವಾಣಿ ಪತ್ರಿಕೆಯ ರಾಜಕೀಯ ವಿಭಾಗದ ಮುಖ್ಯ ವರದಿಗಾರರಾಗಿದ್ದಾರೆ. ರಾಜ್ಯ ರಾಜಕೀಯ ವರದಿಗಾರಿಕೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಇವರಿಗೆ ಮಿಂಚು ಶ್ರೀನಿವಾಸ್ ದತ್ತಿ ಪ್ರಶಸ್ತಿ ಲಭಿಸಿದೆ.

ಕಣ್ಣಪ್ಪ – ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಪತ್ರಿಕಾ ಸೇವೆ

ಭದ್ರಾವತಿಯ ಕಂಠೀರವ ಕನ್ನಡ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಪತ್ರಿಕಾ ವೃತ್ತಿ ಆರಂಭಿಸಿದ ಕಣ್ಣಪ್ಪ, ಕಳೆದ 35 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಉಷಾಮಹಿ ಕನ್ನಡ ದಿನಪತ್ರಿಕೆಯ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಪತ್ರಿಕಾ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಭದ್ರಾವತಿ ಪ್ರೆಸ್ ಟ್ರಸ್ಟ್‌ನಲ್ಲಿ ನಾಯಕತ್ವ ವಹಿಸಿಕೊಂಡು ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿರುವ ಇವರನ್ನು ಎಂ. ನಾಗೇಂದ್ರರಾವ್ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನಗದು ಹಾಗೂ ಫಲಕ ಒಳಗೊಂಡ ಪ್ರಶಸ್ತಿ

ಪ್ರಶಸ್ತಿಯು ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಜುಲೈ 25ರಂದು ಪ್ರಶಸ್ತಿ ಪ್ರದಾನ

ಜುಲೈ 25ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಸಮಾರಂಭದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಈ ಕುರಿತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಮೂವರು ಪತ್ರಕರ್ತರು ರಾಜ್ಯಮಟ್ಟದ ಪ್ರತಿಷ್ಠಿತ ದತ್ತಿ ಪ್ರಶಸ್ತಿಗೆ ಭಾಜನರಾಗಿರುವುದು ಜಿಲ್ಲೆಯ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದ್ದು, ಪತ್ರಕರ್ತರು, ಸಂಘಟನೆಗಳು ಹಾಗೂ ಸಾರ್ವಜನಿಕ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

Three journalists from Shivamogga district awarded KUWJ state-level prestigious charitable award 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close