ಸಾವಿನ ದವಡೆಯಿಂದ ತಂದೆಯನ್ನೇ ರಕ್ಷಿಸಿದ 10 ವರ್ಷದ ಮಗ-ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು-10-year-old son who saved his father from the jaws of death recommended for bravery award

SUDDILIVE || HOSANAGARA

ಸಾವಿನ ದವಡೆಯಿಂದ ತಂದೆಯನ್ನೇ ರಕ್ಷಿಸಿದ 10 ವರ್ಷದ ಮಗ-ಶೌರ್ಯ ಪ್ರಶಸ್ತಿಗೆ ಶಿಫಾರಸ್ಸು-10-year-old son who saved his father from the jaws of death recommended for bravery award 

Father, son

ಹೊಸನಗರ, ಜು.21: ಶರಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ಫಿಟ್ಸ್‌ ಬಂದು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ತಂದೆಯ ಜೀವವನ್ನು 4ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಮಯಪ್ರಜ್ಞೆ, ಧೈರ್ಯ ಮತ್ತು ಚಾಕಚಕ್ಯತೆಯಿಂದ ಉಳಿಸಿದ ಹೃದಯಸ್ಪರ್ಶಿ ಘಟನೆ ಹೊಸನಗರ ತಾಲೂಕಿನ ವಾರಗೋಡು ಸಮೀಪದ ಗೊರಗೋಡು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕನ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ತಾಲೂಕು ಆಡಳಿತವೂ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವ ಭರವಸೆ ನೀಡಿದೆ.

ಮೀನು ಹಿಡಿಯಲು ಹೋದಾಗ ನಡೆದ ಅವಘಡ

ಗೊರಗೋಡು ಗ್ರಾಮದ ನಿವಾಸಿ ಚಂದ್ರು ಅವರು ತಮ್ಮ ಪುತ್ರ ನಂದನ್ ಜೊತೆ ಶರಾವತಿ ನದಿಗೆ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಚಂದ್ರು ಅವರಿಗೆ ದಿಢೀರ್ ಫಿಟ್ಸ್‌ (ಅಪಸ್ಮಾರ) ಕಾಣಿಸಿಕೊಂಡು ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ನದಿಯ ಬಲವಾದ ಹರಿವಿನಿಂದ ಅವರು ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಕೊಚ್ಚಿಕೊಂಡು ಹೋಗಿದ್ದಾರೆ.

ಗಾಬರಿಯಾಗದೆ ಸಮಯಪ್ರಜ್ಞೆ ಮೆರೆದ ಬಾಲಕ

ತಂದೆ ನೀರಿನಲ್ಲಿ ಕೊಚ್ಚಿಹೋಗುವುದನ್ನು ಕಂಡ ನಂದನ್ ಕ್ಷಣಕಾಲವೂ ಗಾಬರಿಯಾಗದೆ, ನದಿಯ ದಡದುದ್ದಕ್ಕೂ ಓಡುತ್ತಾ ತಂದೆಯನ್ನು ಕಣ್ಣಾರೆ ಗಮನಿಸುತ್ತಲೇ ಸಹಾಯಕ್ಕಾಗಿ ಯತ್ನಿಸಿದ್ದಾನೆ. ಬಳಿಕ ಸಮೀಪದ ಮನೆಗಳಿಗೆ ಧಾವಿಸಿ, "ನನ್ನ ತಂದೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ, ದಯವಿಟ್ಟು ಬನ್ನಿ, ಕಾಪಾಡಿ" ಎಂದು ಸ್ಥಳೀಯರ ಬಳಿ ಮನವಿ ಮಾಡಿಕೊಂಡಿದ್ದಾನೆ.

ಜರ್ಕಿನ್‌ ಗುರುತು ನೀಡಿ ರಕ್ಷಣೆಗೆ ನೆರವಾದ ನಂದನ್

ಬಾಲಕನ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇದೇ ವೇಳೆ ನೀರಿನಲ್ಲಿ ತೇಲುತ್ತಿದ್ದ ಜರ್ಕಿನ್‌ ಅನ್ನು ಗಮನಿಸಿದ ನಂದನ್, "ಅದೇ ಸ್ಥಳದಲ್ಲಿ ನನ್ನ ತಂದೆ ಇರಬಹುದು" ಎಂದು ತಿಳಿಸಿದ್ದಾನೆ. ಬಾಲಕ ನೀಡಿದ ಸುಳಿವಿನ ಆಧಾರದ ಮೇಲೆ ಸ್ಥಳೀಯರು ಕೂಡಲೇ ಚಂದ್ರು ಅವರನ್ನು ನದಿಯಿಂದ ಹೊರತೆಗೆದು ಸುರಕ್ಷಿತವಾಗಿ ದಡಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ರಕ್ಷಣೆ ದೊರೆತ ಕಾರಣ ಚಂದ್ರು ಅವರ ಜೀವ ಉಳಿದಿದೆ.

ಸಾಹಸಕ್ಕೆ ಸಾರ್ವಜನಿಕರ ಮೆಚ್ಚುಗೆ

ತಂದೆ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದೆ, ಸಮಯೋಚಿತವಾಗಿ ನಡೆದುಕೊಂಡ ನಂದನ್‌ನ ಸಾಹಸವನ್ನು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕೊಂಡಾಡಿದ್ದಾರೆ. ಆತನ ಬುದ್ಧಿವಂತಿಕೆ ಮತ್ತು ಸಮಯಪ್ರಜ್ಞೆಯಿಂದಲೇ ತಂದೆಯ ಜೀವ ಉಳಿಯಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಡ ದಲಿತ ಕುಟುಂಬದ ಪ್ರತಿಭಾವಂತ ಬಾಲಕ

ನಂದನ್ ಗೊರಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಆತ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ದಲಿತ ಕುಟುಂಬದ ಚಂದ್ರು ಮತ್ತು ಗಾಯತ್ರಿ ದಂಪತಿಯ ಪುತ್ರನಾಗಿದ್ದಾನೆ.

ತಹಶೀಲ್ದಾರ್ ಭೇಟಿ ಮಾಡಿದ ಕುಟುಂಬ

ಘಟನೆ ಬೆಳಕಿಗೆ ಬಂದ ನಂತರ ನಂದನ್ ಹಾಗೂ ಆತನ ಕುಟುಂಬ ಹೊಸನಗರ ತಹಶೀಲ್ದಾರ್ ಭರತ್ ರಾಜ್ ಅವರನ್ನು ಭೇಟಿ ಮಾಡಿತು. ಈ ವೇಳೆ ಬಾಲಕನ ಸಾಹಸವನ್ನು ಶ್ಲಾಘಿಸಿದ ತಹಶೀಲ್ದಾರ್, ತಾಲೂಕು ಆಡಳಿತದ ವತಿಯಿಂದ ಜಿಲ್ಲಾಡಳಿತಕ್ಕೆ ಸಂಪೂರ್ಣ ವರದಿ ಕಳುಹಿಸಿ, ನಂದನ್ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್ ಭರತ್ ರಾಜ್ ಹೇಳಿದ್ದೇನು?

ಈ ಕುರಿತು ಮಾತನಾಡಿದ ತಹಶೀಲ್ದಾರ್ ಭರತ್ ರಾಜ್, "ನಂದನ್ ಮತ್ತು ಆತನ ಕುಟುಂಬ ಇಂದು ನಮ್ಮ ಕಚೇರಿಗೆ ಬಂದಿದ್ದರು. ಅಂದು ನಡೆದ ಘಟನೆ ಕೇಳಿ ಬೇಸರವಾಯಿತು. ಆದರೆ ಬಾಲಕನ ಸಮಯಪ್ರಜ್ಞೆ ಹಾಗೂ ಧೈರ್ಯ ನಿಜಕ್ಕೂ ಮಾದರಿಯಾಗಿದೆ. ತಂದೆ ಜೀವಾಪಾಯದಲ್ಲಿದ್ದ ಸಂದರ್ಭದಲ್ಲೂ ಆತ ಗಾಬರಿಯಾಗದೆ ಗ್ರಾಮಸ್ಥರನ್ನು ಕರೆಸಿ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾನೆ. ಇಂತಹ ಸಾಹಸವನ್ನು ಗುರುತಿಸಿ ತಾಲೂಕು ಆಡಳಿತದಿಂದ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು. ನಂದನ್ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು," ಎಂದು ತಿಳಿಸಿದರು.

ಈ ಘಟನೆ ಸಮಯಪ್ರಜ್ಞೆ, ಧೈರ್ಯ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯಾಗಿ ಹೊರಹೊಮ್ಮಿದ್ದು, ಬಾಲಕ ನಂದನ್‌ನ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

10-year-old son who saved his father from the jaws of death recommended for bravery award

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close