SUDDILIVE || ANAVATTI
ಆನವಟ್ಟಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ದುರಂತ: ಏಣೆಯಿಂದ ಬಿದ್ದು ಮೆಸ್ಕಾಂ ಇಂಜಿನಿಯರ್ ಸಾವು-Tragedy in an under-construction building in Anavatti: MESCOM engineer dies after falling from a ladder
ಆನವಟ್ಟಿ, ಜು. 6: ಆನವಟ್ಟಿ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಕಾಮಗಾರಿ ಪರಿಶೀಲನೆ ವೇಳೆ ಏಣೆಯಿಂದ ಆಯತಪ್ಪಿ ಬಿದ್ದ ಪರಿಣಾಮ ಮೆಸ್ಕಾಂ ಕಿರಿಯ ಇಂಜಿನಿಯರ್ ಮೃತಪಟ್ಟಿರುವ ಘಟನೆ ನಡೆದಿದೆ.
ಮಾಹಿತಿಯಂತೆ, ಮೃತರನ್ನು ಮಹಾಲಿಂಗ ಅಪ್ಪರಾಜ್ (46) ಎಂದು ಗುರುತಿಸಲಾಗಿದೆ. ಅವರು ಮೂಲತಃ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಖಾನಾಪುರ ನಿವಾಸಿಯಾಗಿದ್ದು, ಮೆಸ್ಕಾಂನಲ್ಲಿ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಜುಲೈ 5ರಂದು ಮಧ್ಯಾಹ್ನ ಸುಮಾರು 3.30 ಗಂಟೆ ವೇಳೆಗೆ ಆನವಟ್ಟಿ ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸುತ್ತಿದ್ದ ವೇಳೆ ಏಣೆಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಟ್ಟಡದ ಗೋಡೆಗೆ ತಲೆ ಬಡಿದು ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.
ತಕ್ಷಣ ಅವರನ್ನು ಆಟೋ ಮೂಲಕ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ವಿಷಯವನ್ನು ಮೆಸ್ಕಾಂ ನೌಕರ ಶಿವಪುತ್ರಪ್ಪ ಅವರು ಮೃತರ ಸಹೋದರರಿಗೆ ದೂರವಾಣಿ ಮೂಲಕ ತಿಳಿಸಿದರು.
ಬಳಿಕ ಮೃತರ ಸಹೋದರ, ತಾಯಿ ಕಮಲಾ ರಾಮ ಅಪರಾಜ್, ಪತ್ನಿ ಪ್ರಿಯಾಂಕ ಹಾಗೂ ಸಂಬಂಧಿಕರು ಬೆಳಗಾವಿ ಜಿಲ್ಲೆಯಿಂದ ರಾತ್ರಿ ಸುಮಾರು 11.50 ಗಂಟೆಗೆ ಆನವಟ್ಟಿಗೆ ಆಗಮಿಸಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹವನ್ನು ಪರಿಶೀಲಿಸಿದರು. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಮೃತಪಟ್ಟಿರುವುದು ಕಂಡುಬಂದಿದೆ.
ಮೃತದೇಹದ ಮೇಲೆ ಕಾನೂನುಬದ್ಧ ಕ್ರಮ ಕೈಗೊಂಡು ಅಂತ್ಯಸಂಸ್ಕಾರಕ್ಕೆ ಹಸ್ತಾಂತರಿಸುವಂತೆ ಮೃತರ ಸಹೋದರ ನೀಡಿದ ಲಿಖಿತ ದೂರಿನ ಮೇರೆಗೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಭಾರಿ ಜನಸ್ತೋಮ
ಆನವಟ್ಟಿ, ಜಡೆ ಭಾಗದಲ್ಲಿ ಕಳೆದ 20 ವರ್ಷದಿಂದ ಮಹಾಲಿಂಗ ಅಪ್ಪರಾಜ್ ಮೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಡವರ ಪಾಲಿನ ದೇವರು ಎಂದು ಇಲ್ಲಿನಭಾಗದ ರೈತರು ಭಾವಿಸಿದ್ದಾರೆ. ಅವರ ಮರಣದ ಸುದ್ದಿಕೇಳಿ ಇಂದು ಅವರ ಪಾರ್ಥೀವ ಶರೀರ ನೋಡಲು ಜನಸ್ತೋಮವೇ ನೆರೆದಿತ್ತು. ಅವರ ಅಂತ್ಯಕ್ರಿಯೆ ಬೆಳಗಾವಿಯಲ್ಲಿ ನಡೆಯುವ ಸಾಧ್ಯತೆಯಿದೆ.
