DHO ಕೋಟೆ ಪೊಲೀಸ್ ಠಾಣೆಯ ಮೆಟ್ಟಲೇರಿದ್ದೇಕೆ?Why did the DHO climb the stairs of the Kote police station?

SUDDILIVE || SHIVAMOGGA

DHO ಕೋಟೆ ಪೊಲೀಸ್ ಠಾಣೆಯ ಮೆಟ್ಟಲೇರಿದ್ದೇಕೆ?Why did the DHO climb the stairs of the Kote police station?    

Dho, climb

ಶಿವಮೊಗ್ಗ, ಜು. 5: ದಿನಾಂಕ 20/06/2026 ರಂದು ಮಧ್ಯಾಹ್ನ 2.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ಅವರು ನೀಡಿದ ದೂರಿನ ಮೇರೆಗೆ, ಬೆಂಗಳೂರಿನ ಕೃಷ್ಣ ಎಂಟರ್‌ಪ್ರೈಸಸ್ ಸಂಸ್ಥೆಯ ಮಾಲೀಕರ ವಿರುದ್ಧ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಎಸಗಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಬೆಂಗಳೂರಿನ ಕೃಷ್ಣ ಎಂಟರ್‌ಪ್ರೈಸಸ್ ಸಂಸ್ಥೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಶಿವಮೊಗ್ಗ ಕಚೇರಿಯಿಂದ ದಿನಾಂಕ 16/03/2012 ರಂದು ಸರಬರಾಜು ಆದೇಶ ಹೊರಡಿಸಲಾಗಿದ್ದು, ಅದರಂತೆ ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ದಿನನಿತ್ಯ ಬಳಕೆಯ ಸಾಮಗ್ರಿಗಳ ಕಿಟ್‌ಗಳನ್ನು ಪೂರೈಸಲಾಗಿದೆ ಎಂದು ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಸಂಸ್ಥೆಗೆ ₹14,49,738 ಪಾವತಿಯಾಗಬೇಕಿದೆ ಎಂದು ಸಂಸ್ಥೆ ಹಕ್ಕು ಮಂಡಿಸಿತ್ತು.

ಆದರೆ ಸಂಸ್ಥೆಯು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿದ್ದ 16/03/2012ರ ಸರಬರಾಜು ಆದೇಶವನ್ನು ಪರಿಶೀಲಿಸಿದಾಗ ಅದು ಕೃತಕವಾಗಿ ಸೃಷ್ಟಿಸಲ್ಪಟ್ಟ ದಾಖಲೆ ಎಂಬುದು ಪತ್ತೆಯಾಗಿದೆ. ಆ ದಿನಾಂಕದಂದು ಕೃಷ್ಣ ಎಂಟರ್‌ಪ್ರೈಸಸ್ ಪರವಾಗಿ ಯಾವುದೇ ಕಾರ್ಯಾದೇಶ ನೀಡಲಾಗಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಕೃಷ್ಣ ಎಂಟರ್‌ಪ್ರೈಸಸ್ ಸಂಸ್ಥೆ ಮತ್ತು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಶಿವಮೊಗ್ಗ ನಡುವೆ ನಡೆದಿದ್ದ ಪತ್ರ ವ್ಯವಹಾರಗಳ ಆಧಾರದ ಮೇಲೆ ಇಲಾಖೆಯ ಉಪನಿರ್ದೇಶಕ ಡಾ. ನಂದ ಎನ್.ಎಸ್., ಕಚೇರಿ ಅಧೀಕ್ಷಕ ಪ್ರಕಾಶ್ ಹಾಗೂ ಎಫ್‌ಡಿಎ ಚಂದನ್ ಅವರನ್ನು ಒಳಗೊಂಡ ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಿ ಸವಿಸ್ತಾರ ತನಿಖೆ ನಡೆಸಲಾಯಿತು.

ತನಿಖೆಯಲ್ಲಿ ಕೃಷ್ಣ ಎಂಟರ್‌ಪ್ರೈಸಸ್ ಪರವಾಗಿ ಯಾವುದೇ ಕಾರ್ಯಾದೇಶ ಹೊರಡಿಸಲಾಗಿಲ್ಲ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿಗಳನ್ನು ಪಾಲಿಸಲಾಗಿಲ್ಲ ಎಂಬುದು ದೃಢಪಟ್ಟಿದೆ. ಅಲ್ಲದೆ ದಾಖಲೆಗಳಲ್ಲಿ ಬಳಸಲಾಗಿದ್ದ ಇಲಾಖೆಯ ಲೆಟರ್‌ಹೆಡ್, ಲಾಂಛನ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರ ಸಹಿ ಸಹ ನೈಜ ದಾಖಲೆಗಳಿಗೆ ಹೊಂದಿಕೆಯಾಗದೇ ನಕಲಿಯಾಗಿರುವುದು ಪತ್ತೆಯಾಗಿದೆ.

ದಾಖಲೆಗಳ ಪ್ರಕಾರ ಅಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿದ್ದ ಡಾ. ಚನ್ನಬಸಪ್ಪ ಅವರು 06/05/2017 ರಂದು ನೀಡಿದ ಲಿಖಿತ ಪತ್ರದಲ್ಲಿ ತಾವು ಆರೋಪಿತ ಕಾರ್ಯಾದೇಶ ನೀಡಿಲ್ಲ ಹಾಗೂ ಅದರಲ್ಲಿರುವ ಸಹಿ ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರಿಂದ ಕೃಷ್ಣ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ದಾಖಲೆಗಳೂ ನಕಲಿಯಾಗಿ ಸೃಷ್ಟಿಸಲ್ಪಟ್ಟಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ, ಬಾಕಿ ಹಣ ಪಾವತಿಯಾಗಿಲ್ಲ ಎಂಬ ವಿಷಯವನ್ನು ಕೃಷ್ಣ ಎಂಟರ್‌ಪ್ರೈಸಸ್ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನಕ್ಕೂ ತಂದಿತ್ತು. ಈ ಸಂಬಂಧ ಸಚಿವರ ವೈಯಕ್ತಿಕ ಕಾರ್ಯದರ್ಶಿಯವರು 24/03/2017 ರಂದು ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಅದರಂತೆ ಎನ್‌ಎಚ್‌ಎಂ ಮುಖ್ಯ ಹಣಕಾಸು ಅಧಿಕಾರಿಗಳು 05/05/2017 ಹಾಗೂ 06/05/2017 ರಂದು ಶಿವಮೊಗ್ಗ ಡಿಎಚ್‌ಒ ಕಚೇರಿಗೆ ಭೇಟಿ ನೀಡಿ ದಾಖಲೆಗಳು ಹಾಗೂ ಸಂಸ್ಥೆಯ ಹಕ್ಕು ಹೇಳಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿದ್ದರು.

ನಂತರ ಎನ್‌ಎಚ್‌ಎಂ ನಿರ್ದೇಶಕರು 25/05/2017 ರಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಕೃಷ್ಣ ಎಂಟರ್‌ಪ್ರೈಸಸ್ ಪರವಾಗಿ ಯಾವುದೇ ಕೆಲಸದ ಆದೇಶ ನೀಡಲಾಗಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಗಳಿಗೆ ದಿನನಿತ್ಯ ಬಳಕೆಯ ಆರೋಗ್ಯ ಕಿಟ್‌ಗಳ ಖರೀದಿಗೆ ಯಾವುದೇ ಖರೀದಿ ಪ್ರಕ್ರಿಯೆ ಕೈಗೊಳ್ಳಲಾಗಿಲ್ಲ. ಒಂದು ವೇಳೆ ಅಂತಹ ಕಿಟ್‌ಗಳನ್ನು ಸರಬರಾಜು ಮಾಡಿದ್ದರೆ ಸಂಬಂಧಿತ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಗಳೇ ತಮ್ಮ ನಿಧಿಯಿಂದ ನಿಯಮಾನುಸಾರ ಪಾವತಿ ಮಾಡಬೇಕಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೀಗಾಗಿ ಕೃಷ್ಣ ಎಂಟರ್‌ಪ್ರೈಸಸ್ ಬೆಂಗಳೂರು ಸಂಸ್ಥೆಯ ಹಕ್ಕು ಹೇಳಿಕೆಗಳಿಗೆ ಯಾವುದೇ ಕಾನೂನುಬದ್ಧ ಆಧಾರವಿಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಂಗ ಹಾಗೂ ಇಲಾಖಾ ಅಧಿಕಾರಿಗಳ ಮುಂದೆ ನೈಜ ದಾಖಲೆಗಳೆಂದು ಸಲ್ಲಿಸುವ ಮೂಲಕ ಸರ್ಕಾರದ ಹಿತಾಸಕ್ತಿಗೆ ಗಂಭೀರ ಹಾನಿ ಉಂಟುಮಾಡಿರುವುದಾಗಿ ಆರೋಪಿಸಿ ಸಂಸ್ಥೆಯ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್ ದೂರು ನೀಡಿದ್ದಾರೆ.

Why did the DHO climb the stairs of the Kote police station?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close