SUDDILIVE || SHIVAMOGGA
ಮಗನ ಅಭಿವೃದ್ಧಿಗೆ ಬಿಎಸ್ ವೈ ಫಿದಾ!BSY impressed by his son's progress!
ಶಿವಮೊಗ್ಗ: ರಾಜಕೀಯದಲ್ಲಿ ಹಣ, ಹೆಂಡ ಮತ್ತು ತೋಳ್ಬಲದ ಪ್ರಭಾವದಿಂದ ಚುನಾವಣೆಗಳನ್ನು ಗೆಲ್ಲುವ ಕಾಲ ಬದಲಾಗಿದ್ದು, ಇಂದಿನ ಯುವಪೀಳಿಗೆ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಹೆಚ್ಚು ಜಾಗೃತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ನಡೆದ ಬಂಜಾರ ಭವನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಚುನಾವಣೆಗಳು ಹಣ ಮತ್ತು ಅಧಿಕಾರದ ಪ್ರಭಾವದ ಮೇಲೆ ನಡೆಯುತ್ತಿದ್ದವು. ಆದರೆ ಇಂದಿನ ಪೀಳಿಗೆ ವಿದ್ಯಾವಂತರಾಗಿದ್ದು, ಎಲ್ಲ ವಿಚಾರಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೀಗಾಗಿ ರಾಜಕೀಯ ದೊಂಬರಾಟಗಳಿಗೆ ಇನ್ನು ಮುಂದೆ ಅವಕಾಶವಿಲ್ಲ ಎಂದರು.
ರಾಜಕೀಯದಲ್ಲಿ ಹಣ, ಹೆಂಡ ಹಾಗೂ ತೋಳ್ಬಲದ ಮೂಲಕ ಜನರನ್ನು ಸೆಳೆಯುವ ಪ್ರಯತ್ನಗಳು ಹೆಚ್ಚು ಕಾಲ ನಡೆಯುವುದಿಲ್ಲ. ಯುವಜನತೆ ಜಾಗೃತವಾಗಿರುವುದರಿಂದ ರಾಜಕೀಯ ಪಕ್ಷಗಳ ಕಾರ್ಯವೈಖರಿ ಹಾಗೂ ಅಭ್ಯರ್ಥಿಗಳ ನಡೆ-ನುಡಿಗಳನ್ನು ಜನರು ಗಮನಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಪಕ್ಷದ ಕಾರ್ಯಕರ್ತರು ಚುನಾವಣಾ ಸಮಯದಲ್ಲಿ ಮಾತ್ರ ಸಕ್ರಿಯರಾಗದೆ, ನಿರಂತರವಾಗಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಸಂಘಟನೆಯೇ ಪಕ್ಷದ ಶಕ್ತಿ. ಹಿರಿಯ ಕಾರ್ಯಕರ್ತರು ವಯಸ್ಸಾಯಿತು ಎಂದು ಮನೆಯಲ್ಲೇ ಕುಳಿತುಕೊಳ್ಳಬಾರದು. ತಮ್ಮಲ್ಲಿ ಶಕ್ತಿ ಇರುವವರೆಗೂ ಪಕ್ಷದ ಸಂಘಟನೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
'ಶಿವಮೊಗ್ಗದಲ್ಲಿ ಜನರ ಅಪೇಕ್ಷೆಯಂತೆ ಕೆಲಸ ಮಾಡಿದ್ದೇನೆ’
ಶಿವಮೊಗ್ಗ ನಗರದ ಜನರು ಅಪೇಕ್ಷೆ ಪಟ್ಟ ಎಲ್ಲ ಕೆಲಸಗಳನ್ನು ಸಾಧ್ಯವಾದಷ್ಟು ಮಾಡಿಕೊಟ್ಟಿರುವುದಾಗಿ ಯಡಿಯೂರಪ್ಪ ಹೇಳಿದರು. ಬಂಜಾರ, ಭೋವಿ ಸೇರಿದಂತೆ ವಿವಿಧ ಸಮಾಜಗಳ ಜನರ ಬಹುದಿನಗಳ ಬೇಡಿಕೆಗಳಿಗೆ ಸ್ಪಂದಿಸಿ, ಆಯಾ ಸಮಾಜಗಳ ಅಗತ್ಯಕ್ಕೆ ತಕ್ಕಂತೆ ಭವನಗಳನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಸಮಾಜದ ಸಂಘಟನೆ, ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಮುದಾಯದ ಅಭಿವೃದ್ಧಿಗೆ ಭವನಗಳು ಪ್ರಮುಖ ಕೇಂದ್ರಗಳಾಗುತ್ತವೆ. ಇಂತಹ ಮೂಲಸೌಕರ್ಯಗಳ ನಿರ್ಮಾಣದಿಂದ ಸಮಾಜದ ಎಲ್ಲ ವರ್ಗಗಳಿಗೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ರಾಘವೇಂದ್ರ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರು ನಾಲ್ಕು ಬಾರಿ ಆಯ್ಕೆಯಾಗಿರುವುದನ್ನು ಉಲ್ಲೇಖಿಸಿದ ಯಡಿಯೂರಪ್ಪ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗವನ್ನು ಇಡೀ ರಾಜ್ಯದಲ್ಲೇ ಮಾದರಿ ಲೋಕಸಭಾ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ರಾಘವೇಂದ್ರ ಅವರು ಶ್ರಮಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಮುಂದೆಯೂ ಅವರಿಗೆ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿದರು.
‘ಕಾರ್ಯಕರ್ತರು, ಮತದಾರರ ಹಾರೈಕೆಯ ಮುಂದೆ ನಾನು ಶೂನ್ಯ’
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾರ್ಯಕರ್ತರು ಮತ್ತು ಮತದಾರರ ಹಾರೈಕೆಯ ಮುಂದೆ ತಾನು ಶೂನ್ಯ ಎಂದು ಹೇಳಿದರು.
ತಮ್ಮ ಅಭಿಮಾನಿಗಳು ಹಾಕಿರುವ ಫ್ಲೆಕ್ಸ್‌ಗಳು, ಹಾಕಿರುವ ಹಾರ-ತುರಾಯಿಗಳು ಹಾಗೂ ತೋರುತ್ತಿರುವ ಅಭಿಮಾನವೇ ತಮ್ಮ ಮೇಲಿನ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ. ಕಾರ್ಯಕರ್ತರ ನಿರಂತರ ಹೋರಾಟ ಮತ್ತು ಪರಿಶ್ರಮದ ಫಲವಾಗಿ ತಾನು ಸಂಸತ್ ಪ್ರವೇಶಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕರ್ತರು ಮತ್ತು ಮತದಾರರ ಆಶೀರ್ವಾದ ಹಾಗೂ ಹಾರೈಕೆ ಮುಂದುವರಿದರೆ ಇನ್ನಷ್ಟು ಜನಸೇವೆ ಮಾಡಲು ತಾನು ಸಿದ್ಧನಿದ್ದೇನೆ. ಜನರ ವಿಶ್ವಾಸವನ್ನು ಉಳಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವುದಾಗಿ ರಾಘವೇಂದ್ರ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಧನಂಜಯ ಸರ್ಜಿ ಹಾಗೂ ಡಿ.ಎಸ್. ಅರುಣ್ ಅವರು ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಅಭಿನಂದಿಸಿ ಮಾತನಾಡಿದರು.
ಮಾಜಿ ಶಾಸಕ ಕೆ.ಬಿ. ಅಶೋಕನಾಯ್ಕ, ಪ್ರಮುಖರಾದ ಟಿ.ಡಿ. ಮೇಘರಾಜ್, ಸಂತೋಷ್ ಹೊಳಲೂರು, ತೇಜಸ್ವಿನಿ ರಾಘವೇಂದ್ರ, ಭಗತ್ ರಾಘವೇಂದ್ರ, ಸಿಂಗನಹಳ್ಳಿ ಸುರೇಶ್, ತಮ್ಮಡಿಹಳ್ಳಿ ನಾಗರಾಜ್, ಟಿ.ಬಿ. ಜಗದೀಶ್, ಹೊಳಲೂರು ಮಲ್ಲೇಶಪ್ಪ, ಜಗದೀಶ್ ಗೌಡ್ರು, ಭೋಜ್ಯಾನಾಯ್ಕ, ವಿರೂಪಾಕ್ಷಪ್ಪ, ಶ್ರೀನಿವಾಸ್, ರವಿಕುಮಾರ್, ಷಣ್ಮುಖಪ್ಪ, ಅರುಣ್, ಮಂಜಪ್ಪ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
BSY impressed by his son's progress!
