SUDDILIVE || SHIVAMOGGA
ಬಿ.ವೈ. ರಾಘವೇಂದ್ರ ಅಪರೂಪದ ರಾಜಕಾರಣಿ, ಕ್ಷೇತ್ರದ ಚಿತ್ರಣ ಬದಲಿಸಿದ ಸಾಧಕ: ಆರಗ ಜ್ಞಾನೇಂದ್ರ-B.Y. Raghavendra is a rare politician and an achiever who transformed the constituency: Araga Jnanendra
ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚಿತ್ರಣವನ್ನೇ ಬದಲಿಸಿರುವ ಸಾಧಕರಾಗಿದ್ದು, ಅಪರೂಪದ ಕತೃತ್ವ ಶಕ್ತಿ ಹೊಂದಿರುವ ರಾಜಕಾರಣಿ ಎಂದು ಶಾಸಕ ಹಾಗೂ ಮಾಜಿ ಸಚಿವ ಆರಗ ಜ್ಞಾನೇಂದ್ರ ಬಣ್ಣಿಸಿದರು.
ಶಿವಮೊಗ್ಗದಲ್ಲಿ ನಡೆದ ಬಿ.ವೈ. ರಾಘವೇಂದ್ರ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಸಾಧಕನ ಹುಟ್ಟುಹಬ್ಬವನ್ನು ಆಚರಿಸುವುದು ಕೇವಲ ಸಂಭ್ರಮದ ಕಾರ್ಯಕ್ರಮವಲ್ಲ. ಸಾಧಕನಿಗೆ ಬೆನ್ನುತಟ್ಟಿ, ಅವರ ಕೆಲಸಗಳನ್ನು ಗುರುತಿಸಿ, ಮತ್ತಷ್ಟು ಜನಸೇವೆಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುವ ಕಾರ್ಯಕ್ರಮವಾಗಿದೆ ಎಂದರು.
ದೇವರು ಬಿ.ವೈ. ರಾಘವೇಂದ್ರ ಅವರಿಗೆ ಇನ್ನಷ್ಟು ಶಕ್ತಿ ಮತ್ತು ಆರೋಗ್ಯ ಕರುಣಿಸಿ, ಶಿವಮೊಗ್ಗ ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವಕಾಶ ನೀಡಲಿ ಎಂದು ಆರಗ ಜ್ಞಾನೇಂದ್ರ ಶುಭ ಹಾರೈಸಿದರು. ಜನರ ಆಶ್ವಾಸನೆಗಳನ್ನು ಈಡೇರಿಸುವುದಷ್ಟೇ ಅಲ್ಲದೆ, ಕೊಟ್ಟ ಆಶ್ವಾಸನೆಗಳ ಹೊರತಾಗಿಯೂ ಜನರ ಅಗತ್ಯಗಳನ್ನು ಗುರುತಿಸಿ ಹಲವು ಕೆಲಸಗಳನ್ನು ಮಾಡಿರುವುದು ಅವರ ವಿಶೇಷತೆ ಎಂದು ಹೇಳಿದರು.
ಹಗಲು-ರಾತ್ರಿ ಜನರಿಗಾಗಿ ದುಡಿಯುತ್ತಿದ್ದಾರೆ
ರಾಘವೇಂದ್ರ ಅವರು ಯಾರಿಗೂ ಉಪದ್ರವ ನೀಡದೆ, ತಮ್ಮ ಬದುಕನ್ನೇ ಜನಸೇವೆಗೆ ಸಮರ್ಪಿಸಿಕೊಂಡು ಹಗಲು-ರಾತ್ರಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
“ರಾಘವೇಂದ್ರ ಅವರ ಕುಟುಂಬದೊಂದಿಗೆ ನನಗೆ ಬಹಳ ನಿಕಟವಾದ ಬಾಂಧವ್ಯವಿದೆ. ಅವರ ತಾಯಿ ಮೈತ್ರಾದೇವಿಯವರ ಕೈಯಲ್ಲಿ ಊಟ ಮಾಡಿ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಿದರೆ, ಅವರ ತಾಯಿ ನೀಡಿದ ಸಂಸ್ಕಾರದಿಂದಲೇ ಕುಟುಂಬ ಬೆಳೆದು ಬಂದಿದೆ. ಆ ಸಂಸ್ಕಾರವೂ ರಾಘವೇಂದ್ರ ಅವರ ವ್ಯಕ್ತಿತ್ವದಲ್ಲಿ ಕಾಣಿಸುತ್ತದೆ,” ಎಂದು ಹೇಳಿದರು.
ಸಂಯಮ ಮತ್ತು ಶಿಸ್ತಿನೊಂದಿಗೆ ಜನಸೇವೆ ಮಾಡಬೇಕೆಂಬ ಉದ್ದೇಶದಿಂದ ಶಿಕಾರಿಪುರದಿಂದ ರಾಜಕೀಯ ಜೀವನ ಆರಂಭಿಸಿ, ನಂತರ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
2 ರೈಲುಗಳಿಂದ 28 ರೈಲುಗಳವರೆಗೆ
ಶಿವಮೊಗ್ಗ ಕ್ಷೇತ್ರದಲ್ಲಿ ರೈಲ್ವೆ ಅಭಿವೃದ್ಧಿಗೆ ರಾಘವೇಂದ್ರ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
“ಮೊದಲು ಶಿವಮೊಗ್ಗಕ್ಕೆ ಕೇವಲ ಎರಡು ರೈಲುಗಳಿದ್ದವು. ಇಂದು ಸುಮಾರು 28 ರೈಲುಗಳು ಓಡಾಡುವಂತಾಗಿದೆ. ಹಿಂದೆ ಇದ್ದವರು ರೈಲು ಓಡಿಸುತ್ತಿದ್ದರು ಎಂಬ ಮಾತು ಕೇಳಿಬರುತ್ತಿತ್ತು. ಆದರೆ ರಾಘವೇಂದ್ರ ಅವರು ರೈಲ್ವೆ ಸಂಪರ್ಕವನ್ನು ವಿಸ್ತರಿಸುವುದರ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ,” ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಸಿಗಂದೂರು ಸೇತುವೆ, ಬಿ.ಹೆಚ್. ರಸ್ತೆಯ ಅಭಿವೃದ್ಧಿ, ಶಿವಮೊಗ್ಗ ವಿಮಾನ ನಿಲ್ದಾಣ, ಎಫ್‌ಎಂ ರೇಡಿಯೋ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮ ನೀಡಿವೆ ಎಂದು ಅವರು ತಿಳಿಸಿದರು.
ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದನೆ
ಶಿವಮೊಗ್ಗ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಅಡಿಕೆಗೆ ತೊಂದರೆಯಾದಾಗಲೂ ರಾಘವೇಂದ್ರ ಅವರು ರೈತರ ಪರವಾಗಿ ಸ್ಪಂದಿಸುತ್ತಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
“ಯಾವುದೇ ಸಮಸ್ಯೆ ಎದುರಾದರೂ ಅವರು ಅದನ್ನು ತಮ್ಮ ಸಮಸ್ಯೆಯೆಂದು ಪರಿಗಣಿಸಿ ಪರಿಹಾರಕ್ಕಾಗಿ ಪ್ರಯತ್ನಿಸುತ್ತಾರೆ. ದೆಹಲಿಗೆ ಹೋದಾಗಲೂ ಮನೆಗೆ ಕರೆದು ಮಾತನಾಡಿಸುತ್ತಾರೆ. ಅಲ್ಲಿಗೆ ಹೋಗಿ ಕೇವಲ ಭೇಟಿ ಮಾಡಿ ಬರುವುದಲ್ಲ; ಕೇಂದ್ರ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮನೆಗಳಿಗೆ ತೆರಳಿ ಸಮಸ್ಯೆಗಳಿಗೆ ಪರಿಹಾರ ಹಾಗೂ ಫಲಿತಾಂಶವನ್ನು ತರುವ ಪ್ರಯತ್ನ ಮಾಡುತ್ತಾರೆ,” ಎಂದರು.
‘ಶೋ ಪೀಸ್ ರಾಜಕಾರಣಿ’ಗಳ ನಡುವೆ ವಿಭಿನ್ನ ವ್ಯಕ್ತಿತ್ವ
ಇಂದಿನ ರಾಜಕೀಯದಲ್ಲಿ ಕೆಲವರು ಕೇವಲ ಶೋ ಪೀಸ್ ಆಗಿ ಉಳಿದಿರುವ ಸಂದರ್ಭದಲ್ಲೂ, ಬಿ.ವೈ. ರಾಘವೇಂದ್ರ ಅವರು ಕತೃತ್ವ ಶಕ್ತಿಯ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
“ರಾಘವೇಂದ್ರ ಅವರು ಅಪರೂಪದ ರಾಜಕಾರಣಿ ಮತ್ತು ಅಪರೂಪದ ಸಂಸದ. ಸ್ವಂತ ಶಕ್ತಿಯ ಬಲದ ಮೇಲೆ ಚುನಾವಣೆ ಎದುರಿಸುವ ಸಾಮರ್ಥ್ಯ ಅವರಲ್ಲಿದೆ. ಜನರ ಬಗ್ಗೆ ಕಾಳಜಿ ಹೊಂದಿರುವ ರಾಜಕಾರಣಿ ಮಾತ್ರ ಜನರಿಗೆ ನಿಜವಾದ ಉಪಕಾರಿಯಾಗಲು ಸಾಧ್ಯ,” ಎಂದು ಅವರು ಅಭಿಪ್ರಾಯಪಟ್ಟರು.
ಕಿರಿಯ ವಯಸ್ಸಿನಲ್ಲಿಯೇ ತಮ್ಮ ಶ್ರಮ ಮತ್ತು ಸಾಮರ್ಥ್ಯವನ್ನು ಜನಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಂಡಿರುವ ರಾಘವೇಂದ್ರ ಅವರ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಆರಗ ಜ್ಞಾನೇಂದ್ರ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಧನಂಜಯ್ ಸರ್ಜಿ, ಜಗದೀಶ್, ಎಸ್. ದತ್ತಾತ್ರಿ, ಮಂಗೋಟೆ ರುದ್ರೇಶ್, ರಾಘವೇಂದ್ರ ಸ್ವಾಮಿ, ವೀರಭದ್ರಪ್ಪ ಪೂಜಾರ್, ಮಾಲತೇಶ್, ಸುರೇಖಾ ಮುರಳೀಧರ್, ಬಳ್ಳೇಕೆರೆ ಸಂತೋಷ್, ಸತೀಶ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
