ಭದ್ರಾವತಿಯ ಡಾ. ಎಸ್. ಜಾನಕಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಗಲಾಟೆ: ಮೂರು ಎಫ್‌ಐಆರ್ ದಾಖಲು- Bhadravati Dr. S. Janaki memorial event causes chaos: Three FIRs filed

SUDDILIVE || SHIVAMOGGA

ಭದ್ರಾವತಿಯ ಡಾ. ಎಸ್. ಜಾನಕಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಗಲಾಟೆ: ಮೂರು ಎಫ್‌ಐಆರ್ ದಾಖಲು- Bhadravati Dr. S. Janaki memorial event causes chaos: Three FIRs filed  

Janaki, program

ಭದ್ರಾವತಿ: ಡಾ. ಎಸ್. ಜಾನಕಿ ಸ್ಮರಣಾರ್ಥವಾಗಿ ಭದ್ರಾವತಿಯ ಜನ್ನಾಪುರದ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮ ಗಲಾಟೆಗೆ ತಿರುಗಿ, ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಈ ಪ್ರಕರಣಗಳು ಈಗ ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಮೊದಲ ಪ್ರಕರಣದಲ್ಲಿ ಪರಮೇಶ್ ನೀಡಿದ ದೂರಿನ ಮೇರೆಗೆ ಸ್ನೇಹಜೀವಿ ಉಮೇಶ್, ಸುಹಾಸ್, ಪವನ್ @ ಗುಂಡ ಹಾಗೂ ಇತರರ ವಿರುದ್ಧ ಹಲ್ಲೆ, ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಕಾರ್ಯಕ್ರಮದಲ್ಲಿ ಸನ್ಮಾನದ ವೇಳೆ ಉಮೇಶ್ ರಾಜಕೀಯ ವ್ಯಕ್ತಿಗಳಿಂದ ಸನ್ಮಾನ ಸ್ವೀಕರಿಸುವುದಿಲ್ಲ ಎಂದು ಹೇಳಿದ ನಂತರ ವಾಗ್ವಾದ ಆರಂಭವಾಗಿ, ಬಳಿಕ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಬಿ.ಎಸ್. ಗಣೇಶ್, ಸಂದೀಪ್ ಹಾಗೂ ಜನಾರ್ಧನ್ ಅವರಿಗೂ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಎರಡನೇ ಪ್ರಕರಣದಲ್ಲಿ ದರ್ಶನ್ ನೀಡಿದ ದೂರಿನ ಆಧಾರದ ಮೇಲೆ ಸ್ನೇಹಜೀವಿ ಉಮೇಶ್, ಸುಹಾಸ್ ಹಾಗೂ ಇತರರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಬಿ.ಎಸ್. ಗಣೇಶ್ ಪರ ನಿಂತಿದ್ದೀಯಾ ಎಂದು ಪ್ರಶ್ನಿಸಿ, ದೊಣ್ಣೆಯಿಂದ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಲಾಗಿದೆ ಎಂದು ದರ್ಶನ್ ದೂರಿನಲ್ಲಿ ಆರೋಪಿಸಿದ್ದಾರೆ.


ಇನ್ನೊಂದೆಡೆ, ಸುಹಾಸ್ ನೀಡಿದ ಪ್ರತಿದೂರಿನ ಮೇರೆಗೆ ಬಿ.ಎಸ್. ಗಣೇಶ್, ಶಿವಣ್ಣ ಹಾಗೂ ಗಣೇಶ್ ಅವರ ದೊಡ್ಡಪ್ಪ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಸುಹಾಸ್ ದೂರಿನ ಪ್ರಕಾರ, ಕಾರ್ಯಕ್ರಮದ ಬಳಿಕ ವೇದಿಕೆ ಸಮೀಪ ಮಾತಿನ ಚಕಮಕಿ ನಡೆದಿದ್ದು, ವಿಡಿಯೋ ಮಾಡಬೇಡ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿಯರ್ ಬಾಟಲಿ, ಕಬ್ಬಿಣದ ರಾಡ್, ಕುರ್ಚಿ ಹಾಗೂ ಇತರೆ ವಸ್ತುಗಳಿಂದ ಹಲ್ಲೆ ನಡೆಸಲಾಗಿದೆ. ತಾನು ಹಾಗೂ ತನ್ನ ಚಿಕ್ಕಪ್ಪ ಸ್ನೇಹಜೀವಿ ಉಮೇಶ್ ಗಾಯಗೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟಾರೆ, ಒಂದೇ ಕಾರ್ಯಕ್ರಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳು ಸ್ನೇಹಜೀವಿ ಉಮೇಶ್ ಹಾಗೂ ಅವರ ಬೆಂಬಲಿಗರ ವಿರುದ್ಧ ದಾಖಲಾಗಿದ್ದರೆ, ಮತ್ತೊಂದು ಎಫ್‌ಐಆರ್‌ನಲ್ಲಿ ಬಿ.ಎಸ್. ಗಣೇಶ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಮೂರು ದೂರುಗಳನ್ನೂ ದಾಖಲಿಸಿಕೊಂಡಿರುವ ಭದ್ರಾವತಿ ನ್ಯೂಟೌನ್ ಪೊಲೀಸರು ತನಿಖೆ ಆರಂಭಿಸಿದ್ದು, ಘಟನೆಯ ನೈಜ ಸತ್ಯಾಂಶ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

Bhadravati Dr. S. Janaki memorial event causes chaos: Three FIRs filed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close