SUDDILIVE || SHIVAMOGGA
ಶಿವಮೊಗ್ಗ ಜಿಲ್ಲಾ ವಕ್ಫ್ ಬೋರ್ಡ್ ವಿರುದ್ಧ ಪಾರದರ್ಶಕತೆ ಪ್ರಶ್ನಿಸಿ ವರದಿ ಬಹಿರಂಗಕ್ಕೆ ಆಗ್ರಹ- Demand for disclosure of report against Shivamogga District Waqf Board, questioning transparency
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ವಕ್ಫ್ ಬೋರ್ಡ್‌ನ 2024–2026ನೇ ಆರ್ಥಿಕ ವರ್ಷದ ಲೆಕ್ಕಪರಿಶೋಧನಾ (ಆಡಿಟ್) ವರದಿಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ನವೀದ್ ಅವರು ಜಿಲ್ಲಾ ವಕ್ಫ್ ಬೋರ್ಡ್ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ಕಳೆದ ಹಲವು ಬಾರಿ ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿಯೂ ಆಡಿಟ್ ವರದಿಯನ್ನು ನೀಡುವಂತೆ ಮನವಿ ಮಾಡಿದ್ದರೂ, ಇಲ್ಲಿಯವರೆಗೆ ಯಾವುದೇ ಮಾಹಿತಿ ಅಥವಾ ವರದಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ವಕ್ಫ್ ಕಾಯ್ದೆ–1995ರ ಪ್ರಕಾರ ಲೆಕ್ಕಪರಿಶೋಧನಾ ವರದಿ ಸಾರ್ವಜನಿಕ ದಾಖಲೆ ಆಗಿದ್ದು, ವಕ್ಫ್ ಆಸ್ತಿಗಳ ಫಲಾನುಭವಿಗಳು ಹಾಗೂ ಸಾರ್ವಜನಿಕರು ಅದನ್ನು ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಕೊರತೆಯಿರುವುದರಿಂದ ಫಲಾನುಭವಿಗಳಲ್ಲಿ ತೀವ್ರ ಆತಂಕ ಮೂಡಿದೆ. ಆದ್ದರಿಂದ ಈ ಪತ್ರ ಸ್ವೀಕರಿಸಿದ ದಿನಾಂಕದಿಂದ 30 ದಿನಗಳ ಒಳಗೆ ಸಂಪೂರ್ಣ ಲೆಕ್ಕಪರಿಶೋಧನಾ ವರದಿಯ ಪ್ರಮಾಣೀಕೃತ ಪ್ರತಿಯನ್ನು ಒದಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಒಂದು ತಿಂಗಳೊಳಗೆ ವರದಿ ನೀಡದಿದ್ದಲ್ಲಿ, ಇತರೆ ಫಲಾನುಭವಿಗಳೊಂದಿಗೆ ಸೇರಿ ಶಿವಮೊಗ್ಗ ಜಿಲ್ಲಾ ವಕ್ಫ್ ಬೋರ್ಡ್ ಕಚೇರಿ ಎದುರು ಶಾಂತಿಯುತ ಧರಣಿ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಅಬ್ದುಲ್ ನವೀದ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ವಿಶ್ವಾಸ ಕಾಪಾಡುವ ನಿಟ್ಟಿನಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ತಕ್ಷಣ ಬಹಿರಂಗಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
