SUDDILIVE || SAGARA || BANGLORE
ಶಾಸಕ ಗೋಪಾಲಕೃಷ್ಣ ಬೇಳೂರು ಯೂ-ಟರ್ನ್- MLA Gopalakrishna Belur U-turn
ಬೆಂಗಳೂರು/ಸಾಗರ, ಆ.4: ಸಚಿವ ಸಂಪುಟ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದ ಸಾಗರ ಕ್ಷೇತ್ರದ ಶಾಸಕ ಅವರು, ಮುಖ್ಯಮಂತ್ರಿ ಭೇಟಿ ಬಳಿಕ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ಗೊಂದಲ ಸೃಷ್ಟಿಸಬಾರದು ಎಂದು ತೀರ್ಮಾನಿಸಿರುವುದಾಗಿ ತಿಳಿಸಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಕಾರಣ ತಮಗೂ ಹಾಗೂ ತಮ್ಮ ಕಾರ್ಯಕರ್ತರಿಗೂ ತೀವ್ರ ನಿರಾಸೆಯಾಗಿತ್ತು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ಕುರಿತು ಚಿಂತನೆ ನಡೆಸಿದ್ದಾಗ ಮುಖ್ಯಮಂತ್ರಿ ರಾತ್ರಿ ದೂರವಾಣಿ ಕರೆ ಮಾಡಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದು, ಬಳಿಕ ಬೆಳಿಗ್ಗೆ ಭೇಟಿಯಾಗಿ ಚರ್ಚೆ ನಡೆಸಿದ ಪರಿಣಾಮ ತಮ್ಮ ನಿರ್ಧಾರ ಬದಲಾಗಿದೆ ಎಂದು ತಿಳಿಸಿದರು.
"ಪಕ್ಷಕ್ಕಾಗಿ ಹಾಗೂ ಮುಖ್ಯಮಂತ್ರಿಗಳ ಬೆಂಬಲವಾಗಿ ನಿಲ್ಲಬೇಕು. ಮುಂದೆ ಚುನಾವಣೆಗಳಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಗೊಂದಲ ಉಂಟಾಗಬಾರದು. ಅಧಿಕಾರ ಇಲ್ಲದಿದ್ದರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ" ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಸಚಿವ ಸ್ಥಾನ ಕುರಿತು ಯಾವುದೇ ಹೊಸ ಭರವಸೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಈಗ ಎಲ್ಲವೂ ಮುಗಿದುಹೋಗಿದೆ. ಯಾವುದೇ ಭರವಸೆ ಕೇಳಿಲ್ಲ. ಹಿಂದೆ ಅವಕಾಶ ಮಾಡಿಕೊಡುವುದಾಗಿ ಹೇಳಲಾಗಿತ್ತು. ಆದರೆ ಅದು ಈ ಬಾರಿ ನನಸಾಗಲಿಲ್ಲ. ಆದರೂ ನನಗೆ ಟಿಕೆಟ್ ನೀಡಿದ ಡಿ.ಕೆ. ಶಿವಕುಮಾರ್ ಅವರ ಮೇಲಿನ ಗೌರವ ಹಾಗೂ ಪ್ರೀತಿಯಿಂದ ಪಕ್ಷದಲ್ಲೇ ಮುಂದುವರಿಯುತ್ತೇನೆ" ಎಂದರು.
ಸಾಗರ ಬ್ಲಾಕ್ ಕಾಂಗ್ರೆಸ್ ಮುಖಂಡರು ಹಾಗೂ ಮಹಿಳಾ ಘಟಕದ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಯಾರೂ ರಾಜೀನಾಮೆ ನೀಡಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಪಕ್ಷದ ವಿರುದ್ಧ ಯಾವುದೇ ಭಿನ್ನಮತ ವ್ಯಕ್ತಪಡಿಸಿಲ್ಲ. ಮುಂದೆಯೂ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿಗಳ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ" ಎಂದು ಹೇಳಿದರು.
ಸಾಮಾಜಿಕ ನ್ಯಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಏನು ಮಾಡಬಹುದು? ಎಲ್ಲಾ ನ್ಯಾಯಗಳು ಬೂದಿ ಮುಚ್ಚಿದ ಕೆಂಡದಂತಾಗಿವೆ. ಆದರೂ ನಾನು ಯಾರ ಮೇಲೂ ದೂರು ಮಾಡುವುದಿಲ್ಲ. ಮುಖ್ಯಮಂತ್ರಿಗಳ ಮನವಿಗೆ ಗೌರವ ನೀಡಿ ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದೇನೆ" ಎಂದು ತಿಳಿಸಿದರು.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಬೇಳೂರು ಗೋಪಾಲಕೃಷ್ಣ ಅವರ ಈ ಹೊಸ ನಿಲುವು, ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಕಾರ್ಯಕರ್ತರನ್ನು ಸಮಾಧಾನಪಡಿಸುವ ಜೊತೆಗೆ ಪಕ್ಷದಲ್ಲೇ ಮುಂದುವರಿಯುವ ಮೂಲಕ ನಾಯಕತ್ವಕ್ಕೆ ಬೆಂಬಲ ಸೂಚಿಸಿರುವುದು ಗಮನ ಸೆಳೆದಿದೆ.
MLA Gopalakrishna Belur U-turn
