SUDDILIVE || SHIVAMOGGA
ಬೀಗ ಹಾಕಿದ್ದ ಮನೆಯ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿ ಪೊಲೀಸರ ಬಲೆಗೆ-Police nab man suspiciously roaming near locked house
ಶಿವಮೊಗ್ಗ: ಬೀಗ ಹಾಕಿದ್ದ ಮನೆಯ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರಾತ್ರಿ ಗಸ್ತಿನಲ್ಲಿದ್ದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿ, ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಘಟನೆ ಕೋಟೆಗಂಗೂರು ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಜುಲೈ 30ರಂದು ರಾತ್ರಿ ವಿಶೇಷ ಗಸ್ತು ಕರ್ತವ್ಯದಲ್ಲಿದ್ದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆ ಅವರು, ಸಿಬ್ಬಂದಿಗಳಾದ ಸಿ.ಪಿ.ಸಿ. ಕಾಶಿನಾಥ ಹಾಗೂ ಪಿ.ಸಿ. ಕವನ ಅವರೊಂದಿಗೆ ಠಾಣಾ ವ್ಯಾಪ್ತಿಯ ಹಮಾಲಿ ಕ್ಯಾಂಪ್, ಸಿದ್ಲಿಪುರ, ದೇವಕಾತಿಕೊಪ್ಪ, ವಿರೂಪಿನಕೊಪ್ಪ ಹಾಗೂ ತ್ಯಾವರೆಕೊಪ್ಪ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಪರಾಧ ತಡೆ ಮತ್ತು ಪತ್ತೆ ಕಾರ್ಯದಲ್ಲಿ ನಿರತರಾಗಿದ್ದರು.
ಜುಲೈ 31ರಂದು ಬೆಳಗಿನ ಜಾವ ಸುಮಾರು 4.00ರಿಂದ 4.30 ಗಂಟೆಯ ನಡುವೆ ಕೋಟೆಗಂಗೂರು ಗ್ರಾಮದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ, ಬೀಗ ಹಾಕಿದ್ದ ಮನೆಯ ಸಮೀಪ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಆತ ತನ್ನ ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಂಡಿದ್ದು, ಮನೆಯ ಸುತ್ತಮುತ್ತ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದನು ಎನ್ನಲಾಗಿದೆ.
ಪೊಲೀಸರು ಆತನನ್ನು ವಿಚಾರಿಸಲು ಮುಂದಾಗುತ್ತಿದ್ದಂತೆಯೇ, ಆತ ಕತ್ತಲೆಯ ಸದುಪಯೋಗ ಪಡೆದು ಸ್ಥಳದಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಹಾಗೂ ಸಿಬ್ಬಂದಿ ಬೆನ್ನಟ್ಟಿಕೊಂಡು ಆತನನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಆತ ತನ್ನನ್ನು ಸುನಿಲ್ ಕುಮಾರ್ ಎಂ @ ಸುನಿಲ್ (37), ಉಪ್ಪಾರ ಬೀದಿ, ಕೋಟೆಗಂಗೂರು ಗ್ರಾಮದ ನಿವಾಸಿ ಹಾಗೂ ಕೂಲಿ ಕಾರ್ಮಿಕ ಎಂದು ಪರಿಚಯಿಸಿಕೊಂಡಿದ್ದಾನೆ. ಆದರೆ ಆ ಸಮಯದಲ್ಲಿ ಆ ಸ್ಥಳದಲ್ಲಿರುವುದಕ್ಕೆ ಯಾವುದೇ ಸಮಂಜಸವಾದ ಕಾರಣ ಅಥವಾ ಉತ್ತರ ನೀಡಲು ವಿಫಲನಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆತನನ್ನು ಸ್ಥಳದಲ್ಲೇ ಬಿಟ್ಟರೆ ಕಳ್ಳತನ ಅಥವಾ ಇತರೆ ಅಪರಾಧ ಕೃತ್ಯ ಎಸಗುವ ಸಾಧ್ಯತೆ ಇದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 259/2026ರಡಿ ಕರ್ನಾಟಕ ಪೊಲೀಸ್ ಕಾಯ್ದೆ, 1963ರ ಕಲಂ 96(O) ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
Police nab man suspiciously roaming near locked house

