SUDDILIVE || ಆಗುಂಬೆ
ಆಗುಂಬೆಯಲ್ಲಿ ವ್ಯಾಪಕ ಮಳೆ ನೀರಿನಲ್ಲಿ ಸಿಲುಕಿದ ಕಾರು: ಹೊನ್ನಾವರದ ಕುಟುಂಬವನ್ನು ಸಾಹಸದಿಂದ ರಕ್ಷಿಸಿದ ಸ್ಥಳೀಯ ಯುವಕರು-Car stuck in heavy rain water in Agumbe: Local youths bravely rescue family from Honnavar
ಆಗುಂಬೆ : ಹೊನ್ನಾವರ ಮೂಲದ ಕುಟುಂಬವೊಂದು ಕಾರಲಿನಲ್ಲಿ ಆಗುಂಬೆ ಮೂಲಕ ಶೃಂಗೇರಿಗೆ ತೆರಳುತ್ತಿದ್ದ ವೇಳೆ ನಬಾಳದಲ್ಲಿ ರಸ್ತೆಯಲ್ಲಿ ನಿಂತ ನೀರಿನಿಂದಾಗಿ ಸಿಲುಕಿಕೊಂಡಿದ್ದು ಅವರನ್ನ ಸ್ಥಳೀಯರು ರಕ್ಷಿಸಿರುವ ಘಟನೆ ವರದಿಯಾಗಿದೆ.
ಆಗುಂಬೆಯಲ್ಲಿ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮೊಣಕಾಲಿನಷ್ಟು ನೀರು ನಿಂತಿದೆ. ಈ ನೀರಿನ ಅಂದಾಜು ಸಿಗದ ಕಾರಣ ಸ್ವಿಫ್ಟ್ ಕಾರು ರಸ್ತೆಯಲ್ಲಿ ಸಾಗಿದೆ. ಪರಿಣಾಮ ಕಾರು ನೀರಿನ ಮಣ್ಣಿನಲ್ಲಿ ಸಿಲುಕಿಕೊಂಡು ಚಲಿಸದಂತಾಗಿದೆ. ಇದನ್ನಕಂಡ ಗ್ರಾಮದ ಕೆಲ ಯುವಕರು ಹಗ್ಗ ಕಟ್ಟಿ ಎಳೆದುಕೊಂಡು ಬಂದಿದ್ದಾರೆ. ನೀರಿನ ಹರಿವು ತೀವ್ರವಾಗಿದ್ದರಿಂದ ಕಾರಿನಲ್ಲಿದ್ದ ಕುಟುಂಬದ ಸದಸ್ಯರು ಆತಂಕಕ್ಕೊಳಗಾಗಿದ್ದರು.
ಸ್ಥಳೀಯರಾದ ಪ್ರವೀಣ್ ಬೆಳ್ಳೂರು, ಉಮೇಶ್ ಹೊಸ್ಕೇರಿ ಹಾಗೂ ಮಂಜುನಾಥ ರೈಸ್ ಮಿಲ್ ಅವರ ತ್ವರಿತ ಕಾರ್ಯಾಚರಣೆಯಿಂದ ಕುಟುಂಬದ ಎಲ್ಲ ಸದಸ್ಯರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಅವರು ಕಾರ್ಯಾಚರಣೆ ನಡೆಸಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ರಕ್ಷಣಾ ಕಾರ್ಯದಲ್ಲಿ ಪ್ರವೀಣ್ ಬೆಳ್ಳೂರು ಅವರ ಸಾಹಸ ವಿಶೇಷವಾಗಿ ಗಮನ ಸೆಳೆಯಿತು. ರಭಸವಾಗಿ ಹರಿಯುತ್ತಿದ್ದ ನೀರಿನ ನಡುವೆಯೇ ಅವರು ಪುಟ್ಟ ಮಗುವನ್ನು ತಮ್ಮ ಹೆಗಲ ಮೇಲೆ ಹೊತ್ತು ಸುರಕ್ಷಿತ ಸ್ಥಳಕ್ಕೆ ಕರೆತಂದು ಮಗುವಿನ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಈ ಧೈರ್ಯಶಾಲಿ ಕಾರ್ಯವನ್ನು ಕಂಡ ಸ್ಥಳದಲ್ಲಿದ್ದವರು ಪ್ರಶಂಸಿಸಿದರು.
ಉಮೇಶ್ ಹೊಸ್ಕೇರಿ ಹಾಗೂ ಮಂಜುನಾಥ ರೈಸ್ ಮಿಲ್ ಅವರೂ ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕುಟುಂಬದ ಉಳಿದ ಸದಸ್ಯರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಮಹತ್ವದ ಸಹಕಾರ ನೀಡಿದರು.
ಈ ಮಾನವೀಯ ಹಾಗೂ ಸಾಹಸಮಯ ಕಾರ್ಯಕ್ಕೆ ಗ್ರಾಮಸ್ಥರು ಮತ್ತು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಜೀವದ ಹಂಗು ತೊರೆದು ಇತರರ ನೆರವಿಗೆ ಧಾವಿಸಿದ ಪ್ರವೀಣ್ ಬೆಳ್ಳೂರು, ಉಮೇಶ್ ಹೊಸ್ಕೇರಿ ಹಾಗೂ ಮಂಜುನಾಥ ರೈಸ್ ಮಿಲ್ ಅವರ ಸೇವಾಭಾವವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.
