SUDDILIVE |ANANDAPURA
ಚಾಲಕನ ನಿಯಂತ್ರಣ ತಪ್ಪಿ ಕಾಸ್ಪಾಡಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್-Private bus crashes into Kaspadi Lake barrier after driver loses control
48 ಪ್ರಯಾಣಿಕರಿದ್ದ ಬಸ್; 10 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕಿಗೆ ಸಣ್ಣಪುಟ್ಟ ಗಾಯ
ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಕಾಸ್ಪಾಡಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಆನಂದಪುರ ಸಮೀಪದ ಕಾಸ್ಪೋಡಿಯಲ್ಲಿ ನಿನ್ನೆ ಶನಿವಾರ ನಡೆದಿದೆ.
ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 48 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸಾಗರ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಬಸ್‌ನಲ್ಲಿ ಆನಂದಪುರಕ್ಕೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಕಾಸ್ಪೋಡಿ ಕೆರೆಯ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಹಾನಿಗೊಳಗಾಗಿದ್ದು, ಬಸ್‌ನಲ್ಲಿದ್ದ 10 ವಿದ್ಯಾರ್ಥಿಗಳು ಹಾಗೂ ಓರ್ವ ಉಪನ್ಯಾಸಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ತಕ್ಷಣ ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ತುರ್ತು ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ರವಿಶಂಕರ್ ಹಾಗೂ ಉಪನ್ಯಾಸಕರಾದ ಭಾಸ್ಕರ್, ಜಗನ್ನಾಥ್ ಮತ್ತು ಉಮೇಶ್ ಬಿ ಡಿ ರವಿಕುಮಾರ್ ಸೇರಿದಂತೆ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿದರು.
ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Private bus crashes into Kaspadi Lake barrier after driver loses control

