ತೀರ್ಥಹಳ್ಳಿ-ತಡೆಗೋಡೆ ಕುಸಿದು ಮೂವರು ಸಾವು-Thirthahalli - Three feared dead in mud after barrier collapses

 SUDDILIVE || THIRTHAHALLI

ತೀರ್ಥಹಳ್ಳಿ-ತಡೆಗೋಡೆ ಕುಸಿದು ಮೂವರು ಸಾವು-Thirthahalli - Three feared dead in mud after barrier collapses     
Thirthahalli, mud

ಮಲೆನಾಡಿನಲ್ಲಿ ಸುರಿಯುತ್ತಿರುವ ನಿರಂತರ ಧಾರಾಕಾರ ಮಳೆ ಇದೀಗ ಭಾರೀ ದುರಂತಕ್ಕೆ ಕಾರಣವಾಗಿದ್ದು, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 15ರ ಗಾಂಧಿನಗರ ಬಡಾವಣೆಯಲ್ಲಿ ಸುಮಾರು 60 ಅಡಿ ಉದ್ದ ಹಾಗೂ 25 ಅಡಿ ಎತ್ತರದ ತಡೆಗೋಡೆ ಕುಸಿದು ಬಿದ್ದ ಪರಿಣಾಮ ಮೂರು ಮಂದಿ ಮಣ್ಣುನಲ್ಲಿ ಸಿಲುಕಿಕೊಂಡು ಸತ್ತಿರುವ ಶಂಕೆ ವ್ಯಕ್ತವಾಗಿದೆ. ಓರ್ವನನ್ನ ಮೆಗ್ಗಾನ್ ಗೆ ಸಾಗಿಸಲಾಗಿದೆ. 

ಮಾಹಿತಿಯ ಪ್ರಕಾರ, ನಿನ್ನೆ ರಾತ್ರಿ ತಡರಾತ್ರಿ ಹಾಗೂ ಇಂದು ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಸುರಿದ ಭಾರೀ ಮಳೆಯಿಂದಾಗಿ ತಡೆಗೋಡೆ ಏಕಾಏಕಿ ಕುಸಿದು ಪಕ್ಕದಲ್ಲಿದ್ದ ಮನೆಗಳ ಮೇಲೆ ಬಿದ್ದಿದೆ. ಈ ಪ್ರದೇಶದಲ್ಲಿ ಮಣ್ಣಿನ ಕೆಲಸ ಮಾಡುವ ಸುಮಾರು 20 ಕಾರ್ಮಿಕರ ಕುಟುಂಬಗಳು ವಾಸವಾಗಿದ್ದು, ಅವರಲ್ಲಿ 15 ಕುಟುಂಬಗಳು ವಿಜಯನಗರ ಜಿಲ್ಲೆಯ ಹೊಸಪೇಟೆ ಭಾಗದವರಾಗಿದ್ದರೆ, ಉಳಿದ ಐದು ಕುಟುಂಬಗಳು ದಾವಣಗೆರೆ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ.

ದುರಂತದಲ್ಲಿ ಮಣ್ಣಿನಡಿ ಸಿಲುಕಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಗಂಡ, ಹೆಂಡತಿ ಹಾಗೂ ಅವರ ಮೂರು ವರ್ಷದ ಮಗು ಮಣ್ಣಿನಡಿ ಸಿಲುಕಿಕೊಂಡಿದ್ದು ಇವರನ್ನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನವರು ಎಂದು ಗುರುತಿಸಲಾಗಿದೆ. ಇನ್ನೊಬ್ಬ ಕಾರ್ಮಿಕ ಹನುಮಂತ ಅವರಿಗೆ ಗಂಭೀರ ಗಾಯಗಳಾಗಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಬೆಳಿಗ್ಗೆ 4 ಗಂಟೆಯಿಂದ ಸುಮಾರು 6.30ರವರೆಗೆ ನಿರಂತರ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿ ಹೊರತೆಗೆದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿಯ ಪ್ರಕಾರ, ಖಾಸಗಿ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮಣ್ಣು ಕುಸಿಯದಂತೆ ನಿರ್ಮಿಸಲಾಗಿದ್ದ ತಡೆಗೋಡೆ (ರಿಟೈನಿಂಗ್ ವಾಲ್) ಏಕಾಏಕಿ ಕುಸಿದಿದೆ. ಗೋಡೆ ಕುಸಿದ ಪರಿಣಾಮ ಮೇಲ್ಭಾಗದಿಂದ ಅಪಾರ ಪ್ರಮಾಣದ ಮಣ್ಣು ಜರಿದು ಪಕ್ಕದಲ್ಲಿದ್ದ ತಾತ್ಕಾಲಿಕ ಶೆಡ್ ಮೇಲೆ ಬಿದ್ದಿದೆ. ಪರಿಣಾಮ ಶೆಡ್ ಸಂಪೂರ್ಣವಾಗಿ ಮಣ್ಣಿನಡಿ ಸಿಲುಕಿ ದುರಂತ ಸಂಭವಿಸಿದೆ.

ದುರಂತದಲ್ಲಿ ಮಣ್ಣನಲ್ಲಿ ಸಿಲುಕಿ ಸತ್ತಿರುವವರನ್ನ ಮಲ್ಲಿಕಾರ್ಜುನ (30), ನಾಗವೇಣಿ (25) ಹಾಗೂ ಸಂತೋಷ್ (3) ಎಂದು ಗುರುತಿಸಲಾಗಿದೆ. ಮೃತರು ಮೂಲತಃ ಕೊಪ್ಪಳ ಜಿಲ್ಲೆಯ ನಿವಾಸಿಗಳಾಗಿದ್ದು, ಕೂಲಿ ಕೆಲಸಕ್ಕಾಗಿ ತೀರ್ಥಹಳ್ಳಿಗೆ ಬಂದು ಖಾಸಗಿ ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. 


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ 112 ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೃತದೇಹಗಳನ್ನು ಹೊರತೆಗೆದು ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಇದೇ ವೇಳೆ ತಡೆಗೋಡೆಯ ಮೇಲ್ಭಾಗದಲ್ಲಿರುವ ಜಫ್ರುಲ್ಲಾ ಎಂಬುವರ ಮನೆ ಹಾಗೂ ಕಾಂಪೌಂಡ್ ಗೋಡೆಯೂ ಕುಸಿಯುವ ಅಪಾಯದಲ್ಲಿದ್ದು, ಮತ್ತೊಂದು ದುರಂತ ಸಂಭವಿಸುವ ಮುನ್ನವೇ ಜಿಲ್ಲಾಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ನಿರಂತರ ಮಳೆಯಿಂದ ಮಲೆನಾಡು ಭಾಗದಲ್ಲಿ ಭೂಕುಸಿತ, ತಡೆಗೋಡೆ ಕುಸಿತ ಹಾಗೂ ಮನೆಗಳಿಗೆ ಹಾನಿಯಾಗುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಬೇಕೆಂಬ ಒತ್ತಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

Thirthahalli - Three feared dead in mud after barrier collapses

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close