SUDDILIVE || SHIVAMOGGA
ಜುಲೈ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ- Less than usual rainfall in Shivamogga district in July
ಶಿವಮೊಗ್ಗ, ಆ.1: ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ ತಿಂಗಳ ಮಳೆ ಪ್ರಮಾಣದ ವರದಿ ಪ್ರಕಟವಾಗಿದ್ದು, ಜಿಲ್ಲೆಯಾದ್ಯಂತ ಒಟ್ಟಾರೆ 450.96 ಮಿ.ಮೀ. ಮಳೆಯಾಗಿದ್ದು, ಇದು 603.54 ಮಿ.ಮೀ. ವಾಡಿಕೆ ಮಳೆಗಿಂತ ಸುಮಾರು 152.58 ಮಿ.ಮೀ. ಕಡಿಮೆ ದಾಖಲಾಗಿದೆ. ಹೀಗಾಗಿ ಈ ಬಾರಿ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ತಾಲ್ಲೂಕುವಾರು ಮಳೆ ಪ್ರಮಾಣವನ್ನು ಗಮನಿಸಿದರೆ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 922.20 ಮಿ.ಮೀ. ಮಳೆಯಾಗಿದ್ದು, ನಂತರ ಹೊಸನಗರದಲ್ಲಿ 813.20 ಮಿ.ಮೀ., ಸಾಗರದಲ್ಲಿ 677.32 ಮಿ.ಮೀ. ಮಳೆ ದಾಖಲಾಗಿದೆ. ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದರೂ, ವಾಡಿಕೆ ಮಳೆಯೊಂದಿಗೆ ಹೋಲಿಸಿದರೆ ಹಲವೆಡೆ ಕೊರತೆ ಕಂಡುಬಂದಿದೆ.
ಇನ್ನೊಂದೆಡೆ, ಬಯಲುನಾಡು ಭಾಗದ ಭದ್ರಾವತಿ ತಾಲ್ಲೂಕಿನಲ್ಲಿ ಕೇವಲ 102.90 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲೇ ಅತಿ ಕಡಿಮೆ ಮಳೆ ದಾಖಲಾದ ತಾಲ್ಲೂಕಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 132.80 ಮಿ.ಮೀ., ಶಿಕಾರಿಪುರದಲ್ಲಿ 168.70 ಮಿ.ಮೀ. ಹಾಗೂ ಸೊರಬದಲ್ಲಿ 339.60 ಮಿ.ಮೀ. ಮಳೆಯಾಗಿದೆ.
ತಿಂಗಳ ಆರಂಭದಲ್ಲಿ, ವಿಶೇಷವಾಗಿ ಜುಲೈ 7 ಮತ್ತು 8ರಂದು ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಹೆಚ್ಚಿನ ಮಳೆ ದಾಖಲಾಗಿತ್ತು. ನಂತರದ ದಿನಗಳಲ್ಲಿ ಮಳೆಯ ತೀವ್ರತೆ ಕುಸಿದಿದ್ದು, ಕೆಲ ದಿನಗಳಲ್ಲಿ ಅಲ್ಪ ಪ್ರಮಾಣದ ಮಳೆಯಷ್ಟೇ ದಾಖಲಾಗಿದೆ. ತಿಂಗಳ ಕೊನೆಯ ವಾರದಲ್ಲಿ ಮತ್ತೆ ಕೆಲವು ಭಾಗಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾದರೂ, ಒಟ್ಟಾರೆ ವಾಡಿಕೆ ಮಳೆ ಪ್ರಮಾಣವನ್ನು ತಲುಪಲು ಸಾಧ್ಯವಾಗಿಲ್ಲ.
ಜಿಲ್ಲೆಯ ಕೃಷಿ ಚಟುವಟಿಕೆ, ಜಲಾಶಯಗಳ ಒಳಹರಿವು ಹಾಗೂ ಅಂತರ್ಜಲ ಮಟ್ಟದ ಮೇಲೂ ಈ ಮಳೆ ಕೊರತೆಯ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
Less than usual rainfall in Shivamogga district in July

