SUDDILIVE || SHIVAMOGGA
ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಶಿವಮೊಗ್ಗ ನಾಗರಾಜ್‌ಗೆ ಕನ್ಸೋಲೇಶನ್ ಅವಾರ್ಡ್-Consolation award for Shivamogga's Nagaraj in national photography competition
ಶಿವಮೊಗ್ಗ: ಆಂಧ್ರಪ್ರದೇಶ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ–2026ರಲ್ಲಿ ಪತ್ರಿಕಾ ಹಾಗೂ ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರು ಪ್ರತಿಷ್ಠಿತ ಕನ್ಸೋಲೇಶನ್ ಅವಾರ್ಡ್‌ಗೆ ಭಾಜನರಾಗಿದ್ದಾರೆ.
ಶಿವಮೊಗ್ಗ ನಾಗರಾಜ್ ಅವರು ಶಿಕಾರಿಪುರದಲ್ಲಿ ಸೆರೆಹಿಡಿದ ‘ಹೋರಿ ಹಬ್ಬ’ದ ಛಾಯಾಚಿತ್ರಕ್ಕೆ ಸ್ಪರ್ಧೆಯ ಸ್ಪಾಟ್ ನ್ಯೂಸ್ ವಿಭಾಗದಲ್ಲಿ ಕನ್ಸೋಲೇಶನ್ ಅವಾರ್ಡ್ ದೊರೆತಿದೆ. ಗ್ರಾಮೀಣ ಸೊಗಡಿನ ಜತೆಗೆ ಹೋರಿ ಹಬ್ಬದ ಸಾಂಪ್ರದಾಯಿಕ ಆಚರಣೆಯನ್ನು ಪರಿಣಾಮಕಾರಿಯಾಗಿ ಸೆರೆಹಿಡಿದಿರುವ ಈ ಛಾಯಾಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.
ಇದೇ ಛಾಯಾಚಿತ್ರವು ಇತ್ತೀಚೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನಡೆದ ಎರಡು ದಿನಗಳ ಛಾಯಾಚಿತ್ರ ಪ್ರದರ್ಶನದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತ್ತು.
ಶಿವಮೊಗ್ಗ ನಾಗರಾಜ್ ಅವರು ಸೆರೆಹಿಡಿದಿರುವ ಹಲವು ಛಾಯಾಚಿತ್ರಗಳು ದೇಶ-ವಿದೇಶಗಳಲ್ಲಿ ನಡೆದ ವಿವಿಧ ಛಾಯಾಚಿತ್ರ ಪ್ರದರ್ಶನ ಹಾಗೂ ಸ್ಪರ್ಧೆಗಳಲ್ಲಿ ಪ್ರದರ್ಶನಗೊಂಡಿದ್ದು, ಹಲವು ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳ ಜೊತೆಗೆ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಂಡಿವೆ. ಈ ಮೂಲಕ ಶಿವಮೊಗ್ಗ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೆ ವಿಶೇಷ ಗೌರವ ತಂದುಕೊಟ್ಟಿದ್ದಾರೆ.
ಪತ್ರಿಕಾ ಛಾಯಾಗ್ರಹಣದ ಜತೆಗೆ ವನ್ಯಜೀವಿ, ಗ್ರಾಮೀಣ ಜೀವನ, ಜನಪದ ಆಚರಣೆಗಳು ಹಾಗೂ ಸಾಮಾಜಿಕ ವಿಚಾರಗಳನ್ನು ತಮ್ಮ ಕ್ಯಾಮೆರಾದಲ್ಲಿ ದಾಖಲಿಸುತ್ತಿರುವ ನಾಗರಾಜ್ ಅವರು, ಪ್ರತಿವರ್ಷ ತಾವು ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸುತ್ತಿದ್ದಾರೆ. ಛಾಯಾಚಿತ್ರಗಳ ಮೂಲಕ ಜನರಲ್ಲಿ ಪರಿಸರ, ವನ್ಯಜೀವಿ, ಸಂಸ್ಕೃತಿ ಮತ್ತು ಸಾಮಾಜಿಕ ವಿಚಾರಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮತ್ತೊಂದು ಪ್ರಶಸ್ತಿ ದೊರೆತಿರುವುದು ಶಿವಮೊಗ್ಗ ನಾಗರಾಜ್ ಅವರ ಛಾಯಾಗ್ರಹಣ ಕ್ಷೇತ್ರದ ಸಾಧನೆಗೆ ಮತ್ತೊಂದು ಗರಿಮೆ ತಂದಿದೆ.
Consolation award for Shivamogga's Nagaraj in national photography competition

