ಮಲಂದೂರು ಸರ್ವೇ ನಂ.148ರ ಗ್ರಾಮ ಠಾಣ ಜಾಗ ರಕ್ಷಣೆಗೆ ಆಗ್ರಹ; ನಿರಾಶ್ರಿತರಿಗೆ ಮೀಸಲಿಡುವಂತೆ ಒತ್ತಾಯ-Demand to protect the 'Gramathana' land in Malandur Survey No. 148; call to reserve it for the displaced

 SUDDILIVE || SHIVAMOGGA

ಮಲಂದೂರು ಸರ್ವೇ ನಂ.148ರ ಗ್ರಾಮ ಠಾಣ ಜಾಗ ರಕ್ಷಣೆಗೆ ಆಗ್ರಹ; ನಿರಾಶ್ರಿತರಿಗೆ ಮೀಸಲಿಡುವಂತೆ ಒತ್ತಾಯ-Demand to protect the 'Gramathana' land in Malandur Survey No. 148; call to reserve it for the displaced   
Malanduru, syrvey



ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಂದೂರು ಗ್ರಾಮದ ಸರ್ವೇ ನಂ.148ರಲ್ಲಿರುವ ಗ್ರಾಮ ಠಾಣದ ಜಾಗವನ್ನು ರಕ್ಷಿಸಿ, ಸ್ಥಳೀಯ ನಿರಾಶ್ರಿತರು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡ್ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಜಾಗ ಅತ್ಯಂತ ಪ್ರಮುಖ ಸ್ಥಳದಲ್ಲಿದ್ದು, ಸುಮಾರು ₹20 ಕೋಟಿ ಮೌಲ್ಯ ಹೊಂದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಲವು ದಶಕಗಳಿಂದ ಸಾರ್ವಜನಿಕ ಉದ್ದೇಶಕ್ಕಾಗಿ ಉಳಿಸಿಕೊಂಡು ಬಂದಿರುವ ಈ ಜಾಗವನ್ನು ಸ್ಥಳೀಯ ನಿರಾಶ್ರಿತರಿಗೆ ಮನೆ ನಿವೇಶನ ಸೇರಿದಂತೆ ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಬಳಸಬೇಕು ಎಂಬುದು ನಾಗರಿಕರು ಹಾಗೂ ಪಕ್ಷಾತೀತ ಮುಖಂಡರ ಆಶಯವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜಕೀಯ ಪ್ರಭಾವದಿಂದ ಜಾಗ ಕಬಳಿಕೆ ಆರೋಪ

ಅಮೂಲ್ಯವಾದ ಸರ್ಕಾರಿ ಜಾಗವನ್ನು ರಾಜಕೀಯ ಪ್ರಭಾವ, ಅಧಿಕಾರ ಹಾಗೂ ಹಣದ ಬಲದಿಂದ ಕಬಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ. ಶಾಸಕರ ಬೆಂಬಲಿಗರು ಎಂದು ಹೇಳಿಕೊಳ್ಳುವ ಕೆಲವರು ಹಾಗೂ ಭೂಮಾಫಿಯಾದೊಂದಿಗೆ ಸಂಬಂಧ ಹೊಂದಿರುವವರು ಜಾಗದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ, ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಿ ಜಾಗ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ

ಗ್ರಾಮ ಠಾಣದ ಜಾಗದ ವಿವಾದವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆಯೂ ತನಿಖೆ ನಡೆಸಬೇಕು ಎಂದು ರತ್ನಾಕರ ಹೊನಗೋಡ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಮಾಡಲಾಗಿರುವ ಆರೋಪಗಳು ಸತ್ಯವೆಂದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

"ಸಾರ್ವಜನಿಕರ ಜಾಗವನ್ನು ಯಾವುದೇ ಕಾರಣಕ್ಕೂ ಕಬಳಿಸಲು ಬಿಡುವುದಿಲ್ಲ"

ಮಲಂದೂರು ಗ್ರಾಮದ ಸರ್ವೇ ನಂ.148ರ ಗ್ರಾಮ ಠಾಣದ ಜಾಗ ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆಯ ಸ್ವತ್ತಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಈ ಜಾಗವನ್ನು ಆನಂದಪುರ ಭಾಗದ ನಾಗರಿಕರು ಹಾಗೂ ಸ್ಥಳೀಯ ನಿರಾಶ್ರಿತ ನಿವಾಸಿಗಳ ಉಪಯೋಗಕ್ಕಾಗಿ ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಸರ್ಕಾರ ಹಾಗೂ ಅಧಿಕಾರಿಗಳ ಕರ್ತವ್ಯ. ರಾಜಕೀಯ ಅಥವಾ ಹಣದ ಪ್ರಭಾವಕ್ಕೆ ಒಳಗಾಗಿ ಸಾರ್ವಜನಿಕ ಜಾಗದ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಜಾಗದ ದಾಖಲೆಗಳನ್ನು ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

"ಸರ್ವೇ ನಂ.148ರ ಗ್ರಾಮ ಠಾಣ ಉಳಿಯಬೇಕು, ಸಾರ್ವಜನಿಕರ ಉಪಯೋಗಕ್ಕೆ ಮೀಸಲಾಗಬೇಕು" ಎಂಬುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹವಾಗಿದೆ.

ಈ ಸಂದರ್ಭದಲ್ಲಿ PLD ಬ್ಯಾಂಕ್ ನಿರ್ದೇಶಕ ಕೆ. ಗಂಗಾಧರಪ್ಪ, ಮ್ಯಾಮ್‌ಕೋಸ್ ನಿರ್ದೇಶಕ ಭರ್ಮಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಗುರುರಾಜ್, ನವೀನ, ರವಿ ಗೌಡ, ಶಿವಾನಂದ, ಗಣಪತಿ ಇರುವಕ್ಕಿ, ಶಿವಾನಂದ ಗೇರಬೀಸ್, ಪ್ರಮುಖರಾದ ಶಾಂತಕುಮಾರ್ ಚೌಡಪ್ಪ, ಮೋಹನ್, ಪರಮೇಶಿ, ಲಲಿತಮ್ಮ, ದಲಿತ ಸಮಿತಿ ಸಂಚಾಲಕ ರೇವಪ್ಪ, ನಾಗರಾಜ, ಶೇಖರಪ್ಪ ದಾಸಕೋಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Demand to protect the 'Gramathana' land in Malandur Survey No. 148; call to reserve it for the displaced

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close