SUDDILIVE ||SHIVAMOGGA
ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾವೈಕ್ಯತೆಯ ಮೆರುಗು- A touch of communal harmony at the Eid Milad procession in Shivamogga 
ಸೂಳೆಬೈಲು ಭಾಗದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸೌಹಾರ್ದತೆ ಮೆರೆದರು. ಚಿತ್ರದಲ್ಲಿ ತುಂಗ ನಗರ ಠಾಣೆಯ ಪಿಐ ಕೆಟಿ ಗುರುರಾಜ್ ರನ್ನ ಕಾಣಬಹುದು

ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಧರ್ಮ-ಜಾತಿಯ ಎಲ್ಲೆಗಳನ್ನು ಮೀರಿದ ಭಾವೈಕ್ಯತೆಯ ಸುಂದರ ದೃಶ್ಯಗಳು ಕಂಡುಬಂದವು. ರಾಗಿಗುಡ್ಡ ಹಾಗೂ ಸೂಳೆಬೈಲು ಭಾಗದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸೌಹಾರ್ದತೆ ಮೆರೆದರು.
ಸೂಳೆಬೈಲು ಗ್ರಾಮದ ಕುಂಚಿಟಿಗರ ಬೀದಿ ಹಾಗೂ ಶ್ರೀ ದುರ್ಗಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಹಿಂದೂ ಬಾಂಧವರು, ಸೂಳೆಬೈಲು ಗ್ರಾಮದ ಸುನ್ನಿ ಮಕ್ಕಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಗ್ರಾಮದ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ತಂಪು ಪಾನೀಯ, ಕುಡಿಯುವ ನೀರು, ಸಿಹಿ ಪದಾರ್ಥ ಹಾಗೂ ಪಾಯಸ ವಿತರಿಸುವ ಮೂಲಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಪ್ರೀತಿಯಿಂದ ಪಾಯಸ ಮತ್ತು ಸಿಹಿ ವಿತರಿಸಿ, ಈದ್ ಮಿಲಾದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವಂತೆ ಶುಭ ಹಾರೈಸಿದರು.
![]() |
| ರಾಗಿಗುಡ್ಡದಲ್ಲಿ ಈದ್ ಮೆರವಣಿಗೆಯಲ್ಲಿದ್ದ ಮುಸ್ಲೀಂ ಬಾಂಧವರಿಗೆ ಹಿಂದೂ ಮುಖಂಡರು ಸಿಹಿ ಹಂಚಿ ಚಾಲನೆ ನೀಡಿದರು |
ಹಿಂದೂ ಮುಖಂಡರ ಈ ಸೌಹಾರ್ದಯುತ ನಡೆಗೆ ಮುಸ್ಲಿಂ ಬಾಂಧವರು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಹಬ್ಬದ ಸಂದರ್ಭದಲ್ಲಿ ಪರಸ್ಪರ ಶುಭಾಶಯ ಕೋರಿ, ಸಿಹಿ ಹಂಚಿಕೊಂಡು ಸಂಭ್ರಮಿಸಿರುವುದು ಶಿವಮೊಗ್ಗದ ಭಾವೈಕ್ಯತೆಯ ಪರಂಪರೆಗೆ ಮತ್ತೊಂದು ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಮನೋಜ್, ಸಂತೋಷ್, ಕೇಬಲ್ ಮಂಜುನಾಥ್, ನಾಗರಾಜ್, ಅಶೋಕ್, ರವಿ, ಸುನಿಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು, ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿದರು.
ಈದ್ ಮಿಲಾದ್ ಮೆರವಣಿಗೆಯ ಹಾದಿಯಲ್ಲಿ ಕಂಡುಬಂದ ಈ ಸೌಹಾರ್ದತೆಯ ಕ್ಷಣಗಳು ಧರ್ಮಗಳ ನಡುವೆ ಪ್ರೀತಿ, ಸಹೋದರತ್ವ ಹಾಗೂ ಪರಸ್ಪರ ಗೌರವವನ್ನು ಸಾರುವಂತಿದ್ದವು. ಶಿವಮೊಗ್ಗದಲ್ಲಿ ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗದೆ, ವಿವಿಧ ಸಮುದಾಯಗಳ ನಡುವೆ ಸ್ನೇಹ ಮತ್ತು ಭಾವೈಕ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ವೇದಿಕೆಯಾಗುತ್ತಿವೆ ಎಂಬ ಸಂದೇಶವನ್ನು ಈ ಸಂದರ್ಭ ಸಾರಿತು.

