SUDDILIVE || BANGLORE
ಜನಸೇವೆಗೆ ಆದ್ಯತೆ-ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಎಂದ್ರು ಸಿಎಂ-ಸಿಎಂ ಹೇಳಿದಂತೆ ನಡೆಯುತ್ತಾ?Priority to public service and zero tolerance for corruption—that’s what the CM said; will things actually happen as he stated?
ರಾಜ್ಯದ ಆಡಳಿತ ವ್ಯವಸ್ಥೆಯ ಯಶಸ್ಸಿನಲ್ಲಿ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನೌಕರರು ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ತಂಡವಾಗಿ ಕಾರ್ಯನಿರ್ವಹಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರದ ಅಧಿಕಾರವನ್ನು ಜನಸೇವೆಯ ಅವಕಾಶವೆಂದು ಪರಿಗಣಿಸಿ ನಿಸ್ವಾರ್ಥವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಮಂಗಳವಾರ ನಡೆದ ಕರ್ನಾಟಕ ಸರ್ಕಾರದ ನೌಕರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಆಡಳಿತ ಯಂತ್ರದ ಪ್ರಮುಖ ಆಧಾರಸ್ತಂಭಗಳಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಜನರ ಸೇವೆಯೇ ಅಧಿಕಾರಿಗಳ ಪ್ರಮುಖ ಜವಾಬ್ದಾರಿ
ರಾಜ್ಯದ ಸುಮಾರು 7 ಕೋಟಿ ಜನಸಂಖ್ಯೆಯ ಪೈಕಿ ಅತ್ಯಲ್ಪ ಸಂಖ್ಯೆಯ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರಿಗೆ ಸಾರ್ವಜನಿಕ ಸೇವೆ ಮಾಡುವ ಅವಕಾಶ ದೊರೆತಿದೆ. ಈ ಅವಕಾಶವನ್ನು ಅತ್ಯಂತ ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಅಧಿಕಾರಿಗಳ ಜವಾಬ್ದಾರಿ ಕೇವಲ ಕಚೇರಿ ಕಡತಗಳ ವಿಲೇವಾರಿಗೆ ಸೀಮಿತವಾಗಿರಬಾರದು. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು ಸಾಧ್ಯ. ಸಾರ್ವಜನಿಕರು ಕಚೇರಿಗೆ ಬಂದಾಗ ಅವರನ್ನು ಗೌರವದಿಂದ ಕಾಣಬೇಕು. ಅವರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ, ಕಾನೂನು ಚೌಕಟ್ಟಿನೊಳಗೆ ಸಾಧ್ಯವಾದಷ್ಟು ಪರಿಹಾರ ಕಲ್ಪಿಸಬೇಕು ಎಂದರು.
ತಾಲೂಕು ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ
ಸಾರ್ವಜನಿಕರ ಅರ್ಜಿಗಳು ಮತ್ತು ಕುಂದುಕೊರತೆಗಳು ಅನಗತ್ಯವಾಗಿ ಜಿಲ್ಲಾ ಅಥವಾ ರಾಜ್ಯ ಮಟ್ಟಕ್ಕೆ ತಲುಪುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸಾಧ್ಯವಾದಷ್ಟು ಸಮಸ್ಯೆಗಳನ್ನು ತಾಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸಬೇಕು ಎಂದು ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ನಿಯೋಜಿತ ಕೇಂದ್ರ ಸ್ಥಾನದಲ್ಲೇ ವಾಸವಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಬೇಕು. ಅಧಿಕಾರಿಗಳು ಕಚೇರಿಗಳಲ್ಲಿ ಕಡ್ಡಾಯವಾಗಿ ಲಭ್ಯವಿದ್ದು, ಜನರ ಅಹವಾಲುಗಳನ್ನು ಆಲಿಸುವ ವ್ಯವಸ್ಥೆ ಬಲಪಡಿಸಬೇಕು ಎಂದರು.
ಮನೆ ಬಾಗಿಲಿಗೆ ಖಾತಾ ಮತ್ತು ಪ್ರಮಾಣಪತ್ರ
ಗ್ರಾಮೀಣ ಪ್ರದೇಶದ ಸುಮಾರು 1.11 ಕೋಟಿ ಕುಟುಂಬಗಳು ಹಾಗೂ ನಗರ ಪ್ರದೇಶದ 25 ಲಕ್ಷ ಮನೆಗಳಿಗೆ ಯಾವುದೇ ಲಂಚದ ಹಂಗಿಲ್ಲದೆ ಉಚಿತವಾಗಿ ಫೋಟೋ ಮತ್ತು ಸಹಿ ಸಹಿತ ಖಾತಾ/ಪ್ರಮಾಣಪತ್ರಗಳನ್ನು ಒದಗಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮುಂದಿನ 5ರಿಂದ 6 ತಿಂಗಳೊಳಗೆ ರಾಜ್ಯದ ಎಲ್ಲ ಪಂಚಾಯಿತಿಗಳು ಹಾಗೂ ಹೋಬಳಿ ಮಟ್ಟದಲ್ಲಿ ಈ ಪ್ರಮಾಣಪತ್ರಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
'ಕರ್ನಾಟಕ ಮಾದರಿ' ದೇಶಕ್ಕೆ ಮಾದರಿ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಗ್ಯಾರಂಟಿ ಯೋಜನೆಗಳನ್ನು ದೇಶದ ಹಲವು ರಾಜ್ಯಗಳು ಅನುಸರಿಸುತ್ತಿವೆ. ಇದರಿಂದ ಕರ್ನಾಟಕ ಮಾದರಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಅಧಿಕಾರ ಎಂಬುದು ಕೇವಲ ಶಕ್ತಿಯ ಸಂಕೇತವಲ್ಲ; ಅದು ಸಾರ್ವಜನಿಕ ಜವಾಬ್ದಾರಿಯಾಗಿದೆ. ಬಸವಣ್ಣನವರ ಆಶಯದಂತೆ 'ಜನಸೇವೆಯೇ ಜನಾರ್ದನ ಸೇವೆ' ಎಂಬ ತತ್ವದಡಿ ಅಧಿಕಾರಿಗಳು ಹಾಗೂ ನೌಕರರು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ತಂತ್ರಜ್ಞಾನ ಬಳಕೆಗೆ ಒತ್ತು
ಸರ್ಕಾರದ ಯೋಜನೆಗಳು ಮತ್ತು ಕಾಮಗಾರಿಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು. ಫಲಾನುಭವಿಗಳ ಆಧಾರ್, ಫೋಟೋ, ವಿಡಿಯೋ ಸೇರಿದಂತೆ ಅಗತ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದರು.
ರಾಜ್ಯಾದ್ಯಂತ ಪಿಡಬ್ಲ್ಯೂಡಿ, ಬಿಬಿಎಂಪಿ ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಕ್ಕೆ ತರಲಾಗುತ್ತಿದೆ. ಇದರಿಂದ ದಾಖಲೆಗಳ ನಿರ್ವಹಣೆ ಸುಲಭವಾಗುವುದರ ಜೊತೆಗೆ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ
ಸರ್ಕಾರದ ಯಾವುದೇ ಕೆಲಸದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಎಸ್ಪಿ, ತಹಶೀಲ್ದಾರ್ ಹಾಗೂ ಕಮಿಷನರ್ ಮಟ್ಟದ ಅಧಿಕಾರಿಗಳಿಂದ ಹಿಡಿದು ಕೆಳಹಂತದ ಸಿಬ್ಬಂದಿವರೆಗೆ ಎಲ್ಲರ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು.
ಪ್ರತಿಯೊಂದು ಕಾಮಗಾರಿ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಪಾಡಬೇಕು. ಅಧಿಕಾರಿಗಳು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಿಸ್ವಾರ್ಥವಾಗಿ ಜನಸೇವೆ ಮಾಡಬೇಕು ಎಂದು ಹೇಳಿದರು. ಭಾರತದಲ್ಲಿ ಪಿಡುಗಾಗಿ ಬೆಳೆದಿರುವ ಭ್ರಷ್ಠಾಚಾರ ಸಿಎಂ ಕರೆಯಿಂದ ನಿವಾರಣೆ ಆಗುವುದಾದರೆ ಮೇರಾ ಭಾರತ್ ಮಹಾನ್ ಅಂತನೇ ಹೇಳಬೇಕು.
ಅಧಿಕಾರಿಗಳ ಚಲನವಲನ ಪರಿಶೀಲನೆ
ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು, ಪಿಡಿಒ, ತಹಶೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ನಿಯಮಿತವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಹಿರಿಯ ಅಧಿಕಾರಿಗಳು ಅವರ ಭೇಟಿ ಸಮಯ ಮತ್ತು ಚಟುವಟಿಕೆಗಳನ್ನು ಪರಿಶೀಲಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಹಾಗೂ ಆಶ್ರಮಗಳಿಗೆ ಸ್ಥಳೀಯ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಮೂಲಸೌಕರ್ಯ, ಬಿಸಿಯೂಟ, ಸ್ವಚ್ಛತೆ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
'ಟೀಮ್ ಕರ್ನಾಟಕ'ವಾಗಿ ಕೆಲಸ ಮಾಡಬೇಕು
ವಿಧಾನಸೌಧವು ಕರ್ನಾಟಕದ ಪ್ರಜಾಸತ್ತಾತ್ಮಕ ಮೌಲ್ಯಗಳ ಸಂಕೇತವಾಗಿದೆ. ಕೆಂಗಲ್ ಹನುಮಂತಯ್ಯ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಸೇರಿದಂತೆ ರಾಜ್ಯವನ್ನು ಮುನ್ನಡೆಸಿದ ಹಲವು ಮುಖ್ಯಮಂತ್ರಿಗಳ ಕೊಡುಗೆಯನ್ನು ಸ್ಮರಿಸಿದ ಅವರು, ಹಿಂದಿನ ಇತಿಹಾಸವನ್ನು ಓದುವುದಕ್ಕಿಂತ ಹೊಸ ಇತಿಹಾಸ ನಿರ್ಮಿಸುವುದು ಮುಖ್ಯ ಎಂದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಸೇರಿದಂತೆ ಪ್ರಜಾಪ್ರಭುತ್ವದ ಪ್ರಮುಖ ಅಂಗಗಳು ಸಮನ್ವಯದಿಂದ ಕೆಲಸ ಮಾಡಿದಾಗ ರಾಜ್ಯದ ಅಭಿವೃದ್ಧಿ ಸಾಧ್ಯ. ಅಧಿಕಾರಿಗಳು ಮತ್ತು ನೌಕರರು ತಮ್ಮ ಕಾರ್ಯಗಳು ಮುಂದಿನ ಪೀಳಿಗೆಗೂ ಮಾದರಿಯಾಗುವಂತೆ ಆಡಳಿತ ನಡೆಸಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ ಅಭಿನಂದನೆ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂದು ತಿಳಿಸಿರುವುದು ಸಂತಸದ ಸಂಗತಿ ಎಂದು ಮುಖ್ಯಮಂತ್ರಿ ಹೇಳಿದರು. ಈ ನಿಲುವಿಗಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಮುಂಬರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಬಿಇಒ ಹಾಗೂ ಡಿಡಿಪಿಐಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬರ ಪರಿಸ್ಥಿತಿಯಲ್ಲಿ ತುರ್ತು ಕ್ರಮಕ್ಕೆ ಪರಮೇಶ್ವರ ಸೂಚನೆ
ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದ ಹಲವು ಭಾಗಗಳಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿಯ ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಾರ್ವಜನಿಕರು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳು ಹಾಗೂ ಪರಿಹಾರ ಕ್ರಮಗಳು ತಳಮಟ್ಟದ ಜನರಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
164 ತಾಲೂಕುಗಳಲ್ಲಿ ಬರ ಪರಿಸ್ಥಿತಿ
ರಾಜ್ಯದ ಒಟ್ಟು 240 ತಾಲೂಕುಗಳ ಪೈಕಿ 164 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಾ.ಜಿ. ಪರಮೇಶ್ವರ ತಿಳಿಸಿದರು.
ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೆರೆಯ ರಾಜ್ಯಗಳಲ್ಲೂ ಬೆಳೆ ಕೊರತೆಯಿರುವುದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಕೆಎಂಎಫ್ ಮೂಲಕ ತುಮಕೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 1 ಲಕ್ಷ ಮೇವಿನ ಕಿಟ್‌ಗಳನ್ನು ವಿತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಉದ್ಯೋಗ ಖಾತರಿ ಕಾಮಗಾರಿಗಳಿಗೆ ಆದ್ಯತೆ
ಗ್ರಾಮೀಣ ಪ್ರದೇಶಗಳಿಂದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಉದ್ಯೋಗ ಖಾತರಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 'ವಿಬಿ ಜಿ ರಾಮ್ ಜಿ' ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ 51 ಸಾವಿರ ಮಾನವ ದಿನಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಬೆಳೆ ವಿಮೆ ನೋಂದಣಿ ಸಂದರ್ಭದಲ್ಲಿ ಆಸಕ್ತಿ ತೋರುವ ಕೆಲವು ವಿಮಾ ಕಂಪನಿಗಳು ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಹಿನ್ನೆಲೆಯಲ್ಲಿ ವಿಮಾ ಕಂಪನಿಗಳೊಂದಿಗೆ ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರತಿ ಪಂಚಾಯಿತಿಯಲ್ಲಿ 'ಭಾರತ್ ಜೋಡೋ' ಸಂಘ
ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಭಾವೈಕ್ಯತೆ ಬೆಳೆಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 'ಭಾರತ್ ಜೋಡೋ' ಸಂಘಗಳನ್ನು ರಚಿಸುವ ವಿನೂತನ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಡಾ.ಜಿ. ಪರಮೇಶ್ವರ ತಿಳಿಸಿದರು.
ಪ್ರತಿ ಸಂಘಕ್ಕೆ ವರ್ಷಕ್ಕೆ ₹10 ಲಕ್ಷ ಅನುದಾನ ನೀಡುವ ಯೋಜನೆ ರೂಪಿಸಲಾಗುತ್ತಿದೆ. ಸಾಮಾಜಿಕ ಸೌಹಾರ್ದತೆ ಮತ್ತು ಗ್ರಾಮೀಣ ಮಟ್ಟದ ಅಭಿವೃದ್ಧಿ ಚಟುವಟಿಕೆಗಳಿಗೆ ಈ ಸಂಘಗಳು ನೆರವಾಗಲಿವೆ ಎಂದರು.
ಸೆಪ್ಟೆಂಬರ್‌ನಲ್ಲಿ ಬರ ತೀವ್ರಗೊಳ್ಳುವ ಸಾಧ್ಯತೆ
ಸೆಪ್ಟೆಂಬರ್‌ನಲ್ಲಿ ಬರ ಪರಿಸ್ಥಿತಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಲಭ್ಯವಿದ್ದು, ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸಬೇಕು ಎಂದು ಉಪ ಮುಖ್ಯಮಂತ್ರಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಬರ ಪರಿಸ್ಥಿತಿ, ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಲಭ್ಯತೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಪಡೆದರು.
ಶಿವಮೊಗ್ಗದಿಂದ ಅಧಿಕಾರಿಗಳ ವರ್ಚುವಲ್ ಭಾಗವಹಿಸುವಿಕೆ
ಶಿವಮೊಗ್ಗ ಜಿಲ್ಲೆಯಿಂದ ವಿಡಿಯೋ ಸಂವಾದದ ಮೂಲಕ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್ ಎನ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಸಿಸಿಎಫ್ ಹನುಮಂತಪ್ಪ, ಡಿಸಿಎಫ್‌ಗಳಾದ ಪ್ರಸನ್ನಕೃಷ್ಣ ಪಟಗಾರ್, ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಎಸಿ ಸತ್ಯನಾರಾಯಣ್ ಸೇರಿದಂತೆ ತಹಶೀಲ್ದಾರರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಲಕ್ಷ್ಮಣ ಸವದಿ, ಸಂತೋಷ್ ಎಸ್. ಲಾಡ್, ಅಜಯ್ ಸಿಂಗ್, ವಿಜಯಾನಂದ ಕಾಶಪ್ಪನವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

