ಸ್ವದೇಶಿ ಮಂತ್ರದ ಮೂಲಕ ದೇಶಭಕ್ತಿ ಜಾಗೃತಿ: ಸಂಕಲ್ಪ ಶಿವಮೊಗ್ಗದಿಂದ ವಿಶೇಷ ಕಾರ್ಯಕ್ರಮ-Awakening patriotism through the 'Swadeshi' mantra: A special program by Sankalpa Shivamogga

 SUDDILIVE || SHIVAMOGGA

ಸ್ವದೇಶಿ ಮಂತ್ರದ ಮೂಲಕ ದೇಶಭಕ್ತಿ ಜಾಗೃತಿ: ಸಂಕಲ್ಪ ಶಿವಮೊಗ್ಗದಿಂದ ವಿಶೇಷ ಕಾರ್ಯಕ್ರಮ-Awakening patriotism through the 'Swadeshi' mantra: A special program by Sankalpa Shivamogga    
Sankalpa, swadeshi



ಶಿವಮೊಗ್ಗ: ಶಿಕ್ಷಣ, ಸೇವೆ, ಸಂಸ್ಕೃತಿ ಹಾಗೂ ಸಮೃದ್ಧಿಯ ಆಶಯದೊಂದಿಗೆ ವಿವಿಧ ಸಂಘ-ಸಂಸ್ಥೆಗಳು ಒಗ್ಗೂಡಿ ರೂಪಿಸಿರುವ ‘ಸಂಕಲ್ಪ ಶಿವಮೊಗ್ಗ’ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಸ್ವದೇಶಿ ಮಂತ್ರ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮುಖ್ಯವಾಗದೆ, ಎಲ್ಲರೂ ಸೇರಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಚಿಂತನೆಯ ಫಲವಾಗಿ ‘ಸಂಕಲ್ಪ ಶಿವಮೊಗ್ಗ’ ಆರಂಭವಾಗಿದೆ ಎಂದರು.

ಈ ಹಿಂದೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳು ಯಶಸ್ವಿಯಾಗಿದ್ದು, ಇದೀಗ ಎರಡನೇ ಪ್ರಮುಖ ಕಾರ್ಯಕ್ರಮವಾಗಿ ‘ಸ್ವದೇಶಿ ಮಂತ್ರ’ವನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಇನ್ನಷ್ಟು ಸಂಘ-ಸಂಸ್ಥೆಗಳು ಕೈಜೋಡಿಸಿದ್ದು, ಎಲ್ಲರ ಸಹಕಾರದಿಂದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ರಾತ್ರಿ 9ರಿಂದ ಮಧ್ಯರಾತ್ರಿ 12ರವರೆಗೆ ಕಾರ್ಯಕ್ರಮ

ನಗರದ ಗೋಪಿ ಸರ್ಕಲ್‌ನಲ್ಲಿ ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿರಂತರವಾಗಿ ಕಾರ್ಯಕ್ರಮ ನಡೆಯಲಿದೆ. ನಾಡಗೀತೆಯೊಂದಿಗೆ ಆರಂಭವಾಗುವ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚು ಕಲಾವಿದರು, ನೃತ್ಯ ಕಲಾವಿದರು ಸೇರಿದಂತೆ ಭಾಗವಹಿಸಲಿದ್ದು, ದೇಶಭಕ್ತಿ, ನಾಡು-ನುಡಿ ಹಾಗೂ ರಾಷ್ಟ್ರಾಭಿಮಾನದ ಸಂದೇಶ ಸಾರುವ ಗೀತೆಗಳು ಮತ್ತು ನೃತ್ಯ ಪ್ರದರ್ಶನಗಳು ನಡೆಯಲಿವೆ. ಶಿವಮೊಗ್ಗ ನಗರದ ಸ್ಥಳೀಯ ಕಲಾವಿದರಿಗೂ ಈ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಷಡಾಕ್ಷರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಯಾವುದೇ ಸಾಂಪ್ರದಾಯಿಕ ಭಾಷಣ ಅಥವಾ ಸಭಾ ಕಾರ್ಯಕ್ರಮ ಇರುವುದಿಲ್ಲ. ರಾತ್ರಿ 9ರಿಂದ 12ರವರೆಗೆ ನಿರಂತರವಾಗಿ ಸಾಂಸ್ಕೃತಿಕ ಹಾಗೂ ದೇಶಭಕ್ತಿ ಕಾರ್ಯಕ್ರಮಗಳು ನಡೆಯಲಿವೆ. ಈ ನಡುವೆ ಸುಮಾರು 10 ಯೋಧರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವೂ ಇರಲಿದೆ.

ಕಾರ್ಗಿಲ್ ಯೋಧರಿಂದ ಉದ್ಘಾಟನೆ

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಕಾರ್ಗಿಲ್ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಸಾಗರದ ಯೋಧ ಸುಭಾಷ್ ಚಂದ್ರ ಬೋಸ್ ತೇಜಸ್ವಿ ಅವರ ಮೂಲಕ ಕಾರ್ಯಕ್ರಮ ಉದ್ಘಾಟಿಸುವ ಉದ್ದೇಶವಿದೆ ಎಂದು ಷಡಾಕ್ಷರಿ ಹೇಳಿದರು.

ಮಧ್ಯರಾತ್ರಿ 12 ಗಂಟೆಗೆ ಸಿಹಿ ಮದ್ದು ಸಿಡಿಸಿ, ಸುಮಾರು 5ರಿಂದ 6 ಸಾವಿರ ಜನರಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸುವ ಚಿಂತನೆ ಇದೆ ಎಂದರು.

40–50 ಸಾವಿರ ಮನೆಗಳಿಗೆ ಕಾರ್ಯಕ್ರಮದ ಮಾಹಿತಿ

ಈಗಾಗಲೇ ಶಿವಮೊಗ್ಗ ನಗರದ ಸುಮಾರು 40ರಿಂದ 50 ಸಾವಿರ ಮನೆಗಳಿಗೆ ಕಾರ್ಯಕ್ರಮದ ಕುರಿತು ಮಾಹಿತಿ ತಲುಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಕಾರ್ಯಕ್ರಮದ ಪ್ರಚಾರ ನಡೆಯುತ್ತಿದೆ. ಪತ್ರಿಕೆಗಳ ಮೂಲಕವೂ ಹೆಚ್ಚಿನ ಜನರಿಗೆ ಕಾರ್ಯಕ್ರಮದ ಮಾಹಿತಿ ತಲುಪಿಸುವಂತೆ ಅವರು ಮನವಿ ಮಾಡಿದರು.

‘ಆಸ್ಕ್ ಶಿವಮೊಗ್ಗ’ ಆ್ಯಪ್ ಬಿಡುಗಡೆ

ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿ ‘ಆಸ್ಕ್ ಶಿವಮೊಗ್ಗ’ ಎಂಬ ಸಾಮಾಜಿಕ ಮಾಧ್ಯಮ ಆ್ಯಪ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಷಡಾಕ್ಷರಿ ತಿಳಿಸಿದರು.

ಬೆಂಗಳೂರಿನಲ್ಲಿ ‘ಆಸ್ಕ್ ಬೆಂಗಳೂರು’, ಮೈಸೂರಿನಲ್ಲಿ ‘ಆಸ್ಕ್ ಮೈಸೂರು’ ಮಾದರಿಯಲ್ಲಿ ‘ಆಸ್ಕ್ ಶಿವಮೊಗ್ಗ’ ವೇದಿಕೆಯಲ್ಲಿ ಶಿವಮೊಗ್ಗ ನಗರದ ವಿವಿಧ ಚಟುವಟಿಕೆಗಳು, ಕಾರ್ಯಕ್ರಮಗಳು ಹಾಗೂ ಸ್ಥಳೀಯ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಪಡೆಯುವ ವ್ಯವಸ್ಥೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ನಗರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಸ್ವಾಮೀಜಿಗಳು, ಸಾಧಕರು, ಸಂತರು, ಶರಣರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಆದರೆ ಯಾವುದೇ ಗಣ್ಯರಿಗೆ ವೇದಿಕೆಯಲ್ಲಿ ಭಾಷಣದ ಅವಕಾಶ ಇರುವುದಿಲ್ಲ. ಎಲ್ಲರೂ ಸಾಮಾನ್ಯ ಪ್ರೇಕ್ಷಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಜಾತಿ, ಧರ್ಮ, ಪಕ್ಷಾತೀತ ಕಾರ್ಯಕ್ರಮ

ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಸತ್ಯಾಗ್ರಹಗಳು, ಸಭೆಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸ್ವದೇಶಿ ಚಿಂತನೆ ಹಾಗೂ ದೇಶಾಭಿಮಾನವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಷಡಾಕ್ಷರಿ ಹೇಳಿದರು.

ಜಾತಿ, ಧರ್ಮ ಹಾಗೂ ರಾಜಕೀಯ ಪಕ್ಷಗಳ ಭೇದವನ್ನು ಮೀರಿ ಎಲ್ಲರೂ ಒಗ್ಗೂಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಸಂಘ-ಸಂಸ್ಥೆಗಳು, ಸೇವಾ ಸಂಘಟನೆಗಳು ಹಾಗೂ ಮಾಧ್ಯಮಗಳ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಆಶಯವಿದೆ ಎಂದರು.

ಮಳೆ ಬಂದರೂ ಕಾರ್ಯಕ್ರಮ ನಿಲ್ಲುವುದಿಲ್ಲ

ಕಾರ್ಯಕ್ರಮದ ದಿನ ಮಳೆಯಾದರೂ ಯಾವುದೇ ಕಾರಣಕ್ಕೂ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದಿಲ್ಲ. ಮಳೆ ಬಂದರೆ ರೈನ್‌ಕೋಟ್, ಕ್ಯಾಪ್ ಅಥವಾ ಛತ್ರಿ ಹಿಡಿದುಕೊಂಡಾದರೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.

ಸಾಧ್ಯವಾದಷ್ಟು ಶುಭ್ರ ಬಿಳಿ ಬಟ್ಟೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವುದು ‘ಸಂಕಲ್ಪ ಶಿವಮೊಗ್ಗ’ ಸಮಿತಿಯ ಆಶಯವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕನ್ನಡ ರಾಜ್ಯೋತ್ಸವಕ್ಕೂ ವಿಶೇಷ ಕಾರ್ಯಕ್ರಮ

‘ಸಂಕಲ್ಪ ಶಿವಮೊಗ್ಗ’ ಯಾವುದೇ ಒಬ್ಬ ವ್ಯಕ್ತಿಯ ಸಂಕಲ್ಪವಲ್ಲ. ಶಿವಮೊಗ್ಗ ನಗರದ ವಿವಿಧ ಸಂಘ-ಸಂಸ್ಥೆಗಳು, ಸೇವಾ ಸಂಘಟನೆಗಳು ಒಟ್ಟಾಗಿ ಕೈಗೊಂಡ ಸಂಕಲ್ಪದ ಫಲವಾಗಿದೆ ಎಂದು ಷಡಾಕ್ಷರಿ ಸ್ಪಷ್ಟಪಡಿಸಿದರು.

ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನೂ ವಿಶೇಷವಾಗಿ ಆಚರಿಸುವ ಕುರಿತು ಚರ್ಚೆ ನಡೆದಿದೆ. ನಾಡು, ನುಡಿ, ದೇಶ, ಭಾಷೆ ಹಾಗೂ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

ದೇಶಭಕ್ತಿ ಗೀತೆಗಳ ಗುಂಪು ಗಾಯನ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆಯ ಜೊತೆಗೆ ದೇಶಾಭಿಮಾನ ಮತ್ತು ರಾಷ್ಟ್ರಪ್ರೇಮವನ್ನು ಮೂಡಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಲಿದೆ ಎಂದು ಸಿ.ಎಸ್. ಷಡಾಕ್ಷರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಾರ್ ಅಸೋಸಿಯೇಷನ್ ನ ನೂತನ ಜಿಲ್ಲಾಧ್ಯಕ್ಷ ರಾಘವೇಂದ್ರ ಸ್ವಾಮಿ, ಪ್ರೆಸ್ ಟ್ರಸ್ಟ್ ನ ಅಧ್ಯಕ್ಷ ಮಂಜುನಾಥ್, ವಕೀಲ ಶ್ರೀಪಾಲ, ಬಳ್ಳೇಕೆರೆ ಸಂತೋಷ್, ಗಾಯಕಿ ಸುರೇಖ ಹೆಗ್ಡೆ, ಸಮನ್ವಯ ಕಾಶಿ ಮೊದಲಾದವರು ಉಪಸ್ಥಿತರಿದ್ದರು.  

Awakening patriotism through the 'Swadeshi' mantra: A special program by Sankalpa Shivamogga    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close