ಹಣಿಗೇರಿ ವನ್ಯಜೀವಿ ವಲಯದಲ್ಲಿ ಬೇಟೆಗೆ ಸಜ್ಜಾಗಿದ್ದ ನಾಲ್ವರು ಬಂಧನ- Four arrested while preparing to hunt in the Hanigeri wildlife zone

 SUDDILIVE || SHIVAMOGGA

ಹಣಿಗೇರಿ ವನ್ಯಜೀವಿ ವಲಯದಲ್ಲಿ ಬೇಟೆಗೆ ಸಜ್ಜಾಗಿದ್ದ ನಾಲ್ವರು ಬಂಧನ- Four arrested while preparing to hunt in the Hanigeri wildlife zone   
Hanigere, wildlife


ಶಿವಮೊಗ್ಗ:
 ಚಾಮರಾಜ ನಗರ ಹನೂರಿನಲ್ಲಿ ವನ್ಯಜೀವಿಗಳನ್ನ ಬೇಟೆಯಾಡಲು ಹೋದವರನ್ನ ಅರಣ್ಯ ಇಲಾಖೆಯವರು ಹೊಡೆದುರುಳಿಸಿರುವ ಘಟನೆ ಇನ್ನೂ ಜನ ಮಾನಸದಲ್ಲಿ ಮರೆಮಾಚುವ ಮುನ್ನ, ಅದೇ ರೀತಿ ಅರಣ್ಯದಲ್ಲಿ ವನ್ಯಜೀವಿಗಳನ್ನ ಬೇಟೆಯಾಡಲು ಹೋಗಿ ಅರಣ್ಯ ಇಲಾಖೆಯವರ ಕೈಗೆ ಸಿಕ್ಕಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಘಟನೆ ವರದಿಯಾಗಿದೆ. 

ಶಿವಮೊಗ್ಗ ತಾಲೂಕಿನ ಹಣಿಗೇರಿ ವನ್ಯಜೀವಿ ವಲಯದ ಸಿರಿಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಬೇಟೆಯಾಡಲು ಸಜ್ಜಾಗಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಂದ ಎರಡು ಒಂಟಿ ನಳಿಯ ನಾಡ ಬಂದೂಕುಗಳು ಸೇರಿದಂತೆ ಬೇಟೆಗೆ ಬಳಸಲು ಸಿದ್ಧಪಡಿಸಿಕೊಂಡಿದ್ದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ನಿನ್ನೆ ರಾತ್ರಿ ಸುಮಾರು 11.15ರ ವೇಳೆಗೆ ನಡೆದಿದ್ದು, ಬಂಧಿತರನ್ನು ಚೋರಡಿ ವಡೆಯರಕೊಪ್ಪ ಗ್ರಾಮದ ಲೋಕೇಶ್ ಎಸ್.ಡಿ., ಸಚಿನ್ ಎಂ., ಅರುಣ್ ಕುಮಾರ್ ಹಾಗೂ ಸುಬ್ಬರಾಯ ಎಂದು ಗುರುತಿಸಲಾಗಿದೆ.

ಬೇಟೆಗೆ ಸಜ್ಜಾಗಿದ್ದ ವೇಳೆ ದಾಳಿ

ಅರಣ್ಯ ತನಿಖಾ ಠಾಣೆಯ ಸಮೀಪದ ಅರಣ್ಯ ಪ್ರದೇಶದಲ್ಲಿ ನಾಲ್ವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ಆರೋಪಿಗಳು ಬೇಟೆಯಾಡಲು ಸಿದ್ಧತೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.

ತಕ್ಷಣ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ನಾಲ್ವರನ್ನು ಸುತ್ತುವರಿದು ಬಂಧಿಸಿದ್ದಾರೆ. ಆರೋಪಿಗಳು ಬೇಟೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು ಹಾಗೂ ಇತರೆ ಸಾಮಗ್ರಿಗಳನ್ನು ತಮ್ಮೊಂದಿಗೆ ಹೊಂದಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಸ್ತ್ರಾಸ್ತ್ರ, ವಾಹನ ಸೇರಿದಂತೆ ಹಲವು ವಸ್ತು ವಶ

ಬಂಧಿತರಿಂದ ಎರಡು ಒಂಟಿ ನಳಿಯ ನಾಡ ಬಂದೂಕುಗಳು, ಮಾರುತಿ ಓಮಿನಿ ವಾಹನ, ಒಂದು ಕತ್ತಿ, ಚಾಕು, ಗನ್ ಪೌಡರ್, ಲೋಹದ ಗುಂಡುಗಳು ಹಾಗೂ ಬ್ಯಾಟರಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳನ್ನು ಬೇಟೆಯಾಡುವ ಉದ್ದೇಶದಿಂದ ಆರೋಪಿಗಳು ಸಂಚು ರೂಪಿಸಿ ಸ್ಥಳಕ್ಕೆ ಬಂದಿದ್ದರೇ ಎಂಬುದರ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬಂಧಿತ ನಾಲ್ವರನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ

ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳ ಸೂಕ್ತ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ನಿದರ್ಶನ ಚವ್ಹಾಣ ಹಾಗೂ ಮಂಜುನಾಥ್ ನಾಯ್ಕ್, ಗಸ್ತು ಅರಣ್ಯ ಪಾಲಕರಾದ ಅರವಿಂದ್ ಜಿ. ಹಾಗೂ ಬಸವರಾಜ್, ವಾಹನ ಚಾಲಕರಾದ ಸಂತೋಷ್ ಮತ್ತು ದಿನಗೂಲಿ ನೌಕರರಾದ ಸಿದ್ದು ಬಡಿಗೇರ್ ಅವರು ಭಾಗವಹಿಸಿದ್ದರು.

ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ಅಕ್ರಮ ಬೇಟೆ ಹಾಗೂ ವನ್ಯಜೀವಿ ಅಪರಾಧಗಳ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ರಾತ್ರಿ ವೇಳೆ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ಗಸ್ತು ಹಾಗೂ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

Four arrested while preparing to hunt in the Hanigeri wildlife zone

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close