ಶಿವಮೊಗ್ಗದಲ್ಲಿ 13.5 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿರ್ಮಾಣಕ್ಕೆ ಚಾಲನೆ-Construction of Karnataka Public School in Shivamogga launched at a cost of ₹13.5 crore

 SUDDILIVE || SHIVAMOGGA

ಶಿವಮೊಗ್ಗದಲ್ಲಿ 13.5 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿರ್ಮಾಣಕ್ಕೆ ಚಾಲನೆ-Construction of Karnataka Public School in Shivamogga launched at a cost of ₹13.5 crore    

Ajax, csrfound

ಏಜಾಕ್ಸ್ ಸಂಸ್ಥೆಯ ಸಿಎಸ್‌ಆರ್ ನೆರವಿನಿಂದ 35 ತರಗತಿ ಕೊಠಡಿ, ಶೌಚಾಲಯ ಹಾಗೂ ಅಕ್ಷರ ದಾಸೋಹ ಭವನ ನಿರ್ಮಾಣ



ಶಿವಮೊಗ್ಗ: ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಶಿವಮೊಗ್ಗದಲ್ಲಿ ಮತ್ತಷ್ಟು ಬಲ ಸಿಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸೈನ್ಸ್ ಮೈದಾನದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ  ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಏಜಾಕ್ಸ್ ಇಂಜಿನಿಯರಿಂಗ್ ಲಿಮಿಟೆಡ್ ಹಾಗೂ ಏಜಾಕ್ಸ್ ಇಂಜಿನಿಯರಿಂಗ್ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಇವರ ಸಿಎಸ್‌ಆರ್ ನಿಧಿಯ ಸುಮಾರು 13.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ ಎಂದು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಯೋಜನೆಯಡಿ 35 ಶಾಲಾ ತರಗತಿ ಕೊಠಡಿಗಳು, ಶೌಚಾಲಯಗಳು ಹಾಗೂ ಮಕ್ಕಳಿಗೆ ಬಿಸಿಯೂಟ ವಿತರಿಸಲು ಅಕ್ಷರ ದಾಸೋಹ ಭವನ ನಿರ್ಮಾಣವಾಗಲಿದೆ. ಕಾಮಗಾರಿಯನ್ನು ಒಂದು ವರ್ಷದೊಳಗಾಗಿ ಪೂರ್ಣಗೊಳಿಸಿ ಶಾಲಾ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಉದ್ದೇಶ ಹೊಂದಲಾಗಿದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಯಡಿ ಎಲ್‌ಕೆಜಿಯಿಂದ ಹನ್ನೆರಡನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಆವರಣದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 11 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನಡಿ ಮತ್ತಷ್ಟು 24 ಕೆಪಿಎಸ್ ಶಾಲೆಗಳು ಮಂಜೂರಾಗಿವೆ ಎಂದು ಸಚಿವರು ತಿಳಿಸಿದರು.

ಇದರ ಜೊತೆಗೆ ಸಿಎಸ್‌ಆರ್ ನಿಧಿಯಡಿ ರಾಜ್ಯಾದ್ಯಂತ 1,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಯೋಜನೆ ರೂಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 35 ಕೆಪಿಎಸ್ ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಇದರಿಂದ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ ಎಂದರು.

ಈ ಯೋಜನೆ ಅನುಷ್ಠಾನಕ್ಕೆ ಸಿಎಸ್‌ಆರ್ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರ ಪಡೆಯಲಾಗುತ್ತಿದೆ. ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈಗಾಗಲೇ ಸಭೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.

ನಗರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ

ಶಿವಮೊಗ್ಗ ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ನಗರ ಪ್ರದೇಶದ ಮಕ್ಕಳಿಗೆ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಒಂದೇ ಸೂರಿನಡಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ದೊರೆಯಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಇದರ ಮುಂದಿನ ಹಂತದಲ್ಲಿ ಏಜಾಕ್ಸ್ ಇಂಜಿನಿಯರಿಂಗ್ ಲಿಮಿಟೆಡ್ ಹಾಗೂ ಏಜಾಕ್ಸ್ ಇಂಜಿನಿಯರಿಂಗ್ ಚಾರಿಟಬಲ್ ಟ್ರಸ್ಟ್ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶವೂ ಇದೆ. ನಗರದ ವಿವಿಧ ಭಾಗಗಳ ಮಕ್ಕಳು ಬಸ್ ಮೂಲಕ ಶಾಲೆಗೆ ಆಗಮಿಸಿ ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು ಎಂಬುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳ ಭಾಗವಾಗಿ ಸಿಎಸ್‌ಆರ್ ಸಂಸ್ಥೆಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಗಳಿಗೆ ಆಧುನಿಕ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಏಜಾಕ್ಸ್ ಸಂಸ್ಥೆಯ ಸಹಕಾರದಿಂದ ನಿರ್ಮಾಣವಾಗಲಿರುವ ಈ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡವು ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ ಎಂದು ಸಚಿವರು ಹೇಳಿದರು.

ಸರ್ವ ಜನಾಂಗದ ಮಕ್ಕಳಿಗೂ ಸಮಾನವಾಗಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿ ಆರಂಭವಾಗುತ್ತಿರುವ ಈ ಯೋಜನೆ ಸರ್ಕಾರ, ಸಿಎಸ್‌ಆರ್ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರದ ಉತ್ತಮ ಮಾದರಿಯಾಗಲಿದೆ ಎಂದು ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

Construction of Karnataka Public School in Shivamogga launched at a cost of ₹13.5 crore  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close