SUDDILIVE || HOLEHONNURU
ವೀರಶೈವ ಲಿಂಗಾಯತ ಧರ್ಮ ಶ್ರೇಷ್ಠ-ಗುರುಸಿದ್ದ ರಾಜಯೋಗಿಂದ್ರ ಶ್ರೀ-Veerashaiva Lingayat Dharma is Supreme: Gurusidda Rajayogindra Sri
ಹೊಳೆಹೊನ್ನೂರು: ವೀರಶೈವ ಲಿಂಗಾಯತ ಧರ್ಮ ಅತ್ಯಂತ ಶ್ರೇಷ್ಠವಾದ ಧರ್ಮವಾಗಿದ್ದು, ಧರ್ಮದಲ್ಲಿ ಪ್ರತಿಪಾದಿಸಿರುವ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಶ್ರೀಗಳು ಹೇಳಿದರು.
ಸಮೀಪದ ಡಿ.ಬಿಹಳ್ಳಿಯಲ್ಲಿ ಸೋಮವಾರ ಶ್ರಾವಣ ಮಾಸದ ಎರಡನೇ ಸೋಮವಾರದ ಅಂಗವಾಗಿ ನಡೆದ 53ನೇ ಜಂಗಮ ಆರಾಧನೆ ಕಾರ್ಯಕ್ರಮದಲ್ಲಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವೀರಶೈವ ಹಾಗೂ ಲಿಂಗಾಯತ ಒಂದೇ ಎಂಬ ಸಂದೇಶವನ್ನು ಭೇದಭಾವವಿಲ್ಲದೆ ಸಾರಿದ ಕೀರ್ತಿ ಮಹಾನ್ ಚೈತನ್ಯ ಹಾನಗಲ್ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ. ಧರ್ಮದ ಮಾರ್ಗದಲ್ಲಿ ನಡೆದು ಸಂಸ್ಕಾರಯುತ ಜೀವನ ಕಟ್ಟಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಧರ್ಮದಲ್ಲಿ ತಿಳಿಸಿರುವ ಸಂಸ್ಕೃತಿ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.
ಅವಿಭಕ್ತ ಕುಟುಂಬಗಳ ಸಹಬಾಳ್ವೆಯ ಜೀವನ ಕ್ರಮ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಕುಟುಂಬದ ಸದಸ್ಯರು ಪರಸ್ಪರ ಪ್ರೀತಿ, ಗೌರವ ಮತ್ತು ಸಹಕಾರದಿಂದ ಬದುಕುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ತಮ್ಮ ಸಂಪಾದನೆಯ ಅಲ್ಪಭಾಗವನ್ನಾದರೂ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಬೇಕು. ಧಾರ್ಮಿಕ ಕಾರ್ಯಗಳಿಗೆ ಕೈಜೋಡಿಸುವುದು ಪುಣ್ಯದ ಕೆಲಸವಾಗಿದೆ ಎಂದರು.
ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಇಷ್ಟಲಿಂಗ ಪೂಜೆಯನ್ನು ಎಂದಿಗೂ ಮರೆಯಬಾರದು. ವೃದ್ಧಾಪ್ಯದಲ್ಲಿ ಪಾಲಕರು ವೃದ್ಧಾಶ್ರಮಗಳ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಮಕ್ಕಳೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ಅರಿತು ಧರ್ಮದ ಮಾರ್ಗದಲ್ಲಿ ನಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಮ್ಕೋ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ನೌಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ್, ಜಿ.ಹೆಚ್. ಜಯಣ್ಣ, ಓಂಕಾರಪ್ಪ, ಶಿವಾನಂದಪ್ಪ, ಪ್ರಶಾಂತ್, ವಾಗೀಶ್, ಗಿರೀಶ್, ವಿರೂಪಾಕ್ಷ, ಹರ್ಷ ಕಾಮತ್, ಕೆ.ಜಿ. ನಿಂಗಪ್ಪ, ಕುಮಾರ್‌ಸ್ವಾಮಿ, ಶ್ರೀನಿವಾಸ್, ರಾಜು ಪಲಾಂಕರ್, ಸುಶೀಲಮ್ಮ, ಪುಟ್ಟಮ್ಮ, ಕಮಲಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
