SUDDILIVE || SHIVAMOGGA
ತುಂಗಾ ಜಲಾಶಯದಲ್ಲಿ 2.50 ಲಕ್ಷ ಬಲಿತ ಮೀನು ಮರಿಗಳ ಬಿತ್ತನೆ-Stocking of 2.50 lakh mature fish fingerlings in Tunga Reservoir
ಶಿವಮೊಗ್ಗ: ತುಂಗಾ ಜಲಾಶಯವನ್ನು ಅವಲಂಬಿಸಿ ಮೀನುಗಾರಿಕೆ ವೃತ್ತಿಯಲ್ಲಿ ಜೀವನ ನಡೆಸುತ್ತಿರುವ ಮೀನುಗಾರರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ಶ್ರೀ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ವತಿಯಿಂದ ತುಂಗಾ ಜಲಾಶಯದಲ್ಲಿ 2.50 ಲಕ್ಷ ಬಲಿತ ಮೀನು ಮರಿಗಳನ್ನು ಬಿತ್ತನೆ ಮಾಡಲಾಯಿತು.
ಗಾಜನೂರು ಅಗ್ರಹಾರ, ಶಿವಮೊಗ್ಗ ತಾಲ್ಲೂಕಿನ ಶ್ರೀ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ವತಿಯಿಂದ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ. ತುಂಗಾ ಜಲಾಶಯದ ಅಂಚಿನಲ್ಲಿರುವ 0.20 ಹೆಕ್ಟೇರ್ ವಿಸ್ತೀರ್ಣದ ಮೀನು ಮರಿ ಪಾಲನಾ ಕೊಳದಲ್ಲಿ 10 ಲಕ್ಷ ಕಾಟ್ಲಾ ಹಾಗೂ ರೋಹು ಜಾತಿಯ ಸ್ಪಾನ್ ಮರಿಗಳನ್ನು ಪಾಲನೆ ಮಾಡಲಾಗಿತ್ತು.
ಪಾಲನಾ ಅವಧಿಯ ನಂತರ ಸುಮಾರು 80ರಿಂದ 100 ಮಿ.ಮೀ. ಗಾತ್ರಕ್ಕೆ ಬೆಳೆದ 2.50 ಲಕ್ಷ ಬಲಿತ ಮೀನು ಮರಿಗಳನ್ನು ಆಗಸ್ಟ್ 24ರಂದು ತುಂಗಾ ಜಲಾಶಯದ ಹುಲಿಹಳ್ಳ ಕ್ರಾಸ್ ಪ್ರದೇಶದಲ್ಲಿ ಜಲಾಶಯಕ್ಕೆ ಬಿತ್ತನೆ ಮಾಡಲಾಯಿತು. ಮೀನು ಸಂಪತ್ತಿನ ವೃದ್ಧಿ ಹಾಗೂ ಜಲಾಶಯವನ್ನು ಅವಲಂಬಿಸಿರುವ ಮೀನುಗಾರರಿಗೆ ನಿರಂತರವಾಗಿ ಮೀನುಗಾರಿಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬಿತ್ತನೆ ಕಾರ್ಯ ನಡೆಸಲಾಗಿದೆ.
ಮೀನು ಮರಿಗಳ ಪಾಲನೆ ಮತ್ತು ಬಿತ್ತನೆ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಶಿವಮೊಗ್ಗ ವಲಯದ ಜಂಟಿ ನಿರ್ದೇಶಕರಾದ ಷಡಕ್ಷರಿ ಜಿ.ಎಸ್., ಶಿವಮೊಗ್ಗ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರಾದ ಶಿವಕುಮಾರ್ ಜಿ.ಎಂ., ಶಿವಮೊಗ್ಗ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಕೆ.ಎಸ್., ಗಾಜನೂರು ಮೀನುಮರಿ ಪಾಲನಾ ಕೇಂದ್ರದ ಡಾ. ವಿನಯ್ ಕುಮಾರ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಶ್ರೀ ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾದ ಅರಸಯ್ಯ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳಾದ ಮಹೇಶ್ ಎಂ., ಆಕಾಶ್, ಶಿವಕುಮಾರ್, ಗಂಗಾಧರ, ಪ್ರಕಾಶ್ ಹಾಗೂ ಶೇಷಾಚಾರಿ ಅವರು ಮೀನುಮರಿಗಳ ಪಾಲನೆ ಮತ್ತು ಬಿತ್ತನೆ ಕಾರ್ಯವನ್ನು ಶ್ರಮವಹಿಸಿ ಯಶಸ್ವಿಯಾಗಿ ಕಾರ್ಯಗತಗೊಳಿಸಿದರು.
ತುಂಗಾ ಜಲಾಶಯದಲ್ಲಿ ಕಾಟ್ಲಾ ಮತ್ತು ರೋಹು ಸೇರಿದಂತೆ ವಿವಿಧ ಜಾತಿಯ ಮೀನುಗಳ ಸಂಖ್ಯೆ ಹೆಚ್ಚಿಸುವ ಮೂಲಕ ಸ್ಥಳೀಯ ಮೀನುಗಾರರಿಗೆ ಹೆಚ್ಚಿನ ಮೀನುಗಾರಿಕೆ ಸಂಪನ್ಮೂಲ ಲಭ್ಯವಾಗುವ ನಿರೀಕ್ಷೆ ಇದೆ. ಇದರಿಂದ ಜಲಾಶಯವನ್ನು ಅವಲಂಬಿಸಿರುವ ಮೀನುಗಾರ ಕುಟುಂಬಗಳ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಂಘದ ವತಿಯಿಂದ ತಿಳಿಸಲಾಗಿದೆ.
ಮೀನು ಸಂಪತ್ತಿನ ಸಂರಕ್ಷಣೆ, ವೈಜ್ಞಾನಿಕ ಮೀನುಮರಿ ಪಾಲನೆ ಹಾಗೂ ನಿಯಮಾನುಸಾರ ಮೀನುಮರಿ ಬಿತ್ತನೆಗೆ ಮೀನುಗಾರಿಕೆ ಇಲಾಖೆ ನೀಡುತ್ತಿರುವ ಮಾರ್ಗದರ್ಶನದಿಂದ ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿರುವ ಕುಟುಂಬಗಳಿಗೆ ಮತ್ತಷ್ಟು ನೆರವು ದೊರೆಯುವಂತಾಗಿದೆ.

