ಅತಿಥಿ ಉಪನ್ಯಾಸಕನ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ; ಸಿಡಿಸಿ ಉಪಾಧ್ಯಕ್ಷರ ವಿರುದ್ಧ ಆಕ್ರೋಶ- Guest lecturer assaulted by students; outrage against CDC Vice-Chairman.

 SUDDILIVE || SHIVAMOGGA

ಅತಿಥಿ ಉಪನ್ಯಾಸಕನ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ; ಸಿಡಿಸಿ ಉಪಾಧ್ಯಕ್ಷರ ವಿರುದ್ಧ ಆಕ್ರೋಶ-  Guest lecturer assaulted by students; outrage against CDC Vice-Chairman. 
Kallihal, lecturer





ಶಿವಮೊಗ್ಗ: ಸಮೀಪದ ಕಲ್ಲಿಹಾಳ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರೊಬ್ಬರ ಮೇಲೆ ವಿದ್ಯಾರ್ಥಿಗಳ ಗುಂಪು ಹಾಗೂ ಕಾಲೇಜು ಸಮಿತಿ ಉಪಾಧ್ಯಕ್ಷ ಸೇರಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಹಲ್ಲೆಯಲ್ಲಿ ಕಲ್ಲಿಹಾಳ್ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕ ಸಂತೋಷ್ ಗಾಯಗೊಂಡಿದ್ದು, ಅವರ ಮುಖ ಹಾಗೂ ಭುಜದ ಭಾಗಕ್ಕೆ ಗಾಯಗಳಾಗಿವೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವಿದ್ಯಾರ್ಥಿನಿಯರನ್ನು ಛೇಡಿಸುತ್ತಿದ್ದ ಆರೋಪ

ಕಲ್ಲಿಹಾಳ್‌ನಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಒಂದೇ ಆವರಣದಲ್ಲಿವೆ. ಪಿಯು ಕಾಲೇಜಿನ ಕಲಾ ವಿಭಾಗದ ಕೆಲ ವಿದ್ಯಾರ್ಥಿಗಳು ಪ್ರೌಢಶಾಲೆಯ ವಿದ್ಯಾರ್ಥಿನಿಯರನ್ನು ಛೇಡಿಸುತ್ತಿದ್ದಾರೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಪ್ರೌಢಶಾಲೆಯ ಕೆಲ ಶಿಕ್ಷಕರು ಕಾಲೇಜು ವಿದ್ಯಾರ್ಥಿಗಳ ದುರ್ವರ್ತನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ಕಾಲೇಜಿನ ಉಪನ್ಯಾಸಕರಿಗೆ ತೋರಿಸಿದ್ದರು. ಬಳಿಕ ಕಾಲೇಜು ಆವರಣದಲ್ಲಿ ಅಸಭ್ಯವಾಗಿ ವರ್ತಿಸಿದ್ದರೆನ್ನಲಾದ ಕೆಲ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಬುದ್ಧಿವಾದ ಹೇಳಿದ್ದರು.

ಬುದ್ಧಿವಾದ ಹೇಳಿದ್ದಕ್ಕೆ ಶಿಕ್ಷಕನ ಮೇಲೆ ಹಲ್ಲೆ?

ಬುಧವಾರ ಅತಿಥಿ ಉಪನ್ಯಾಸಕ ಸಂತೋಷ್ ಕೂಡ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಈ ವೇಳೆ ಅವರ ಮಾತಿಗೆ ಅಸಡ್ಡೆ ತೋರಿದ ವಿದ್ಯಾರ್ಥಿಯೊಬ್ಬರು ಉಪನ್ಯಾಸಕರ ತಲೆಗೆ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಕೆಲವು ವಿದ್ಯಾರ್ಥಿಗಳು ಕಾಲೇಜು ಸಮಿತಿ ಉಪಾಧ್ಯಕ್ಷ ಪುರುಷೋತ್ತಮ್ ಅವರ ಬಳಿ ತೆರಳಿ ಅತಿಥಿ ಉಪನ್ಯಾಸಕ ಸಂತೋಷ್ ತಮ್ಮೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗಳ ಆರೋಪವನ್ನು ಆಧರಿಸಿ, ಯಾವುದೇ ಪೂರ್ವಾಪರ ವಿಚಾರಣೆ ನಡೆಸದೆ ಸಂತೋಷ್ ಅವರನ್ನು ಕಾಲೇಜಿಗೆ ಕರೆಸಿಕೊಂಡು ಉಪಾಧ್ಯಕ್ಷರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಉಪಾಧ್ಯಕ್ಷ ಪುರುಷೋತ್ತಮ್ ಅವರೊಂದಿಗೆ ಸೇರಿಕೊಂಡು ವಿದ್ಯಾರ್ಥಿಗಳ ಗುಂಪು ಸಂತೋಷ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ.

ಮುಖ, ಭುಜಕ್ಕೆ ಗಾಯ

ಹಲ್ಲೆಯಿಂದ ಸಂತೋಷ್ ಅವರ ಮುಖ ಹಾಗೂ ಭುಜದ ಭಾಗದಲ್ಲಿ ಗಾಯಗಳಾಗಿವೆ. ಘಟನೆ ಬಳಿಕ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿದ್ಯಾರ್ಥಿಗಳ ಆರೋಪವನ್ನು ಪರಿಶೀಲಿಸದೆ ಅತಿಥಿ ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ವರ್ತನೆ ಕುರಿತು ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ವಿದ್ಯಾರ್ಥಿಗಳ ಮಾತನ್ನೇ ನಂಬಿ ಉಪನ್ಯಾಸಕರ ಮೇಲೆ ಹಲ್ಲೆ ನಡೆದಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ

ಘಟನೆಗೆ ಸಂಬಂಧಿಸಿದಂತೆ ಗುರುವಾರ ಹೊಳೆಹೊನ್ನೂರು ಪೊಲೀಸರ ಸಮ್ಮುಖದಲ್ಲಿ ಕಾಲೇಜಿನಲ್ಲಿ ರಾಜಿ ಸಂಧಾನ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಸಮಿತಿ ಉಪಾಧ್ಯಕ್ಷ ಪುರುಷೋತ್ತಮ್ ಅವರು ಅತಿಥಿ ಉಪನ್ಯಾಸಕ ಸಂತೋಷ್ ಅವರ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಘಟನೆಯಿಂದ ಕಾಲೇಜು ಸಮಿತಿಯ ಕಾರ್ಯವೈಖರಿ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಇಂತಹ ಘಟನೆಗಳು ಅವರ ನಡುವೆ ವೈರತ್ವ ಹೆಚ್ಚಿಸುವ ಸಾಧ್ಯತೆ ಇದ್ದು, ಕಾಲೇಜು ಆಡಳಿತವು ಸಮಸ್ಯೆಯನ್ನು ಸೂಕ್ಷ್ಮವಾಗಿ ನಿಭಾಯಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಜೀನಾಮೆಗೆ ಗ್ರಾಮಸ್ಥರ ಆಗ್ರಹ

ಸಿಡಿಸಿ ಉಪಾಧ್ಯಕ್ಷ ಪುರುಷೋತ್ತಮ್ ಅವರು ವಿದ್ಯಾರ್ಥಿಗಳ ಮಾತನ್ನು ಮಾತ್ರ ಆಧರಿಸಿ ಯಾವುದೇ ಪೂರ್ವಾಪರ ವಿಚಾರಿಸದೆ ಉಪನ್ಯಾಸಕರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಭಾಗಿಯಾಗಿರುವುದು ಗಂಭೀರ ವಿಚಾರ ಎಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ನೈತಿಕ ಹೊಣೆ ಹೊತ್ತು ಪುರುಷೋತ್ತಮ್ ಅವರು ತಕ್ಷಣ ಸಿಡಿಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಶಿಸ್ತು, ಶಿಕ್ಷಕರ ಸುರಕ್ಷತೆ ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆ ವಿಚಾರದಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

Guest lecturer assaulted by students; outrage against CDC Vice-Chairman. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close