ಬಿ.ಎಚ್. ರಸ್ತೆಯಲ್ಲಿ ಸಾರಿಗೆ ಬಸ್ ಡಿಕ್ಕಿ: ಬಸ್ಸಿನಡಿಯಲ್ಲಿ ಸಿಲುಕಿ ವೃದ್ಧನಿಗೆ ಗಂಭೀರ ಗಾಯ-Transport bus collision on B.H. Road: Elderly man critically injured after getting trapped under the bus

 SUDDILIVE || SHIVAMOGGA

ಬಿ.ಎಚ್. ರಸ್ತೆಯಲ್ಲಿ ಸಾರಿಗೆ ಬಸ್ ಡಿಕ್ಕಿ: ಬಸ್ಸಿನಡಿಯಲ್ಲಿ ಸಿಲುಕಿ ವೃದ್ಧನಿಗೆ ಗಂಭೀರ ಗಾಯ-Transport bus collision on B.H. Road: Elderly man critically injured after getting trapped under the bus
Bh, road

ಶಿವಮೊಗ್ಗ: ನಗರದ ಹೃದಯಭಾಗದಲ್ಲಿರುವ ಬಿ.ಎಚ್. ರಸ್ತೆಯ ಕೃಷ್ಣಾ ಕೆಫೆ ಸಮೀಪ ಶುಕ್ರವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರಿಗೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಬಸ್ಸಿನ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೃಷ್ಣಾ ಕೆಫೆ ಸಮೀಪದ ಬಿ.ಎಚ್. ರಸ್ತೆಯಲ್ಲಿ ವೃದ್ಧರು ರಸ್ತೆ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ವೇಗವಾಗಿ ಬಂದ ಸರ್ಕಾರಿ ಸಾರಿಗೆ ಬಸ್ ಏಕಾಏಕಿ ವೃದ್ಧರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವೃದ್ಧರು ರಸ್ತೆಗೆ ಬಿದ್ದಿದ್ದು, ಬಸ್‌ನ ಚಕ್ರಗಳ ಸಮೀಪ ಅಡಿಭಾಗದಲ್ಲಿ ಸಿಲುಕಿಕೊಂಡಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ವೃದ್ಧರು ಬಸ್ಸಿನ ಅಡಿಯಲ್ಲಿ ಸಿಲುಕಿರುವುದನ್ನು ಗಮನಿಸಿದ ಸ್ಥಳೀಯರು, ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಬಳಿಕ ಸಾರ್ವಜನಿಕರು ಹರಸಾಹಸಪಟ್ಟು ಬಸ್ಸಿನ ಅಡಿಯಲ್ಲಿ ಸಿಲುಕಿದ್ದ ವೃದ್ಧರನ್ನು ಹೊರತೆಗೆದಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ವೃದ್ಧರನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಗಾಯಾಳುವಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ವೃದ್ಧರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಗಾಯಾಳುವಿನ ಗುರುತು ಹಾಗೂ ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಸಾರಿಗೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಘಾತದ ಸ್ಥಳ ಹಾಗೂ ಪರಿಸ್ಥಿತಿಗಳ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ನಗರದ ಪ್ರಮುಖ ರಸ್ತೆಯಾಗಿರುವ ಬಿ.ಎಚ್. ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಾದಚಾರಿಗಳ ಸುರಕ್ಷತೆ ಹಾಗೂ ವಾಹನಗಳ ವೇಗ ನಿಯಂತ್ರಣಕ್ಕೆ ಪೊಲೀಸರು ಹೆಚ್ಚಿನ ಗಮನಹರಿಸಬೇಕೆಂಬ ಆಗ್ರಹವೂ ಸಾರ್ವಜನಿಕರಿಂದ ಕೇಳಿಬಂದಿದೆ.

Transport bus collision on B.H. Road: Elderly man critically injured after getting trapped under the bus

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close