ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿಕೆ ಕೊಟ್ರಾ ಮಾಜಿ ಶಾಸಕರು?Did the former MLA make an equivocal statement?

SUDDILIVE || SHIVAMOGGA

ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿಕೆ ಕೊಟ್ರಾ ಮಾಜಿ ಶಾಸಕರು?Did the former MLA make an equivocal statement?   

Jds, ashoknayak

ಶಿವಮೊಗ್ಗ: ಬಿಜೆಪಿಯಲ್ಲೇ ಮುಂದುವರಿಯುತ್ತೇನೆ ಎಂದು ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಸ್ಪಷ್ಟಪಡಿಸಿದ್ದಾರೆ. ಆದರೆ ಜೆಡಿಎಸ್ ಜತೆಗಿನ ಮೈತ್ರಿ ಮುಂದುವರಿದರೆ ತಮ್ಮ ರಾಜಕೀಯ ಭವಿಷ್ಯ ಹೇಗಿರಲಿದೆ ಎಂಬ ಪ್ರಶ್ನೆಗೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ಅವರು ಹೇಳಿದ್ದಾರೆ.

ಸಂಸದರ ಹುಟ್ಟುಹಬ್ಬದ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕಾಂಗ್ರೆಸ್‌ನಿಂದ ಸಂಪರ್ಕವಿದೆಯೇ ಹಾಗೂ ಬಿಜೆಪಿ ತೊರೆಯುವ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದಾಗ, ಕ್ಷೇತ್ರದಲ್ಲಿ ಇಂತಹ ಚರ್ಚೆಗಳು ಸಹಜ. ಕಾರ್ಯಕರ್ತರು ಹಾಗೂ ಗ್ರಾಮೀಣ ಭಾಗದಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತವೆ. ಆದರೆ ಅಂತಿಮವಾಗಿ ಪಕ್ಷದ ನಾಯಕತ್ವ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದೇ ಮುಖ್ಯ ಎಂದರು.

“ನಾನು ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿಯಲ್ಲೇ ಇರುತ್ತೇನೆ” ಎಂದು ಹೇಳಿದ ಅಶೋಕ್ ನಾಯ್ಕ್, ಮುಂದಿನ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸುವ ಕುರಿತು ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಸೇರಿ ತೀರ್ಮಾನ ಕೈಗೊಳ್ಳಬೇಕು. ಪಕ್ಷದ ತೀರ್ಮಾನಕ್ಕೆ ತಾವು ಬದ್ಧರಾಗಿರಬೇಕು ಎಂದರು.

ಅಡಿಕೆ ಉತ್ಪನ್ನಗಳ ನಿಷೇಧಕ್ಕೆ ತೀವ್ರ ವಿರೋಧ

ಇದೇ ವೇಳೆ ರಾಜ್ಯ ಸರ್ಕಾರ ಅಡಿಕೆ ಉತ್ಪನ್ನಗಳ ಮೇಲೆ ನಿಷೇಧ ಹೇರಿರುವುದಕ್ಕೆ ಅಶೋಕ್ ನಾಯ್ಕ್ ತೀವ್ರ ವಿರೋಧ ವ್ಯಕ್ತಪಡಿಸಿದರು. ತಂಬಾಕು ಉತ್ಪನ್ನಗಳ ನಿಷೇಧಕ್ಕೆ ತಮ್ಮ ವಿರೋಧವಿಲ್ಲ. ಆದರೆ ಅಡಿಕೆ ಉತ್ಪನ್ನಗಳನ್ನೂ ನಿಷೇಧಿಸುವ ನಿರ್ಧಾರದಿಂದ ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ಹೇಳಿದರು.

“ರಾಜ್ಯ ಸರ್ಕಾರದ ಈ ನಿರ್ಧಾರ ಅಡಿಕೆ ಬೆಳೆಗಾರರಿಗೆ ಮರಣ ಶಾಸನ ಬರೆದಂತಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಡಿಕೆ ಉತ್ಪನ್ನಗಳ ಮೇಲಿನ ನಿಷೇಧ ಆದೇಶವನ್ನು 24 ಗಂಟೆಯೊಳಗೆ ಹಿಂಪಡೆಯಬೇಕು. ಇಲ್ಲವಾದರೆ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕಾಂಗ್ರೆಸ್‌ನಲ್ಲಿಯೂ ಹಲವು ಶಾಸಕರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಬಿರುಗಾಳಿಗೆ 11 ಲಕ್ಷ ಅಡಿಕೆ ಮರಗಳ ಹಾನಿ

ಇತ್ತೀಚೆಗೆ ಬೀಸಿದ ಗಾಳಿ-ಮಳೆಯಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸುಮಾರು 11 ಲಕ್ಷ ಅಡಿಕೆ ಮರಗಳು ಬಿದ್ದಿವೆ ಎಂದು ಅಶೋಕ್ ನಾಯ್ಕ್ ತಿಳಿಸಿದರು. ಒಂದು ಅಡಿಕೆ ಮರವನ್ನು ಬೆಳೆಸಿ ಫಸಲು ಪಡೆಯುವ ಹಂತಕ್ಕೆ ತರಲು ವರ್ಷಗಳ ಕಾಲ ಹಾಗೂ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಆದರೆ ಸರ್ಕಾರ ಪರಿಹಾರವಾಗಿ ಪ್ರತಿ ಮರಕ್ಕೆ ಕೇವಲ ₹17 ನಿಗದಿಪಡಿಸಿರುವುದು ಅವೈಜ್ಞಾನಿಕ ಎಂದು ಟೀಕಿಸಿದರು.

ಬಿದ್ದಿರುವ ಅಡಿಕೆ ಮರಗಳನ್ನು ಕತ್ತರಿಸಲು ಪ್ರತಿ ಮರಕ್ಕೆ ಸುಮಾರು ₹300 ವೆಚ್ಚವಾಗುತ್ತಿದೆ. ಇಂತಹ ಸಂದರ್ಭದಲ್ಲಿ ₹17 ಪರಿಹಾರ ನೀಡುವುದು ರೈತರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದರು.

₹150 ಕೋಟಿ ಪರಿಹಾರಕ್ಕೆ ಬೇಡಿಕೆ

ಗಾಳಿ-ಮಳೆಯಿಂದ ಹಾನಿಗೊಳಗಾದ ಅಡಿಕೆ ಬೆಳೆಗಾರರು ಹಾಗೂ ಮನೆ ಕಳೆದುಕೊಂಡವರಿಗೆ ಒಟ್ಟು ₹150 ಕೋಟಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅಶೋಕ್ ನಾಯ್ಕ್ ತಿಳಿಸಿದರು.

ಇದರಲ್ಲಿ ಅಡಿಕೆ ಬೆಳೆಗಾರರಿಗೆ ₹130 ಕೋಟಿ ಹಾಗೂ ಹಾನಿಗೊಳಗಾದ 457 ಮನೆಗಳಿಗೆ ₹20 ಕೋಟಿ ನೀಡಬೇಕು. ಮನೆ ಕಳೆದುಕೊಂಡವರಿಗೆ ಕನಿಷ್ಠ ₹5 ಲಕ್ಷ ಪರಿಹಾರ ಅಥವಾ ಹೊಸ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೂ ಮನವಿ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರದಿಂದ ಸಾಧ್ಯವಾದಷ್ಟು ಪರಿಹಾರ ಒದಗಿಸಿ, ಉಳಿದ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಕೇಂದ್ರದಿಂದಲೂ ಪರಿಹಾರ ತರಲು ಸಂಸದರು ಸೇರಿದಂತೆ ಪಕ್ಷದ ನಾಯಕರು ಪ್ರಯತ್ನಿಸಲಿದ್ದಾರೆ ಎಂದು ಅಶೋಕ್ ನಾಯ್ಕ್ ಹೇಳಿದರು.

ಬಿಜೆಪಿಯಲ್ಲೇ ಮುಂದುವರಿಯುವ ಬಗ್ಗೆ ಸ್ಪಷ್ಟನೆ ನೀಡಿದರೂ, ಜೆಡಿಎಸ್ ಮೈತ್ರಿ ಹಾಗೂ ಮುಂದಿನ ಚುನಾವಣೆಯ ರಾಜಕೀಯ ಸಮೀಕರಣಗಳ ಕುರಿತು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದಿರುವ ಅಶೋಕ್ ನಾಯ್ಕ್ ಅವರ ಹೇಳಿಕೆ ಕುತೂಹಲ ಮೂಡಿಸಿದೆ.

Did the former MLA make an equivocal statement? 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close