ಕೋಟೆ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ಹೊಸ ಸಮಿತಿಯ ಸಂಕಲ್ಪ; ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ-New committee resolution for Kote Anjaneya temple development; Special Puja in the month of Shravan

SUDDILIVE || SHIVAMOGGA

ಕೋಟೆ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ಹೊಸ ಸಮಿತಿಯ ಸಂಕಲ್ಪ; ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ-New committee resolution for Kote Anjaneya temple development; Special Puja in the month of Shravan   
Kote, temple



ಶಿವಮೊಗ್ಗ: ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ದೇವಸ್ಥಾನದ ಆದಾಯ ಹೆಚ್ಚಿಸುವುದರೊಂದಿಗೆ ‘ಬಿ’ ಗ್ರೇಡ್‌ನಿಂದ ‘ಎ’ ಗ್ರೇಡ್‌ಗೆ ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ. ದೇವೇಂದ್ರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಕೋಟೆ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನವು ನಗರದ ಪ್ರಮುಖ ಧಾರ್ಮಿಕ ಮತ್ತು ಭಕ್ತಿಕೇಂದ್ರಗಳಲ್ಲಿ ಒಂದಾಗಿದೆ. ಸ್ಥಳೀಯರು ಹಾಗೂ ದೂರದ ಊರುಗಳಿಂದ ಆಗಮಿಸುವ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸ್ವಾಮಿಯ ದರ್ಶನ ಪಡೆದು ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುವ ನಂಬಿಕೆಯನ್ನು ಹೊಂದಿದ್ದಾರೆ ಎಂದರು.

ದಸರಾ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ನವರಾತ್ರಿ ಉತ್ಸವದ ಕೊನೆಯ ದಿನ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಸಂಪ್ರದಾಯ ಸೇರಿದಂತೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.

ದೇವಸ್ಥಾನವನ್ನು ‘ಎ’ ಗ್ರೇಡ್‌ಗೆ ಕೊಂಡೊಯ್ಯುವ ಗುರಿ

ದೇವಸ್ಥಾನ ಪ್ರಸ್ತುತ ‘ಬಿ’ ಗ್ರೇಡ್‌ನಲ್ಲಿರುವುದು ಬೇಸರದ ಸಂಗತಿಯಾಗಿದೆ. ದೇವಸ್ಥಾನದ ಆದಾಯ ಹೆಚ್ಚಿಸಿ, ಆಡಳಿತ ವ್ಯವಸ್ಥೆಯನ್ನು ಸುಧಾರಿಸಿ ‘ಎ’ ಗ್ರೇಡ್‌ಗೆ ಕೊಂಡೊಯ್ಯುವುದು ಹೊಸ ಸಮಿತಿಯ ಪ್ರಮುಖ ಆದ್ಯತೆಯಾಗಿದೆ ಎಂದು ದೇವೇಂದ್ರಪ್ಪ ಹೇಳಿದರು.

ದೇವಸ್ಥಾನದಲ್ಲಿ ನಡೆಯುವ ವಿವಿಧ ಪೂಜೆ, ಸೇವೆ, ಅರ್ಚನೆ, ಅಲಂಕಾರ, ವಾಹನ ಪೂಜೆ, ಅನ್ನದಾನ ಸೇರಿದಂತೆ ವಿವಿಧ ಸೇವೆಗಳ ದರಪಟ್ಟಿಯನ್ನು ಸಮರ್ಪಕವಾಗಿ ಪ್ರದರ್ಶಿಸಬೇಕು. ಭಕ್ತರು ಸೇವೆ ಸಲ್ಲಿಸಿದಾಗ ಅವರಿಗೆ ಅಧಿಕೃತ ರಸೀದಿ ನೀಡುವ ವ್ಯವಸ್ಥೆ ಇರಬೇಕು. ಈ ವ್ಯವಸ್ಥೆಗಳನ್ನು ಸರಿಪಡಿಸುವ ಮೂಲಕ ದೇವಸ್ಥಾನದ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ದೇವಸ್ಥಾನದ ಆವರಣದಲ್ಲಿರುವ ಮಳಿಗೆಗಳ ಬಾಡಿಗೆ ವಿಚಾರದಲ್ಲಿಯೂ ಸಾಕಷ್ಟು ಅಸಮರ್ಪಕತೆಗಳಿವೆ ಎಂದು ಆರೋಪಿಸಿದ ಅವರು, ಪ್ರಸ್ತುತ ಕೆಲವು ಮಳಿಗೆಗಳಿಂದ ಅತ್ಯಲ್ಪ ಬಾಡಿಗೆ ಬರುತ್ತಿದ್ದು, ಅದೇ ಪ್ರದೇಶದಲ್ಲಿರುವ ಇತರ ಕಟ್ಟಡಗಳು ಹೆಚ್ಚಿನ ಬಾಡಿಗೆ ನೀಡುತ್ತಿರುವ ಉದಾಹರಣೆಗಳಿವೆ. ಹೀಗಾಗಿ ಮಳಿಗೆಗಳ ಮೌಲ್ಯಮಾಪನವನ್ನು ಪಿಡಬ್ಲ್ಯುಡಿ ಮೂಲಕ ಮಾಡಿಸಿ, ನಿಯಮಾನುಸಾರ ಬಾಡಿಗೆ ನಿಗದಿ ಹಾಗೂ ಹರಾಜು ಪ್ರಕ್ರಿಯೆ ಕೈಗೊಳ್ಳುವ ಮೂಲಕ ದೇವಸ್ಥಾನದ ಆದಾಯ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದರು.

ದೇವಸ್ಥಾನದ ವ್ಯಾಪ್ತಿಯಲ್ಲಿ ಒಟ್ಟು ಸುಮಾರು 10 ಮಳಿಗೆಗಳಿದ್ದು, ಅವುಗಳ ಬಾಡಿಗೆ, ನೋಟಿಸ್ ಹಾಗೂ ಇತರ ದಾಖಲೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ ಎಂದು ಹೇಳಿದರು.

ಮಂತ್ರಾಲಯ ಮಾದರಿಯ ಮುಂಭಾಗದ ವಿನ್ಯಾಸ

ದೇವಸ್ಥಾನದ ಒಳಭಾಗಕ್ಕೆ ಪ್ರವೇಶಿಸಿದ ಬಳಿಕ ಭಕ್ತರಿಗೆ ದೊರೆಯುವ ಆಧ್ಯಾತ್ಮಿಕ ಅನುಭವಕ್ಕೆ ತಕ್ಕಂತೆ ಹೊರಭಾಗವನ್ನೂ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ದೇವಸ್ಥಾನದ ಮುಂಭಾಗವನ್ನು ಮಂತ್ರಾಲಯದ ಮಾದರಿಯಲ್ಲಿ ಆಕರ್ಷಕವಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಹೊಂದಲಾಗಿದೆ ಎಂದು ದೇವೇಂದ್ರಪ್ಪ ತಿಳಿಸಿದರು.

ದೂರದಿಂದಲೇ ದೇವಸ್ಥಾನವನ್ನು ನೋಡಿದಾಗ ಭಕ್ತಿಭಾವ ಮೂಡುವ ರೀತಿಯಲ್ಲಿ ಮುಂಭಾಗದ ವಿನ್ಯಾಸ ರೂಪಿಸುವುದು, ದೇವಸ್ಥಾನದ ಪಾವಿತ್ರ್ಯ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಉಳಿಸಿಕೊಂಡು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಸಮಿತಿಯ ಉದ್ದೇಶವಾಗಿದೆ ಎಂದರು.

ದಾನಿಗಳಿಗೆ ಗೌರವ, ಶಿಷ್ಟಾಚಾರ ಕಚೇರಿ

ದೇವಸ್ಥಾನಕ್ಕೆ ದೇಣಿಗೆ ನೀಡುವವರು ಹಾಗೂ ವಿವಿಧ ಸೇವೆಗಳನ್ನು ವಹಿಸಿಕೊಳ್ಳುವ ಭಕ್ತರನ್ನು ಗೌರವಿಸುವ ವ್ಯವಸ್ಥೆ ರೂಪಿಸಲಾಗುವುದು. ಇದಕ್ಕಾಗಿ ಶಿಷ್ಟಾಚಾರ ಕಚೇರಿ ಆರಂಭಿಸಿ, ದಾನಿಗಳು ಮತ್ತು ಸೇವಾಕರ್ತರಿಗೆ ದೇವಸ್ಥಾನದ ವತಿಯಿಂದ ಶಾಲು ಹಾಗೂ ಪ್ರಸಾದ ನೀಡಿ ಗೌರವಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದೇವೇಂದ್ರಪ್ಪ ಹೇಳಿದರು.

ಇದರಿಂದ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ದಾನಿಗಳು ಹಾಗೂ ಸೇವಾಕರ್ತರು ಕೈಜೋಡಿಸಲು ಅವಕಾಶವಾಗಲಿದೆ ಎಂದರು.

ಲೆಕ್ಕಪತ್ರ, ಆಸ್ತಿ ಮತ್ತು ಆದಾಯದ ಸಂಪೂರ್ಣ ಮಾಹಿತಿ ಪಡೆಯಲು ಕ್ರಮ

ದೇವಸ್ಥಾನದ ವಾರ್ಷಿಕ ಆದಾಯ, ಖರ್ಚು, ಬ್ಯಾಂಕ್ ಖಾತೆಯಲ್ಲಿರುವ ಹಣ, ಕಾಣಿಕೆ, ಚಿನ್ನ, ಬೆಳ್ಳಿ ಸೇರಿದಂತೆ ದೇವಸ್ಥಾನದ ಆಸ್ತಿಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ದೇವಸ್ಥಾನದ ವಿಸ್ತೀರ್ಣ, ಮಳಿಗೆಗಳ ಸಂಖ್ಯೆ, ಬಾಡಿಗೆ ಹಾಗೂ ನೀಡಿರುವ ನೋಟಿಸ್‌ಗಳ ಕುರಿತೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ದೇವೇಂದ್ರಪ್ಪ ತಿಳಿಸಿದರು.

ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಲೆಕ್ಕಪತ್ರಗಳ ಕುರಿತು ಸ್ಪಷ್ಟ ಮಾಹಿತಿ ಪಡೆಯಲಾಗುವುದು. ಯಾವುದೇ ಲೋಪ ಕಂಡುಬಂದರೆ ನಿಯಮಾನುಸಾರ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.

ಸಿಸಿ ಕ್ಯಾಮೆರಾ, ವಸ್ತ್ರ ಸಂಹಿತೆ ಸೇರಿದಂತೆ ಹಲವು ಕ್ರಮ

ದೇವಸ್ಥಾನದ ಭದ್ರತೆಗಾಗಿ ಹಾಳಾಗಿರುವ ಸಿಸಿ ಕ್ಯಾಮೆರಾಗಳನ್ನು ದುರಸ್ತಿ ಮಾಡುವುದರೊಂದಿಗೆ ಅಗತ್ಯವಿರುವ ಪ್ರಮುಖ ಸ್ಥಳಗಳಲ್ಲಿ ಹೊಸ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅವರು ಹೇಳಿದರು.

ದೇವಸ್ಥಾನದ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಭಕ್ತರು ಪಾಲಿಸಬೇಕಾದ ವಸ್ತ್ರ ಸಂಹಿತೆ ರೂಪಿಸುವುದು, ದೇವಸ್ಥಾನದ ಒಳಗೆ ಪಾದರಕ್ಷೆಗಳನ್ನು ತೆಗೆದುಕೊಂಡು ಹೋಗದಂತೆ ವ್ಯವಸ್ಥೆ ಮಾಡುವುದು ಸೇರಿದಂತೆ ಹಲವು ಶಿಸ್ತು ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದರು.

ಮುಜರಾಯಿ ದೇವಸ್ಥಾನದ ಹಣದ ಕುರಿತು ಅಪಪ್ರಚಾರಕ್ಕೆ ಸ್ಪಷ್ಟನೆ

ಮುಜರಾಯಿ ಇಲಾಖೆಯ ದೇವಸ್ಥಾನಗಳ ಹುಂಡಿ ಹಣವನ್ನು ಅನ್ಯ ಧರ್ಮಗಳಿಗೆ ಬಳಸಲಾಗುತ್ತದೆ ಎಂಬ ರೀತಿಯ ಅಪಪ್ರಚಾರ ನಡೆಯುತ್ತಿದೆ. ಇದು ಸತ್ಯವಲ್ಲ ಎಂದು ದೇವೇಂದ್ರಪ್ಪ ಹೇಳಿದರು.

ದೇವಸ್ಥಾನಕ್ಕೆ ಬರುವ ಹಣ ದೇವಸ್ಥಾನದ ಖಾತೆಯಲ್ಲಿಯೇ ಉಳಿಯುತ್ತದೆ. ಯಾವುದೇ ಅನ್ಯ ಧರ್ಮಕ್ಕೆ ದೇವಸ್ಥಾನದ ಹಣವನ್ನು ನೀಡಲಾಗುವುದಿಲ್ಲ. ಈ ಬಗ್ಗೆ ಭಕ್ತರು ಹಾಗೂ ಸಾರ್ವಜನಿಕರು ವಾಸ್ತವಾಂಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ದೇವಸ್ಥಾನದ ಅರ್ಚಕರು ಹಾಗೂ ಪಾರುಪತ್ಯೆದಾರರಿಗೆ ವೇತನ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಸಂಬಂಧಪಟ್ಟ ಮುಜರಾಯಿ ಅಧಿಕಾರಿಗಳು ಹಾಗೂ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.

ಶ್ರಾವಣ ಮಾಸದಲ್ಲಿ ವಿಶೇಷ ಅಲಂಕಾರ

ಈ ಬಾರಿ ಶ್ರಾವಣ ಮಾಸದಲ್ಲಿ ನಾಲ್ಕು ಶ್ರಾವಣ ಶನಿವಾರಗಳು ಬರಲಿದ್ದು, ಪ್ರತಿ ಶನಿವಾರವೂ ಆಂಜನೇಯ ಸ್ವಾಮಿಗೆ ರಾಮಾಯಣದ ವಿವಿಧ ಪ್ರಸಂಗಗಳನ್ನು ಆಧರಿಸಿದ ವಿಶೇಷ ಅಲಂಕಾರಗಳನ್ನು ಮಾಡಲಾಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ರಾಮಪ್ರಸಾದ್ ವಿವರಿಸಿದರು.

ಮೊದಲ ಶ್ರಾವಣ ಶನಿವಾರ ಸುಗ್ರೀವ ಪಟ್ಟಾಭಿಷೇಕ ಅಲಂಕಾರ ನಡೆಯಲಿದೆ. ಎರಡನೇ ಶನಿವಾರ ಸಮುದ್ರ ಲಂಘನ, ಮೂರನೇ ಶನಿವಾರ ಸೀತಾ ಮುದ್ರಿಕಾ ಪ್ರದಾನ ಹಾಗೂ ನಾಲ್ಕನೇ ಶನಿವಾರ ಅಕ್ಷಯ ಕುಮಾರ ಸಂಹಾರ ಪ್ರಸಂಗವನ್ನು ಆಧರಿಸಿದ ವಿಶೇಷ ಅಲಂಕಾರ ನಡೆಯಲಿದೆ ಎಂದು ತಿಳಿಸಿದರು.

ಐದನೇ ಶ್ರಾವಣ ಶನಿವಾರ ಬಂದಲ್ಲಿ ಆಂಜನೇಯ ಸ್ವಾಮಿಗೆ ಪಂಚಮುಖಿ ಆಂಜನೇಯ ಅಲಂಕಾರ ಮಾಡಲಾಗುವುದು. ಮೂಲ ರಾಮದೇವರಿಗೆ ಶ್ರಾವಣದ ಕೊನೆಯ ಶನಿವಾರ ಶ್ರೀ ವೆಂಕಟರಮಣ ಸ್ವಾಮಿ ಅಲಂಕಾರ ಹಾಗೂ ಉತ್ಸವ ರಾಮದೇವರಿಗೆ ಬದರಿನಾರಾಯಣ ಅಲಂಕಾರ ನೆರವೇರಿಸಲಾಗುವುದು ಎಂದರು.

ಪ್ರತಿದಿನ ಅನ್ನದಾಸೋಹ; ಸಾವಿರಾರು ಭಕ್ತರಿಗೆ ಪ್ರಸಾದ

ಶ್ರಾವಣ ಮಾಸದ ಸಂದರ್ಭದಲ್ಲಿ ಪ್ರತಿದಿನ ಅನ್ನದಾಸೋಹ ನಡೆಯಲಿದ್ದು, ವಿಶೇಷವಾಗಿ ಶನಿವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಶ್ರಾವಣ ಮಾಸದಲ್ಲಿ ಸುಮಾರು 8ರಿಂದ 9 ಸಾವಿರ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡುವ ಉದ್ದೇಶವಿದೆ ಎಂದು ರಾಮಪ್ರಸಾದ್ ಹೇಳಿದರು.

ಅನ್ನದಾನ ಸಮಿತಿಯ ಸದಸ್ಯರು ಪ್ರತಿದಿನದ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹೊಸ ಸಮಿತಿ ದೇವಸ್ಥಾನದ ಪಾವಿತ್ರ್ಯ, ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಉಳಿಸಿಕೊಂಡು ಅಭಿವೃದ್ಧಿಯತ್ತ ಕೊಂಡೊಯ್ಯಲು ಬದ್ಧವಾಗಿದೆ. ಈ ಕಾರ್ಯಕ್ಕೆ ಅರ್ಚಕರು, ಭಕ್ತರು, ದಾನಿಗಳು ಹಾಗೂ ಮಾಧ್ಯಮಗಳ ಸಹಕಾರ ಅಗತ್ಯ ಎಂದು ದೇವೇಂದ್ರಪ್ಪ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಧರ್ಮದರ್ಶಿ ಸುನೀಲ್ ಎ.ಹೆಚ್ ಶ್ರೀಧರ್ ಮೂರ್ತಿ ನವಲೆ, ಚಂದ್ರಶೇಖರ್, ಆರ್. ರಾಜಶೇಖರ್, ಬಾಲಾಜಿ, ಮಹಾನಗರಪಾಲಿಕೆಯ ಮಾಜಿ ಸದಸ್ಯೆ ಹಾಗೂ ಮಹಿಳಾ ಸಮಿತಿ ಸದಸ್ಯೆ ರೇಖಾ ರಂಗನಾಥ್, ರೂಪಾ  ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


New committee resolution for Kote Anjaneya temple development; Special Puja in the month of Shravan   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close