SUDDILIVE || SHIVAMOGGA
ಬಾಳೆಗಿಡದಲ್ಲಿದ್ದ ಕಡ್ಜದ ಗೂಡಿನಿಂದ ದಾಳಿ: 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ನಿಧನ-Attack from a wasp nest on a banana plant: 8-year-old boy dies after treatment fails
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹತ್ತಿಸರ ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ ಕಡ್ಜದ ಹುಳಗಳ ದಾಳಿಗೆ ಒಳಗಾದ 8 ವರ್ಷದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಹತ್ತಿಸರ ಗ್ರಾಮದ ನಿವಾಸಿ ವೆಂಕಟೇಶ್ ಅವರ ಪುತ್ರ ನಿಷ್ಮಿತ್ (8) ಎಂದು ಗುರುತಿಸಲಾಗಿದೆ. ನಿಷ್ಮಿತ್ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮನೆಯ ಹಿಂಭಾಗದಲ್ಲಿದ್ದ ಬಾಳೆಗಿಡದಲ್ಲಿ ಕಡ್ಜದ ಹುಳಗಳ ಗೂಡು ಇತ್ತು ಎನ್ನಲಾಗಿದೆ.
ಘಟನೆಯ ವೇಳೆ ಬಾಲಕನಿಗೆ ಏಕಾಏಕಿ ಕಡ್ಜದ ಹುಳಗಳು ಕಚ್ಚಿದ್ದು, ತಕ್ಷಣ ಸ್ಥಳೀಯರು ಆತನನ್ನು ಹೆಗ್ಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಷ್ಮಿತ್ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಬಾಲಕನ ತಂದೆ ವೆಂಕಟೇಶ್ ಅವರಿಗೂ ಕಡ್ಜದ ಹುಳಗಳು ಕಚ್ಚಿದ್ದು, ಅವರು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಬಾಲಕನ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಈ ಘಟನೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

