ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೈಮೇಲೆ ಹತ್ತಿ ವಿಕೃತಿ – ವಿಡಿಯೋ ವೈರಲ್-Lethal assault on a person with an iron rod; perpetrator climbs onto the victim and acts in a depraved manner – video goes viral

 SUDDILIVE || RIPPONPETE

ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೈಮೇಲೆ ಹತ್ತಿ ವಿಕೃತಿ – ವಿಡಿಯೋ ವೈರಲ್-Lethal assault on a person with an iron rod; perpetrator climbs onto the victim and acts in a depraved manner – video goes viral.
Ripponpete, garthikere



ಹೊಸನಗರ: ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಗಾಯಾಳುವಿನ ಮೈಮೇಲೆ ಹತ್ತಿ ನಿಂತು ವಿಕೃತಿ ಮೆರೆದಿರುವ ಘಟನೆ ನಡೆದಿದೆ. ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಗರ್ತಿಕೆರೆ ಗ್ರಾಮದ ರಾಘವೇಂದ್ರ ಎಂಬಾತ ಕುಡಿದ ಮತ್ತಿನಲ್ಲಿ ಮಂಜುನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಡು ರಸ್ತೆಯಲ್ಲಿ ನಡೆದ ಹಲ್ಲೆಯ ವೇಳೆ ಕಬ್ಬಿಣದ ರಾಡ್‌ನಿಂದ ಮಂಜುನಾಥ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಯು ಬಳಿಕ ಅವರ ಮೈಮೇಲೆ ಹತ್ತಿ ನಿಂತು ಅಟ್ಟಹಾಸ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ.

1.26 ನಿಮಿಷದ ವಿಡಿಯೋ ವೈರಲ್

ಘಟನೆಗೆ ಸಂಬಂಧಿಸಿದ ಸುಮಾರು 1 ನಿಮಿಷ 26 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾರಿಯಲ್ಲಿ ಸಾಗುತ್ತಿದ್ದ ಕೆಲವರು ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಹಲ್ಲೆ ತಡೆಯಲು ಪ್ರಯತ್ನಿಸಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

ವಿಡಿಯೋದಲ್ಲಿ ಟೀ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿರುವ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ಹಿಡಿದು ಕೆಳಗೆ ಬಿದ್ದಿದ್ದ ವ್ಯಕ್ತಿಯ ಮೇಲೆ ನಿಂತಿರುವುದು ಕಾಣಿಸುತ್ತದೆ. ಗಾಯಾಳುವಿನ ಮೊಣಕಾಲಿನ ಭಾಗದಲ್ಲಿ ರಕ್ತದ ಕಲೆಗಳಿದ್ದು, ಆರೋಪಿಯು ಮತ್ತೆ ರಾಡ್‌ನಿಂದ ಹಲ್ಲೆ ನಡೆಸಿರುವ ದೃಶ್ಯವೂ ಸೆರೆಯಾಗಿದೆ. ಈ ವೇಳೆ ಆರೋಪಿ, ‘ಕೇಸ್ ಆದರೆ ಜೈಲಿಗೆ ಹೋಗುತ್ತೇನೆ’ ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.


ಇದೇ ವೇಳೆ ವೇಗವಾಗಿ ಕಾರೊಂದು ರಸ್ತೆಯಲ್ಲಿ ಹಾದುಹೋಗಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿ ಕಾರಿನಡಿ ಸಿಲುಕುವುದು ತಪ್ಪಿದೆ. ಬಳಿಕ ಆರೋಪಿಯು ಗಾಯಾಳುವಿನ ಕಾಲು ಹಿಡಿದು ರಸ್ತೆ ಬದಿಗೆ ಎಳೆದೊಯ್ದಿರುವ ದೃಶ್ಯವೂ ವಿಡಿಯೋದಲ್ಲಿದೆ.

ಶಿವಮೊಗ್ಗದ ಆಸ್ಪತ್ರೆಗೆ ದಾಖಲು

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಮಂಜುನಾಥ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸರು ರಾಘವೇಂದ್ರನನ್ನು ವಶಕ್ಕೆ ಪಡೆದಿದ್ದು, ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Lethal assault on a person with an iron rod; perpetrator climbs onto the victim and acts in a depraved manner – video goes viral

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close