ಶಿವಮೊಗ್ಗದಲ್ಲಿ ಎಬಿವಿಪಿ ಕಾರ್ಯಕ್ರಮ: ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಂಘಟನೆಗಳ ಪಾತ್ರ ಮಹತ್ವದ್ದು-ABVP event in Shivamogga: Organizations play a significant role in shaping students' personalities.

SUDDILIVE || SHIVAMOGGA

ಶಿವಮೊಗ್ಗದಲ್ಲಿ ಎಬಿವಿಪಿ ಕಾರ್ಯಕ್ರಮ: ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಂಘಟನೆಗಳ ಪಾತ್ರ ಮಹತ್ವದ್ದು-ABVP event in Shivamogga: Organizations play a significant role in shaping students' personalities.   


ಶಿವಮೊಗ್ಗ: ವಿದ್ಯಾರ್ಥಿ ಜೀವನವು ಭವಿಷ್ಯವನ್ನು ರೂಪಿಸಿಕೊಳ್ಳುವ ಪ್ರಮುಖ ಹಂತವಾಗಿದ್ದು, ಈ ಅವಧಿಯಲ್ಲಿ ಉತ್ತಮ ಸಂಸ್ಕಾರ, ಶಿಸ್ತು, ನಾಯಕತ್ವ ಗುಣ ಹಾಗೂ ದೇಶದ ಬಗ್ಗೆ ಜವಾಬ್ದಾರಿಯ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಶಿವಮೊಗ್ಗದ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕ್ರಮದಲ್ಲಿ ಮಾತನಾಡಿದ RSS ನ ನಗರ ಸಂಚಾಲಕ ಲೋಕೇಶ್ವರ್ ಕಾಳೆ, ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರದ ಭವಿಷ್ಯದ ದೃಷ್ಟಿಕೋನ ರೂಪಿಸುವಲ್ಲಿ ಸಂಘಟನೆಗಳ ಪಾತ್ರವನ್ನು ವಿವರಿಸಿದರು.

ಎಬಿವಿಪಿ ಸಂಘಟನೆಯು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಜತೆಗೆ ಅವರ ಮುಂದಿನ ಜೀವನಕ್ಕೆ ಅಗತ್ಯವಾದ ನಾಯಕತ್ವ ಮತ್ತು ವ್ಯಕ್ತಿತ್ವವನ್ನು ರೂಪಿಸುವ ವೇದಿಕೆಯಾಗಿದೆ. ಪಿಯುಸಿ, ಪದವಿ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣದ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ದಿಕ್ಕು ತೋರಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದು ತಿಳಿಸಿದರು.

ಯಾವುದೇ ದೊಡ್ಡ ನಿರ್ಧಾರದ ಹಿಂದೆ ಸಾಕಷ್ಟು ಚಿಂತನೆ, ಮಂಥನ ಹಾಗೂ ದೂರದೃಷ್ಟಿ ಅಡಗಿರುತ್ತದೆ. 1949ರಲ್ಲಿ ಎಬಿವಿಪಿ ಆರಂಭಗೊಳ್ಳುವ ಹಿಂದೆ ಕೂಡ ಇಂತಹ ಹಲವು ವಿಚಾರಗಳು ಮತ್ತು ದೇಶದ ಭವಿಷ್ಯದ ಕುರಿತು ಚಿಂತನೆಗಳು ಇದ್ದವು ಎಂದು ಹೇಳಿದರು.

ಸಾಮಾನ್ಯ ಹಿನ್ನೆಲೆಯಿಂದ ರಾಷ್ಟ್ರಮಟ್ಟದ ನಾಯಕತ್ವ

ಎಬಿವಿಪಿ ಮೂಲಕ ಸಾಮಾನ್ಯ ಹಿನ್ನೆಲೆಯಿಂದ ಬಂದ ಅನೇಕ ವಿದ್ಯಾರ್ಥಿಗಳು ಮುಂದೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಸಂಘಟನೆಯ ಮೂಲಕ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ದೇಶ ಸೇವೆಯ ಧ್ಯೇಯದೊಂದಿಗೆ ಮುನ್ನಡೆದ ಅನೇಕರು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ವಕ್ತಾರರು ಹೇಳಿದರು.

ಕಡುಬಡತನದ ನಡುವೆಯೂ ವಿದ್ಯಾಭ್ಯಾಸ ಮಾಡಿಕೊಂಡು ಸಂಘಟನೆಯೊಂದಿಗೆ ಬೆರೆತು, ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡು ಮುಂದೆ ಬಂದವರ ಉದಾಹರಣೆಗಳು ಸಾಕಷ್ಟಿವೆ. ಸಂಘಟನೆ, ವ್ಯಕ್ತಿತ್ವ, ದೇಶ ಹಾಗೂ ಧ್ಯೇಯ ಎಂಬ ವಿಚಾರಗಳನ್ನು ಮುಂದಿಟ್ಟುಕೊಂಡು ಸಾಗಿದ ಪರಿಣಾಮ ಸಮಾಜ ಮತ್ತು ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗಿದೆ ಎಂದರು.

ಶಾರ್ಟ್‌ಕಟ್‌ಗಿಂತ ಸರಿಯಾದ ದಾರಿ ಮುಖ್ಯ

ಜೀವನದಲ್ಲಿ ಯಾವುದೇ ಗುರಿ ತಲುಪಲು ಶಾರ್ಟ್‌ಕಟ್‌ ಹುಡುಕುವುದಕ್ಕಿಂತ ಸರಿಯಾದ ಹಾಗೂ ನ್ಯಾಯಯುತ ಮಾರ್ಗದಲ್ಲಿ ಸಾಗುವುದು ಮುಖ್ಯ. ನಮ್ಮ ಹಿರಿಯರು, ಗುರುಗಳು, ಪುರಾಣಗಳು ಹಾಗೂ ನೀತಿಕಥೆಗಳು ಕೂಡ ಸುಲಭದ ಅಡ್ಡದಾರಿ ಹಿಡಿಯುವ ಬದಲು ಧರ್ಮ ಮತ್ತು ನ್ಯಾಯದ ಮಾರ್ಗದಲ್ಲಿ ಸಾಗುವ ಸಂದೇಶ ನೀಡಿವೆ ಎಂದು ಹೇಳಿದರು.

ಗುರಿ ತಲುಪಲು ದಾರಿ ಸ್ವಲ್ಪ ದೀರ್ಘವಾಗಿದ್ದರೂ ಪರವಾಗಿಲ್ಲ. ಆದರೆ ಅದು ನ್ಯಾಯಯುತ ಹಾಗೂ ಸುರಕ್ಷಿತವಾಗಿರಬೇಕು. ವಿದ್ಯಾರ್ಥಿಗಳು ಕೂಡ ತಮ್ಮ ಭವಿಷ್ಯ ರೂಪಿಸಿಕೊಳ್ಳುವಾಗ ತಾಳ್ಮೆ ಮತ್ತು ಪರಿಶ್ರಮಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ದೃಷ್ಟಿಕೋನ ಬೆಳೆಸಬೇಕು

ಇಂದಿನ ವಿದ್ಯಾರ್ಥಿಗಳು ಕೇವಲ ಸ್ಥಳೀಯ ಅಥವಾ ವೈಯಕ್ತಿಕ ವಿಚಾರಗಳಿಗೆ ಸೀಮಿತವಾಗದೆ, ದೇಶದ ಹಾಗೂ ಜಗತ್ತಿನ ಬೆಳವಣಿಗೆಗಳ ಬಗ್ಗೆ ವಿಶಾಲ ದೃಷ್ಟಿಕೋನ ಹೊಂದಬೇಕು. ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಘಟನೆಗಳನ್ನು ಅರ್ಥ ಮಾಡಿಕೊಂಡು, ಅವುಗಳ ಪರಿಣಾಮಗಳನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಉತ್ತಮ ಸಂಘಟನೆಯ ಒಡನಾಟ ಹಾಗೂ ಮಾರ್ಗದರ್ಶನ ದೊರೆತರೆ ಅವರ ಚಿಂತನೆ ಮತ್ತು ಕಾರ್ಯವೈಖರಿಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಒಂದು ಗಂಟೆಯ ಸಂಘದ ಸಂಸ್ಕಾರ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಸ್ಥಾನದಲ್ಲಿ ಪ್ರತಿದಿನ ಒಂದು ಗಂಟೆ ನಡೆಯುವ ಚಟುವಟಿಕೆಗಳ ಕುರಿತು ಮಾತನಾಡಿದ ಅವರು, ಆ ಒಂದು ಗಂಟೆ ಕೇವಲ ದೈಹಿಕ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ವ್ಯಕ್ತಿಯ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಅಗತ್ಯವಾದ ಸಂಸ್ಕಾರ ಮತ್ತು ಶಿಕ್ಷಣವನ್ನು ನೀಡುವ ಪ್ರಕ್ರಿಯೆಯಾಗಿದೆ ಎಂದು ವಿವರಿಸಿದರು.

ಸಂಘದ ಪರಿಸರದಲ್ಲಿ ಬೆಳೆದ ವಿದ್ಯಾರ್ಥಿಗಳು ಮುಂದೆ ದೇಶದ ದೊಡ್ಡ ಆಸ್ತಿಯಾಗಿ ರೂಪುಗೊಳ್ಳುವುದನ್ನು ಕಾಣಬಹುದು. ಶಿಸ್ತು, ರಾಷ್ಟ್ರಭಕ್ತಿ, ನಾಯಕತ್ವ, ಸೇವಾ ಮನೋಭಾವ ಹಾಗೂ ಜವಾಬ್ದಾರಿಯ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಸಂಘಟನೆಯ ಒಡನಾಟ ಸಹಕಾರಿಯಾಗಿದೆ ಎಂದರು.

ವಿಶ್ವಗುರುವಿನತ್ತ ಭಾರತದ ಪಯಣ

2026ರ ಭಾರತವನ್ನು ಗಮನಿಸಿದರೆ ದೇಶವು ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆದರೆ 15–20 ವರ್ಷಗಳ ಹಿಂದೆ ಇದೇ ಭಾರತವನ್ನು ವಿಶ್ವಗುರುವಿನ ಸ್ಥಾನಕ್ಕೆ ಯೋಗ್ಯ ರಾಷ್ಟ್ರವೆಂದು ಹೇಳುವ ಪರಿಸ್ಥಿತಿ ಇರಲಿಲ್ಲ. ದೇಶದ ಪ್ರಗತಿಯೊಂದಿಗೆ ವಿದ್ಯಾರ್ಥಿಗಳಲ್ಲಿಯೂ ರಾಷ್ಟ್ರೀಯ ಚಿಂತನೆ ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.

ಮಾರ್ಕ್ ಗೆ ಓಸ್ಕರ ಓದಬಾರದು ಸಾಮಾನ್ಯ ಪರಿಜ್ಞಾನ ಬೇಕು. ಪುಸ್ತಕದಲ್ಲಿ ಇರುವ ಎಲ್ಲಾ ವಿಷಯವನ್ನ ಓದಬೇಕು. ನ್ಯೂಸ್ ಪೇಪರ್ ಓದಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ವಿದ್ಯಾಭ್ಯಾಸವು ವಿದ್ಯಾರ್ಥಿಗಳನ್ನ ತಯಾರಿಸುವ ಮಿಷನ್ ಆಗಿರುವ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು‌. 

ಕಾರಂತರು ಓದಿದ್ದು SSLC  ಆದರೆ ಅವರ ಸಾಧನೆ ಅಪಾರವಾಗಿದೆ. ಒತ್ತಡವಿಲ್ಲದ ವಾತಾವರಣಬೇಕಿದೆ. ಬಿಜೆಪಿಯಿರುವ ರಾಜ್ಯದಲ್ಲಿ ಎನ್ ಇಪಿ ದೇಶದಲ್ಲಿ ಜಾರಿ ಮಾಡಲಾಗುತ್ತಿದೆ.  ದೇಶ ಎಂಬ ಕಲ್ಪನೆ ವಿದ್ಯಾರ್ಥಿ ಜೀವನದಲ್ಲಿ ಬೇಕಿದೆ ಎಂದರು. 

ನೀಟ್ ಪರೀಕ್ಷೆಯ ಹೋರಾಟದ ಬಗ್ಗೆ ಮಾತನಾಡಿದ ಅವರು ಹೋರಾಟದ ಹೆಸರನ್ನ ತೆಗೆದುಕೊಳ್ಳದೆ. ವಿಶ್ವದ ಎದುರು ದೇಶವನ್ನ‌ಕೆಟ್ಟದಾಗಿ ಬಿಂಬಿಸಲಾಯಿತು ಎಂದು ದೂರಿದರು.‌

ABVP event in Shivamogga: Organizations play a significant role in shaping students' personalities.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close